ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು
ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸುವ ಬದಲು ದೆಹಲಿ ಯಾತ್ರೆ ಕೈಗೊಂಡರೆ ಸಂಕಷ್ಟದಲ್ಲಿರುವ ರೈತರಿಗೆ ಒಂದಷ್ಟು ಪರಿಹಾರ ದೊರೆಯಬಹುದು ಎಂದು ಬಿಜೆಪಿ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
ಬಿಜೆಪಿ ನಾಯಕರು ವಿವಿಧ ತಂಡಗಳಲ್ಲಿ ರಾಜ್ಯ ಪ್ರವಾಸ ಕೈಗೊಂಡು ಬರ ಅಧ್ಯಯನ ಮಾಡಲು ಹೊರಟಿರುವುದಕ್ಕೆ ಕಿಡಿ ಕಾರಿರುವ ಮುಖ್ಯಮಂತ್ರಿ ಅವರು, ನಿಮ್ಮ ೨೫ ಸಂಸದರು ಒಟ್ಟಿಗೆ ಹೋಗಿ ಪ್ರಧಾನಿ ಅವರನ್ನು ಭೇಟಿ ಮಾಡಿ ಎಂದಿದ್ದಾರೆ.
ನನಗೆ ಮತ್ತು ನನ್ನ ಸಹೋದ್ಯೋಗಿಗಳಿಗೆ ಪ್ರಧಾನಿ ಹಾಗೂ ಅವರ ಸಂಪುಟದ ಸಚಿವರು ಭೇಟಿಗೆ ಸಮಯಾವಕಾಶ ನೀಡಿಲ್ಲ. ನೀವಾದರೂ ನನಗೆ ಭೇಟಿ ಮಾಡಲು ಅವಕಾಶ ಕಲ್ಪಿಸಿ ಎಂದಿದ್ದಾರೆ.
ಈ ಸಂಬಂಧ ಸರಣಿ ಎಕ್ಸ್ ಮೂಲಕ ವಾಗ್ದಾಳಿ ನಡೆಸಿರುವ ಅವರು, ಡಬಲ್ ಇಂಜಿನ್ ಸರ್ಕಾರ ಬಂದರೆ ಕರ್ನಾಟಕದಲ್ಲಿ ಹಾಲು-ಜೇನಿನ ಹೊಳೆಯೇ ಹರಿಸುವುದಾಗಿ ಮತದಾರರನ್ನು ಸೆಳೆದು ೨೫ ಕ್ಷೇತ್ರ ಗೆದ್ದಿರಿ.
ಗೆದ್ದವರು ಏನು ಕಳ್ಳೆಕಾಯಿ ತಿನ್ನುತ್ತಿದ್ದಾರಾ? ಅವರಿಗೆ ರಾಜ್ಯದ ಪರಿಸ್ಥಿತಿ ತಿಳಿಯುವುದಿಲ್ಲವೇ? ನೀವು ಅವರನ್ನು ದೆಹಲಿಗೆ ಕಳುಹಿಸುವುದು ಬಿಟ್ಟು ಪ್ರವಾಸದ ನಾಟಕ ಮಾಡುತ್ತಿದ್ದೀರಾ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರೂ ಮತ್ತು ನಿಮ್ಮ ಸಂಸದರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಏಕೆ ಬಾಯಿ ಬಿಡುತ್ತಿಲ್ಲ ಎಂದಿದ್ದಾರೆ.
ನೆಲ-ಜಲ-ಭಾಷೆ ವಿಚಾರದಲ್ಲಿ ಕರ್ನಾಟಕಕ್ಕೆ, ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಅನ್ಯಾಯದ ಸರಮಾಲೆಯನ್ನೇ ನೀಡಿ ನೀವು ಯಾವ ಮುಖ ಹೊತ್ತು ಬರ ಪ್ರವಾಸ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ನೊಂದಿರುವ ರೈತರಿಗೆ ಪರಿಹಾರ ಬೇಕೇ ಹೊರತು ಬಾಯಿ ಮಾತಿನ ಸಾಂತ್ವನ ಅಲ್ಲ. ಈ ಬರ ಪರಿಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಹೊರಟಿರುವ ನಿಮ್ಮನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂದಿದ್ದಾರೆ.
ರಾಜ್ಯದ ಬಹುಭಾಗ ಬರಕ್ಕೆ ಸಿಲುಕಿ ಅಂದಾಜು ೩೭,೦೦೦ ಕೋಟಿ ರೂ. ಬೆಳೆ ನಷ್ಟವಾಗಿದೆ. ಕೇಂದ್ರಕ್ಕೆ ೧೭,೦೦೦ ಕೋಟಿ ರೂ. ಪರಿಹಾರ ಕೇಳಿದ್ದೇವೆ. ಆದರೆ, ಇದುವರೆಗೂ ಒಂದು ಪೈಸೆಯೂ ಬಂದಿಲ್ಲ ಎಂದು ಕಿಡಿಕಾರಿದ್ದಾರೆ.