ಹೊಸ ಬಾಂಬ್ ಸಿಡಿಸಿದ ಜಾರಕಿಹೊಳಿ
ಬೆಂಗಳೂರು: ಮಹಾರಾಷ್ಟ್ರ ಮಾದರಿಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಹೋದರ ಮಾಜಿ ಸಚಿವ ಮತ್ತು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇಂದಿಲ್ಲಿ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕದ ಏಕನಾಥ್ಸಿಂಧೆ ಯಾರು ಎಂದು ಬಹಿರಂಗಪಡಿಸದಿದ್ದರೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಜಿ ಆಗುವುದಾಗಿ ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಔತಣಕೂಟದ ಸಭೆಗಳನ್ನು ನಡೆಸಿದ ಬೆನ್ನಲ್ಲೇ ರಮೇಶ್ ಇಂತಹ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ತುರ್ತು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರ ಪತನದ ಮಾಹಿತಿ ನೀಡಿದ್ದಲ್ಲದೆ, ನ್ಯಾವ್ಯಾರೂ ಈ ಸರ್ಕಾರವನ್ನು ಬೀಳಿಸುತ್ತಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಇಲ್ಲಿಯೂ ಆಗುತ್ತದೆ.
ಬಿಜೆಪಿ ಆಪರೇಷನ್ ಕಮಲದಿಂದ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನವಾಗಲಿಲ್ಲ. ಶಿವಕುಮಾರ್ ಅವರ ದುರಂಹಕಾರದ ವರ್ತನೆ ಪ್ರತಿಭಟಿಸಿ ಹೊರಬಂದ ಕಾರಣ ಅಂದು ಸರ್ಕಾರ ಪತನಗೊಂಡಿತು.
ಬೆಳಗಾವಿ ರಾಜಕೀಯವೇ ಸರ್ಕಾರಕ್ಕೆ ಕಂಟಕ
ಬೆಳಗಾವಿ ರಾಜಕೀಯವೇ ಇಂದಿನ ಸರ್ಕಾರದ ಪತನಕ್ಕೂ ಮೂಲ ಕಾರಣವಾಗುತ್ತದೆ ಎಂದ ರಮೇಶ್, ಯಾವಾಗ, ಏನಾಗಲಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಲಿಲ್ಲ.
ಕುಮಾರಸ್ವಾಮಿ ಅವರ ಆತ್ಮೀಯನಾಗಿರುವುದಕ್ಕೆ ಡಿಕೆಶಿ ನನ್ನ ವಿರುದ್ಧ ಹುನ್ನಾರ ನಡೆಸುತ್ತಿದ್ದಾರೆ. ನಿತ್ಯ ಡಿಕೆಶಿ ನಾಟಕ ಮಂಡಳಿ ಆಪರೇಷನ್ ಕಮಲ ಮಾಡುತ್ತಿರುವ ಬಗ್ಗೆ ಮಾತನಾಡುತ್ತಿದೆ.
ಮೈತ್ರಿ ಸರಕಾರ ಬಿದ್ದಾಗ ಬಿಜೆಪಿಯೇನೂ ನಮ್ಮನ್ನು ಆಪರೇಷನ್ ಮಾಡಿರಲಿಲ್ಲ. ನಾವೇ ಮೈತ್ರಿ ಸರಕಾರ ತೆಗೆದು ಬಿಜೆಪಿಗೆ ಸೇರಿದೆವು.
ಈಗ ಬಿಜೆಪಿ ಹೆಸರು ಕೆಡಿಸಲು ಡಿಕೆಶಿ ನಾಟಕ ಮಂಡಳಿ ಹೆಣಗಾಡುತ್ತಿದೆ. ಬಿಜೆಪಿ ಹೆಸರು ಕೆಡಿಸಲು ಡಿಕೆಶಿ ನಾಟಕ ಮಂಡಳಿ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ದೂರಿದರು.
