ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸರ್ಕಾರದ ಮಟ್ಟದಲ್ಲೇ ದೊಡ್ಡ ಷಡ್ಯಂತರ ನಡೆದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಾಯಕನ ಆಯ್ಕೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲವನ್ನು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪ್ರಸಕ್ತ ಅವಧಿಯನ್ನು ಸಮನಾಗಿ ಹಂಚಿಕೊಳ್ಳುವ ಎಐಸಿಸಿಯ ಸೂತ್ರಕ್ಕೆ ತಲೆಬಾಗಿದ್ದರು.
ಇದರಂತೆ ಸಿದ್ದರಾಮಯ್ಯ ಈಗಾಗಲೇ ಮುಖ್ಯಮಂತ್ರಿಯಾಗಿ ೫ ತಿಂಗಳ ಆಡಳಿತ ಪೂರ್ಣಗೊಳಿಸಿದ್ದಾರೆ. ಅಷ್ಟೇ ಅಲ್ಲ, ಚುನಾವಣಾ ಸಂದರ್ಭದಲ್ಲಿ ನೀಡಿದ್ದ ೫ ಗ್ಯಾರಂಟಿ ಭರವಸೆಗಳನ್ನು ಬಹುತೇಕ ಈಡೇರಿಸಿದ್ದಾರೆ.
ಇದರ ನಡುವೆ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿಯನ್ನು ಮೊಟಕುಗೊಳಿಸಿ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಗಾದಿಗೆ ತರುವ ಯತ್ನ ಕಾಂಗ್ರೆಸ್‌ನಲ್ಲೇ ನಡೆದಿದ್ದರೆ, ಮತ್ತೊಂದೆಡೆ ಸೂತ್ರದಂತೆ ಅಧಿಕಾರ ದೊರಕದಂತೆ ಮಾಡಲು ಮುಖ್ಯಮಂತ್ರಿ ಅವರ ಆಪ್ತರ ಬಣ ಟೊಂಕ ಕಟ್ಟಿ ನಿಂತಿದೆ.
ಸರ್ಕಾರದ ಮಟ್ಟದಲ್ಲೇ ನಡೆಯುತ್ತಿರುವ ತಂತ್ರಗಾರಿಕೆ
ಕಳೆದ ಎರಡು ದಿನಗಳಿಂದ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ್ದ ಸಚಿವರು, ಶಾಸಕರು ನಿರಂತರ ಔತಣಕೂಟ ಸಭೆಗಳನ್ನು ನಡೆಸಿ ಶಿವಕುಮಾರ್‌ಗೆ ಅಧಿಕಾರ ತಪ್ಪಿಸಲು ದೊಡ್ಡ ಷಡ್ಯಂತರವೇ ನಡೆದಿದೆ.
ಮೊದಲು ಸ್ಯಾಂಕಿಟ್ಯಾಂಕಿ ರಸ್ತೆಯಲ್ಲಿರುವ ಸಪ್ತ ಸಚಿವರ ವಸತಿಗೃಹದಲ್ಲಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿ ಹೊಳಿ ಆನಂತರ ಸಹಕಾರ ಸಚಿವ ರಾಜಣ್ಣ, ನಿನ್ನೆ ರಾತ್ರಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆಯಲ್ಲಿ ಔತಣ ಕೂಟ ನಡೆದಿದ್ದು, ಎಲ್ಲಾ ಸಭೆಗಳಲ್ಲೂ ಮುಖ್ಯಮಂತ್ರಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.
ಸರಣಿ ಔತಣಕೂಟಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ದೂರ ಇಟ್ಟಿದ್ದಾರೆ. ಈ ಸಭೆಗಳಲ್ಲಿ ಎಸ್ಸಿ ಎಸ್ಟಿ ಸಮಾಜಕ್ಕೆ ಸೇರಿದ ಸಚಿವರು, ಶಾಸಕರಷ್ಟೇ ಭಾಗಿಯಾಗಿದ್ದರು.
ಶಿವಕುಮಾರ್ ಮತ್ತು ಅವರ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ಎಲ್ಲಾ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲ, ಅವರ ಆಪ್ತ ಸಚಿವ ಶಾಸಕರ ಒತ್ತಡವೂ ಹೆಚ್ಚಿದೆ. ನಮ್ಮ ಇಲಾಖೆಗಳಲ್ಲಿ ಹಸ್ತಕ್ಷೇಪವೇ ನಡೆದರೆ, ನಮಗೇನು ಕೆಲಸವಿರುತ್ತದೆ. ಇದಕ್ಕೆ ಕಡಿವಾಣ ಹಾಕಿ ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.
ಅಧಿಕಾರ ಸೂತ್ರವನ್ನು ಶಿವಕುಮಾರ್ ಅವರು ಉಲ್ಲಂಘನೆ ಮಾಡಲು ಹೊರಟಂತಿದೆ. ಉಪ ಮುಖ್ಯಮಂತ್ರಿ ದೊರೆತೆ ಇಷ್ಟು ಆರ್ಭಟ ನಡೆಯುತ್ತಿದೆ.
