ಪತ್ರದ ಕೊನೆಯಲ್ಲಿ JUST FOR FUN ಎಂದು ಟೈಪಿಸಿದ್ದ ಕಿಡಿಗೇಡಿ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರ ಲೆಟರ್ ಹೆಡ್ ಮತ್ತು ಸಹಿಯನ್ನು ನಕಲಿ ಮಾಡಿ ಕಿಡಿಗೇಡಿಯೊಬ್ಬ ಸೃಷ್ಟಿಸಿದ್ದ ಹೆಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರ ಉಚ್ಛಾಟನೆ ಪತ್ರಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಸ್ವತಃ ಇಬ್ರಾಹಿಂ ಅವರೇ ನಕಲಿ ಪತ್ರ ಸೃಷ್ಟಿಸಿದ ಕಿಡಿಗೇಡಿ ವಿರುದ್ಧ ಬೆಂಗಳೂರಿನ ಜೆ.ಸಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಕಲಿ ಉಚ್ಚಾಟನೆ ಪತ್ರ ಸೃಷ್ಟಿ ಮಾಡಿದ್ದ ಕಿಡಿಗೇಡಿ, ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಉಚ್ಚಾಟನೆ ಮಾಡಿದ್ದಾರೆ ಎನ್ನಲಾದ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಇದು ಎಲ್ಲೆಡೆ ವೈರಲ್ ಆಗಿತ್ತು. ಇದು ತಮ್ಮ ಗಮನಕ್ಕೆ ಬಂದ ಕೂಡಲೇ ಇಬ್ರಾಹಿಂ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿಗಳ ಕಡೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
“ಕಿಡಿಗೇಡಿಗಳು ಸೃಷ್ಟಿ ಮಾಡಿರುವ ನಕಲಿ ಪತ್ರ ವೈರಲ್ ಆಗಿರುವುದರಿಂದ ನನಗೆ ಮತ್ತು ಪಕ್ಷಕ್ಕೆ ಮುಜುಗರ ಆಗಿದೆ. ಕಿಡಿಗೇಡಿಗಳು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ನಕಲಿ ಪತ್ರ ವೈರಲ್ ಆಗಿರುವುದರಿಂದ ನನ್ನ ವೈಯಕ್ತಿಕ ವರ್ಚಸ್ಸಿಗೆ ಧಕ್ಕೆ ಆಗಿದೆ. ಈ ರೀತಿ ನಕಲಿ ಪತ್ರ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು” ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಸಿಎಂ ಇಬ್ರಾಹಿಂ ಪೊಲೀಸರಿಗೆ ಮನವಿ ಮಾಡಿದ್ದಾರೆ. ದುಷ್ಕರ್ಮಿಗಳು ನಕಲಿ ಪತ್ರ ಕೊನೆಯಲ್ಲಿ JUST FOR FUN ಎಂದು ಟೈಪಿಸಿದ್ದರು. ಕೆಲವರು ಇದನ್ನು ತೆಗೆದು ಹಾಕಿ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಇದೇ ವೇಳೆ ಜೆ.ಸಿ.ನಗರ ಪೊಲೀಸರು ದೂರು ದಾಖಲಿಸಿಕೊಂಡು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನೊಂದೆಡೆ, ಆ ಕಿಡಿಗೇಡಿ ಯಾರೆಂದು ಪತ್ತೆಯಾಗಿದ್ದು, ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಇದೆ.ಇದಕ್ಕೂ ಮೊದಲು ಹಲವಾರು ಬಾರಿ ಜೆಡಿಎಸ್ ಪಕ್ಷ ಹಾಗೂ ನಾಯಕರನ್ನು ತೇಜೋವಧೆ ಮಾಡುವ ಪೋಸ್ಟುಗಳನ್ನು ಹಾಕಿ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.