ಸುಳ್ಳು ಗ್ಯಾರಂಟಿ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಎಲ್ಲ ರಂಗದಲ್ಲೂ ಫೇಲ್ ಆಗಿದೆ. ಸರಕಾರ ಪತನ ಆಗುವುದು ಬೇಡ, ಮುಂದುವರೆಯಲಿ. ಕಾಂಗ್ರೆಸ್ ಶಾಸಕರೇ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಡಿಕೆಶಿ ಇರುವ ಸರಕಾರ ಯಾವಾಗಲೂ ಡೇಂಜರ್. ಡಿಕೆಶಿ ಅಧಿಕಾರ ಇದ್ದಾಗ ಒಂದು ರೀತಿ ಇರುತ್ತಾರೆ, ಪ್ರತಿಪಕ್ಷದಲ್ಲಿದ್ದಾಗ ಇನ್ನೊಂದು ರೀತಿ ಇರುತ್ತಾರೆ.
ಡಿಕೆಶಿಯೇ ಸಿಡಿ ಮಾಸ್ಟರ್, ಅದೇ ಅವರ ಶಕ್ತಿ. ಸಿಡಿ ಇಟ್ಟುಕೊಂಡೇ ರಾಜಕಾರಣ ಮಾಡುತ್ತಾರೆ ಎಂದು ಆರೋಪಿಸಿದರು.
ಸಿಡಿ ಇಟ್ಟುಕೊಂಡು ನೆಲಮಂಗಲ ಮಾಜಿ ಶಾಸಕ ನಾಗರಾಜ್ಗೆ ಡಿಕೆಶಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.ನಿನ್ನ ಹಾಗೂ ರಮೇಶ್ ಜಾರಕಿಹೊಳಿದು ಬಹಳಷ್ಟಾಗಿದೆ. ಎಸ್ಐಟಿ ಕ್ಯಾನ್ಸಲ್ ಮಾಡಿ ಮರು ತನಿಖೆಗೆ ಆದೇಶಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಎಷ್ಟೇ ಸಿಡಿ ಬಂದರೂ ನಾನು ಹೆದರಲ್ಲ. ಮರು ತನಿಖೆ ಆದರೆ ಸಿಬಿಐನಿಂದ ಆಗಲಿ ಎಂದು ನಾನು ಕೋರ್ಟ್ ಮೊರೆ ಹೋಗುವೆ ಎಂದು ಅವರು ಡಿಕೆಶಿ ಮೇಲೆ ವಾಗ್ದಾಳಿ ನಡೆಸಿದರು.
ವಿನಾಕಾರಣ ನನ್ನ ಮೇಲೆ ಡಿಕೆಶಿ ಹಗೆತನ ಸಾಧಿಸುತ್ತಿದ್ದಾರೆ. ಹೆಚ್ಡಿಕೆ ಜತೆಗೆ ಆಪ್ತನಾಗುತ್ತಿರುವುದಕ್ಕೆ ಡಿಕೆಶಿ ನನ್ನ ವಿರುದ್ಧ ಹುನ್ನಾರ ಮಾಡುತ್ತಿದ್ದಾರೆ. ಒಂದೇ ರಾತ್ರಿಯಲ್ಲಿ ಬೆಳವಣಿಗೆ ಆಗಿ ಸರಕಾರ ಪತನವಾಗಲಿದೆ ಎಂದರು.
ರಮೇಶ್ ಜಾರಕಿಹೊಳಿ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದ ಜನ ಚುನಾವಣೆಯಲ್ಲಿ ಏನು ತೀರ್ಪು ನೀಡಬೇಕೋ ನೀಡಿದ್ದಾರೆ. ನಮಗೆ ಮಾಡಲು ಅನೇಕ ಕೆಲಸಗಳಿವೆ. ಆ ಕೆಲಸ ಮಾಡುತ್ತಿದ್ದೇವೆ ಎಂದಷ್ಟೇ ತಿಳಿಸಿದರು. ಹೆಚ್ಚಿನ ಪ್ರತಿಕ್ರಿಯೆ ನೀಡಲು ಆಸಕ್ತಿ ತೋರಲಿಲ್ಲ.