ಬಿಕ್ಕಟ್ಟು ಶಮನಕ್ಕೆ ಹೈಕಮಾಂಡ್ ರಂಗಪ್ರವೇಶ; ಐಟಿ ದಾಳಿ ನಂತರ ಬೆಳಗಾವಿ ಬಿಸಿ
ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್‌ಗೆ ಸರಿಸಮನಾದ ಸ್ಥಾನಮಾನವನ್ನು ತಮಗೂ ನೀಡುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವರಿಷ್ಠರ ಮೇಲೆ ಒತ್ತಡ ತರಲು ಬಣ ರಾಜಕೀಯ ಆರಂಭಿಸಿದ್ದಾರೆ.
ಮುಂಬೈ ಕರ್ನಾಟಕದ 20ಕ್ಕೂ ಹೆಚ್ಚು ಪಕ್ಷದ ಶಾಸಕರನ್ನು ಬೆನ್ನಿಗೆ ಕಟ್ಟಿಕೊಂಡು ಉಪ ಮುಖ್ಯಮಂತ್ರಿ ಹುದ್ದೆಗಾಗಿ ಲಾಬಿ ಆರಂಭಿಸಿದ್ದಾರೆ. ಶಿವಕುಮಾರ್ ಅವರಿಗೆ ಸಿಕ್ಕಿರುವ ಸ್ಥಾನಮಾನಗಳನ್ನು ನೀವು ಪಡೆಯಲೇಬೇಕು ಎಂದು ಜಾರಕಿಹೊಳಿ ಕುಟುಂಬವು ಸತೀಶ್ ಅವರನ್ನು ಹುರಿದುಂಬಿಸಿದೆ.
ಅವರ ಕುಟುಂಬದಲ್ಲೇ ಇಬ್ಬರು ವಿಧಾನಸಭಾ ಬಿಜೆಪಿ ಸದಸ್ಯರು, ಒಬ್ಬರು ವಿಧಾನ ಪರಿಷತ್ತಿನ ಪಕ್ಷೇತರ ಸದಸ್ಯರಿದ್ದು, ಇಡೀ ಬೆಳಗಾವಿ ಜಿಲ್ಲೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿಕೊಂಡಿದ್ದಾರೆ.
ಡಿಕೆಶಿ ಮೇಲೆ ಸಿಟ್ಟು
ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಪ್ರಬಲ ಖಾತೆ ಹೊಂದಿದ್ದ ರಮೇಶ್ ಜಾರಕಿಹೊಳಿ ಅವರು ಅತ್ಯಾಚಾರ ಆರೋಪದ ಪ್ರಕರಣದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು.ಅಧಿಕಾರ ಕಳೆದುಕೊಳ್ಳಲು ಶಿವಕುಮಾರ್ ನಡೆಸಿದ ಹನಿಟ್ರ್ಯಾಪ್ ಕಾರಣವೆಂದು ಅವರ ಕುಟುಂಬ ರಾಜಕೀಯವಾಗಿ ಹಾಲಿ ಉಪ ಮುಖ್ಯಮಂತ್ರಿ ವಿರುದ್ಧ ಸಿಡಿದೆದ್ದಿದೆ.
ಶಿವಕುಮಾರ್ ಪ್ರಮುಖ ಹುದ್ದೆಗಳನ್ನು ಪಡೆದು ಸರ್ಕಾರದಲ್ಲಿ ಮುಖ್ಯಮಂತ್ರಿಗೆ ಸಮನಾಗಿ ಅಧಿಕಾರ ನಡೆಸುತ್ತಿರುವುದು ಈ ಕುಟುಂಬಕ್ಕೆ ಸಹಿಸಲಾಗುತ್ತಿಲ್ಲ.ಶಿವಕುಮಾರ್ ಅಷ್ಟೇ, ಪಕ್ಷ ಸಂಘಟನೆ ಹಾಗೂ ಒಂದು ಸಮುದಾಯದ ಬೆಂಬಲ ಇರುವಾಗ ಅವರಿಗೆ ನೀಡಿರುವ ಸಮಾನಾಂತರ ಹುದ್ದೆ ಪಡೆದುಕೊಳ್ಳಬೇಕು ಎಂದು ಸತೀಶ್ ಸಹೋದರರು ಪಟ್ಟು ಹಿಡಿದಿದ್ದಾರೆ.