ಇನ್ನೂ ಮುಖ್ಯಮಂತ್ರಿ ಸ್ಥಾನ ದೊರೆತರೆ ಗತಿಯೇನು? ನಿಮ್ಮ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಐದು ವರ್ಷ ನೀವೇ ಮುಖ್ಯಮಂತ್ರಿಯಾಗಿರಿ. ಮುಂದಿನ ಅವಧಿಗೆ ಹೈಕಮಾಂಡ್ ಬೇರೆ ತೀರ್ಮಾನ ಮಾಡಿಕೊಳ್ಳಲಿ ಎಂದಿದ್ದಾರೆ.
ಒಂದು ವೇಳೆ ವರಿಷ್ಠರ ತೀರ್ಮಾನಕ್ಕೆ ತಲೆಬಾಗಿದರೆ, ನಾವು ಪರ‍್ಯಾಯ ನಾಯಕತ್ವ. ಅದರಲ್ಲೂ ನಮ್ಮ ಸಮುದಾಯದವರಿಗೆ ಅವಕಾಶ ದೊರೆಯಲಿ ಅದಕ್ಕೆ ನಾವು ಬೆಂಬಲವಾಗಿ ನಿಲ್ಲುತ್ತೇವೆ ಎನ್ನುವ ಮೂಲಕ ಶಿವಕುಮಾರ್ ವಿರುದ್ಧ ಅಪಸ್ವರ ಎತ್ತಿದ್ದಾರೆ.
ಎಲ್ಲರ ಮಾತನ್ನು ಆಲಿಸಿದ ಮುಖ್ಯಮಂತ್ರಿ ಅವರು, ಸದ್ಯಕ್ಕೆ ನನ್ನ ಕೈ ಕಟ್ಟಿ ಹಾಕಲಾಗಿದೆ. ಯಾವುದೇ ರಾಜಕೀಯ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.
ಎಐಸಿಸಿ ಅಧ್ಯಕ್ಷರಿಂದ ನಮಗೆ ಸೂಕ್ತ ಸಹಕಾರ ಸಿಗುತ್ತಿಲ್ಲ. ಮತ್ತೊಂದೆಡೆ ಕೇಂದ್ರ ಸರ್ಕಾರ ಆದಾಯ ತೆರಿಗೆ ದಾಳಿ ನಡೆಸುವ ಮೂಲಕ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದೆ.
ಈಗ ಯಾರಿಗೂ ಉಪ ಮುಖ್ಯಮಂತ್ರಿ ಹುದ್ದೆ ಅಥವಾ ಇನ್ಯಾವುದೇ ಹುದ್ದೆ ನೀಡಲು ಸಾಧ್ಯವಿಲ್ಲ. ಮುಂದೆ ನೋಡೋಣ ಎಂದು ತಿಳಿಸಿದ್ದಾರೆ. ಆದರೆ, ಅವರ ಮಾತಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಔತಣಕೂಟದಲ್ಲಿ ಭಾಗವಹಿಸಿದ್ದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ, ಬಿ.ನಾಗೇಂದ್ರ ಅವರು ಪ್ರತ್ಯೇಕವಾಗಿ ಮಾತನಾಡಿ, ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ.
ಅಧಿಕಾರ ಹಂಚಿಕೆ ಸಂಬಂಧಿಸಿದಂತೆ ನಮಗೇನೂ ತಿಳಿದಿದಲ್ಲ. ಸಮಯ ಸಂದರ್ಭ ನೋಡಿ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ರಾಜಣ್ಣ ತಿಳಿಸಿದ್ದಾರೆ.
ಆಪರೇಷನ್ ಕಮಲ, ಆಪರೇಷನ್ ಹಸ್ತಾ ಎರಡೂ ನಡೆಯುತ್ತಿದೆ. ಜೆಡಿಎಸ್‌ನ ಮೂರನೇ ಎರಡರಷ್ಟು ಶಾಸಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಅವರು ಲೋಕಸಭಾ ಚುನಾವಣೆಗೂ ಮುನ್ನ ನಮ್ಮ ಪಕ್ಷದ ಕೈ ಹಿಡಿಯಬಹುದು ಎಂದಿದ್ದಾರೆ.
ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷ ಕೆಲವು ಶಾಸಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅದು ಅವರ ಅಭಿಪ್ರಾಯವಷ್ಟೇ. ತೀರ್ಮಾನವಲ್ಲ. ಹೇಳಿಕೊಂಡು ತಿರುಗುತ್ತಿದ್ದಾರೆ. ತಿರುಗಲಿ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಮಹದೇವಪ್ಪ ಮಾತನಾಡಿ, ಸಿಎಂ ಹುದ್ದೆ ಖಾಲಿ ಇಲ್ಲ. ಸಿದ್ದರಾಮಯ್ಯ ಅವರು ಪೂರ್ಣಾವಧಿ ವರೆಗೂ ಇರುತ್ತಾರೆ ಎಂದು ಚುಟುಕಾಗಿ ಹೇಳಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡುತ್ತೀರ ಎಂಬ ಪ್ರಶ್ನೆಗೆ ಬುದ್ಧಿ ಇಲ್ಲದವರು ಹೇಳುತ್ತಾರೆ ಎಂದು ಖಾರವಾಗಿ ನುಡಿದಿದ್ದಾರೆ.