ಬಿಜೆಪಿ ಜತೆ ಮೈತ್ರಿಗೆ ಅಪಸ್ವರ ಎತ್ತಿದ ನಾಯಕ ಉಚ್ಛಾಟನೆ ಖಚಿತ; ಕೋರ್ ಕಮಿಟಿ ಸಭೆಯಲ್ಲಿ ಶಿಸ್ತು ಕ್ರಮ?
ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ರಾಜ್ಯಾಧ್ಯಕ್ಷ ಸಿ .ಎಂ.ಇಬ್ರಾಹಿಂ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಪಕ್ಷದಿಂದ ಉಚ್ಛಾಟಿಸಲು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ತೀರ್ಮಾನಿಸಿದ್ದಾರೆ.
ವಜಾ ಮತ್ತು ಉಚ್ಛಾಟನೆ ಮಾಡಲು ನಾಳೆ ತುರ್ತು ಕೋರ್ ಕಮಿಟಿ ಹಾಗೂ ಪಕ್ಷದ ಶಾಸಕರ ಸಭೆಯನ್ನು ಕರೆದಿದ್ದಾರೆ.
ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಪಕ್ಚ ಕೈಗೊಂಡ ತೀರ್ಮಾನದ ವಿರುದ್ಧವಾಗಿ ರಾಜ್ಯಾಧ್ಯಕ್ಷರು ನಡೆದುಕೊಳ್ಳುತ್ತಿರುವ ಬಗ್ಗೆ ಪೂರ್ಣ ಮಾಹಿತಿ ನೀಡಿ ತಮ್ಮನ್ನೇ ಪಕ್ಷದಿಂದ ಉಚ್ಛಾಟಿಸಲು ಮುಂದಾಗಿರುವ ಬಗ್ಗೆಯೂ ವಿವರಣೆ ನೀಡಿದ್ದಾರೆ.
ಆ ನಂತರ ಕುಮಾರಸ್ವಾಮಿ ಅವರು ಪಕ್ಷದ ಹಿರಿಯ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು.
ಇದಾದ ನಂತರ ದೇವೇಗೌಡರು ನಾಳೆ ತುರ್ತಾಗಿ ಸಭೆಗಳನ್ನು ನಡೆಸಿ ಕಾನೂನಾತ್ಮಕವಾಗಿ ಶಿಸ್ತು ಕ್ರಮ ಕೈಗೊಳ್ಳಲು ತೀರ್ಮಾನ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.