ಆಪ್ತರ ವಿಶ್ ಮಾಡುತ್ತಾ ಬೀಗಿದ ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ಮುಂಬರುವ ವಿಜಯದಶಮಿ ವೇಳೆಗೆ ರಾಜ್ಯದಲ್ಲಿ ಸರ್ಕಾರ ಬದಲಾವಣೆಯಾಗಿ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಪ್ತ ವರ್ಗಕ್ಕೆ ಸಂದೇಶ ರವಾನಿಸಿದ್ದಾರೆ.
ಆಯ್ದ ಕೆಲವು ಮಾಧ್ಯಮ ಮಿತ್ರರು ಹಾಗೂ ಆಪ್ತ ಬಳಕ್ಕೆ ಸ್ವತಃ ತಾವೇ ದೂರವಾಣಿ ಮಾಡಿ ವಿಜಯದಶಮಿ ಹಬ್ಬದ ಶುಭಾಶಯ ಹೇಳಿದ್ದಲ್ಲದೆ, ಮುಂದಿನ ವರ್ಷ ಮುಖ್ಯಮಂತ್ರಿಯಾಗಿ ಶುಭಾಶಯ ಕೋರುವುದಾಗಿ ಆವರು ಭವಿಷ್ಯ ನುಡಿದಿದ್ದಾರೆ.
ಶಿವಕುಮಾರ್ ರವಾನಿಸಿರುವ ಈ ಸಂದೇಶ ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ್ದು, ಸರ್ಕಾರ ರಚನೆ ಸಂದರ್ಭದಲ್ಲಿ ಎಐಸಿಸಿ ಮಧ್ಯೆ ಪ್ರವೇಶಿಸಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ನಾಯಕತ್ವದ ಕಗ್ಗಂಟನ್ನು ಬಿಡಿಸಿಟ್ಟಿದ್ದರು.
ದೆಹಲಿಯ ಸೂತ್ರದಂತೆ ಸಿದ್ದರಾಮಯ್ಯ ಮೊದಲ ಅವಧಿಗೆ ಅಂದರೆ ಎರಡು ವರ್ಷಕ್ಕೆ. ನಂತರ ಉಳಿದ ಮೂರು ವರ್ಷಗಳ ಅವಧಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುವುದಾಗಿತ್ತು.
ಅಷ್ಟೇ ಅಲ್ಲ, ಅಧಿಕಾರ ಹಂಚಿಕೆ ಹಾಗೂ ಸರ್ಕಾರದ ಪಾಲುದಾರಿಕೆ ಬಗ್ಗೆಯೂ ಎಐಸಿಸಿ ಮಾಡಿದ ಸೂತ್ರಕ್ಕೆ ಉಭಯ ನಾಯಕರು ಸಮ್ಮತಿಸಿದ್ದರು.
ಮುಂದಿನ ವಿಜಯದಶಮಿ ವೇಳೆಗೆ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ಕೇವಲ ೧೬ ತಿಂಗಳಷ್ಟೇ ಕಳೆದಿರುತ್ತದೆ. ಸೂತ್ರದಂತೆ ನಾಯಕತ್ವ ಬದಲಾವಣೆಗೆ ಇನ್ನೂ ಸಮಯ ಇರುತ್ತದೆ.
ಆದರೂ ಶಿವಕುಮಾರ್ ಏಕೆ ಈ ಸಂದೇಶ ರವಾನಿಸಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿಯ ಮುಸುಕಿನ ಗುದ್ದಾಟ ಹೊರ ಬರುತ್ತಿದ್ದಂತೆ ಶಿವಕುಮಾರ್ ಆಪ್ತ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸವರಾಜ್ ಶಿವಗಂಗಾ ಅವರು, ನಮ್ಮ ನಾಯಕ ಡಿ.ಕೆ.ಶಿ ಅವರಿಗೆ ವಿಧಾನಸಭೆಯಲ್ಲಿ ಪಕ್ಷದ ೭೩ ಶಾಸಕರ ಬೆಂಬಲವಿದೆ ಎಂದು ಏಕಾಏಕಿ ಹೇಳಿಕೆ ನೀಡಿ ರಾಜಕೀಯವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತರು ನಮ್ಮ ನಾಯಕರಿಗೆ ಹೆಚ್ಚು ಸದಸ್ಯರ ಬೆಂಬಲವಿದೆ. ಅವರು ಸೂಚಿಸಿದವರೇ ಅಧಿಕಾರ ಬದಲಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂಬ ಸಂದೇಶವನ್ನು ಶಿವಕುಮಾರ್ ಪಾಳಯಕ್ಕೆ ನೀಡಿದ್ದರು.
ತದ ನಂತರ ಶಿವಕುಮಾರ್ ಅವರು ಸಿಎಲ್‌ಪಿಯಲ್ಲಿ ತಮ್ಮ ಬಲ ಹೆಚ್ಚಿಸಿಕೊಳ್ಳಲು ನಿರಂತರ ಕಸರತ್ತು ನಡೆಸುತ್ತಿದ್ದಾರೆ. ಅದು ಅವರಿಗೆ ಒಂದು ಹಂತದಲ್ಲಿ ಫಲ ಕೊಟ್ಟಂತಿದೆ.
ಇದಕ್ಕೆ ಎಐಸಿಸಿಯ ಮಾಜಿ ಪ್ರಧಾನಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕೆಲವು ಹಿರಿಯ ಸಚಿವರು ಡಿ.ಕೆ.ಶಿ. ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿಯೇ ಶಿವಕುಮಾರ್ ಅವರು ಇಂತಹ ಸಂದೇಶ ನೀಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.