ಪಟ್ಟುಹಿಡಿದಿರುವುದರ ಜತೆಗೆ ಸತೀಶ್ ಜಾರಕಿಹೊಳಿಗೆ ಬೆಂಬಲವಾಗಿ ನಿಲ್ಲಲು ಮುಂಬೈ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರ ತಂಡವನ್ನೇ ರಚಿಸಿ ವರಿಷ್ಠರ ಮೇಲೆ ಒತ್ತಡ ತರಿಸಿದ್ದಾರೆ.ಸಾರ್ವಜನಿಕವಾಗಿ ತಮ್ಮ ಹೋರಾಟ ಬಹಿರಂಗಗೊಳ್ಳಬೇಕು ಎಂದೇ ವಿಶ್ವ ವಿಖ್ಯಾತ ದಸರಾ ಮಹೋತ್ಸವ ನೋಡಲೆಂದೇ ಬೆಳಗಾವಿಯಿಂದ ಮೈಸೂರಿಗೆ ಸತೀಶ್ ನೇತೃತ್ವದಲ್ಲಿ ಶಾಸಕರ ತಂಡ ಪ್ರವಾಸ ಕೈಗೊಳ್ಳುವ ಯೋಜನೆ ರೂಪಿಸಿದ್ದರು.
ವೇಣುಗೋಪಾಲ್ ಎಂಟ್ರಿ
ಈ ವಿಷಯ ತಿಳಿಯುತ್ತಿದ್ದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ನಗರಕ್ಕೆ ವೇಣುಗೋಪಾಲ್ ಅವರನ್ನು ಕರೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೂಡಿ ಬಣ ರಾಜಕೀಯ ನಿಲ್ಲಿಸುವಲ್ಲಿ ತಾತ್ಕಾಲಿಕವಾಗಿ ಯಶಸ್ವಿಯಾಗಿದ್ದಾರೆ.
ಆದರೆ, ತಮ್ಮ ಪಟ್ಟನ್ನು ಜಾರಕಿಹೊಳಿ ಬಿಟ್ಟಿಲ್ಲ. ನಮಗೂ ಅಧಿಕಾರ ಕೊಡಿ. ನೀವು ಚುನಾವಣೆ ಸಂದರ್ಭಲ್ಲಿ ಕಾರ‍್ಯಾಧ್ಯಕ್ಷ ಸ್ಥಾನ ನೀಡಿದ್ದರಿಂದ ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಮಟ್ಟ ಹಾಕಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲ್ಲು ಸಾಧ್ಯವಾಯಿತು.ತಮಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ, ಮುಂಬರು ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಸಮುದಾಯ ಪಕ್ಷದ ಪರವಾಗಿ ಗಟ್ಟಿಯಾಗಿ ನಿಲ್ಲುತ್ತದೆ.ನಮಗೆ ಮುಂಬೈ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ಒತ್ತಾಯ ಮಾಡಿದ್ದಾರೆಯೇ ಹೊರತು, ಶಿವಕುಮಾರ್ ವಿರುದ್ಧ ಯಾವುದೇ ರೀತಿಯ ಗುರುತರ ಆರೋಪ ಹೊರಿಸುವ ಪ್ರಯತ್ನ ಮಾಡಿಲ್ಲ.
ಕಳೆದ ಕೆಲವು ದಿನಗಳ ಹಿಂದಷ್ಟೇ ಇದೇ ಸಮುದಾಯಕ್ಕೆ ಸೇರಿದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ, ಸಂಪುಟದಲ್ಲಿ ಮೂವರು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವಂತೆ ವರಿಷ್ಠರಿಗೆ ಬಹಿರಂಗವಾಗಿ ಮನವಿ ಮಾಡಿದ್ದರು.ಇದರ ಬೆನ್ನಲ್ಲೇ ಜಾರಕಿಹೊಳಿ ಕುಟುಂಬ ಉಪ ಮುಖ್ಯಮಂತ್ರಿ ಹುದ್ದೆಗಾಗಿ ಬಣ ರಾಜಕೀಯ ಮುಂದಿಟ್ಟುಕೊಂಡು ಬಹಿರಂಗವಾಗಿ ಅಖಾಡಕ್ಕಿಳಿದಿದೆ.