ಆದಾಯ ಮೀರಿದ ಆಸ್ತಿ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನ್ಯಾಯಾಲಯ ಗ್ರೀನ್ ಸಿಗ್ನಲ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಸಿಬಿಐ ತನಿಖೆ ಮುಂದುವರೆಯುವ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರು ತಡಮಾಡದೆ ರಾಜೀನಾಮೆ ಸಲ್ಲಿಸಬೇಕು. ಸಿಬಿಐ ತನಿಖೆ ನಡೆಯಲಿದೆ. ಉನ್ನತ ಹುದ್ದೆಯಲ್ಲಿರುವ ಡಿ.ಕೆ.ಶಿವಕುಮಾರರು ಸಾಕ್ಷ್ಯಾಧಾರಗಳನ್ನು ಮುಚ್ಚಿ ಹಾಕುವ ಎಲ್ಲ ಸಾಧ್ಯತೆ- ಸಂದರ್ಭಗಳಿವೆ. ಅವರು ಪ್ರಭಾವಿ ವ್ಯಕ್ತಿಯಾದ ಕಾರಣ ಸಾಕ್ಷಿ ನಾಶ ಮಾಡುವ ಸಾಧ್ಯತೆ ಎದ್ದು ಕಾಣುತ್ತದೆ ಎಂದು ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು, ಶಿವಕುಮಾರ್ ಅವರು ರಾಜೀನಾಮೆ ಕೊಡದಿದ್ದರೆ ಮುಖ್ಯಮಂತ್ರಿ ಅವರ ರಾಜೀನಾಮೆ ಪಡೆಯಲಿ. ಇಲ್ಲವಾದರೆ ನಾವು ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ ಎಂದರು.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ಕೊಡದಿದ್ದರೆ ನಾವು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಕೊಟ್ಟು ಒತ್ತಾಯಿಸಲಿದ್ದೇವೆ. ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐನಲ್ಲಿ ದಾಖಲಾಗಿದ್ದ ಕೇಸಿನ ತನಿಖೆ ಮಾಡಲು ತಡೆಯಾಜ್ಞೆ ತಂದಿದ್ದರು. ಆ ತಡೆಯಾಜ್ಞೆ ತೆರವುಗೊಳಿಸಿ ತನಿಖೆ ಮುಂದುವರೆಸಲು ಹೈಕೋರ್ಟ್ ಆದೇಶ ಕೊಟ್ಟಿದೆ ಎಂದು ತಿಳಿಸಿದರು.
ಇದರಿಂದ ನ್ಯಾಯಕ್ಕೆ ಬೆಲೆ ಸಿಕ್ಕಿದೆ. ಈ ಆದೇಶದಿಂದ ಡಿ.ಕೆ.ಶಿವಕುಮಾರರಿಗೆ ಹಿನ್ನಡೆ ಆಗಿರಬಹುದು ಅಥವಾ ಬೇಸರ ಆಗಿರಬಹುದು. ಆದರೆ, ಸಿದ್ದರಾಮಯ್ಯರಿಗೆ ತುಂಬ ಖುಷಿಯಾಗಿದೆ.
ಸಿದ್ದರಾಮಯ್ಯರನ್ನು ಹೇಗಾದರೂ ಮನೆಗೆ ಕಳುಹಿಸಿ ನಾನು ಮುಖ್ಯಮಂತ್ರಿ ಆಗಬೇಕೆಂದು ಶಿವಕುಮಾರ್ ಪ್ರಯತ್ನ ಮಾಡಿದರೆ, ಈತ ಹೇಗಾದರೂ ಮತ್ತೆ ಜೈಲಿಗೆ ಹೋದರೆ ನನಗೆ ಅನುಕೂಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿರುವುದಾಗಿ ನಿನ್ನೆವರೆಗೂ ಮಾತುಗಳು ಕೇಳಿಸಿದ್ದವು. ಇವತ್ತು ಸಿದ್ದರಾಮಯ್ಯನವರ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಕಾಣುತ್ತಿದೆ ಎಂದರು.
ಬಿಜೆಪಿ ನಾಯಕರು ಸುಳ್ಳಮಳ್ಳ ನಾಯಕರು ಎಂಬ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸುಳ್ಳ ಯಾರು ಮಳ್ಳ ಯಾರೆಂದು ಬೆಂಗಳೂರಿನ ಜನರು ಹೇಳುತ್ತಾರೆ. ಮೆತ್ತಮೆತ್ತಗೆ ಏನೇನು ಮಾಡುತ್ತಾರೋ ಅವರನ್ನು ಮಳ್ಳ ಎನ್ನುತ್ತಾರೆ.
ರಾಮಲಿಂಗಾರೆಡ್ಡಿಯವರೇ ನಿಮ್ಮನ್ನೇ ಎಲ್ಲರೂ ಮಳ್ಳ ಎಂದು ಹೇಳುತ್ತಿದ್ದಾರೆ. ಸುಳ್ಳ ಎಂದು ಸಿದ್ದರಾಮಯ್ಯ ಮತ್ತು ಕ್ಯಾಂಪ್ ಪ್ರಸಿದ್ಧಿ ಪಡೆದಿದೆ ಎಂದು ತಿರುಗೇಟು ನೀಡಿದರು. ಸುಳ್ಳಮಳ್ಳ ಪಟ್ಟ ನಿಮಗೇ ಇರಲಿ ಎಂದು ತಿಳಿಸಿದರು.