ಅಭಿಯಾನ ನಡೆಸಲಿದೆ ಚುನಾವಣಾ ಆಯೋಗ
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನ ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ ಸಂಬಂಧ ಭಾರತದ ಚುನಾವಣಾ ಆಯೋಗವು ಮತದಾರರ ಪಟ್ಟಿ ತಯಾರಿಕೆ ಕುರಿತು ವೇಳಾ ಪಟ್ಟಿಯನ್ನು ಪ್ರಕಟಿಸಿದೆ.
ಬೆಂಗಳೂರು ಪದವೀಧರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆ ಸಂಬಂಧ ಅರ್ಹ ಪದವೀಧರ ರೈತ ಮತದಾರರನ್ನು ಹಾಗೂ ಅರ್ಹ ಮತದಾರರನ್ನು ನೋಂದಾಯಿಸಲು ನವೆಂಬರ್ 2 ರಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ 5 ತಾಲ್ಲೂಕುಗಳ 86 ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಾಗಿದೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿ, ಬೆಂಗಳೂರು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ ಅವರು ತಿಳಿಸಿದ್ದಾರೆ.
ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-18 ರಲ್ಲಿ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-19 ರಲ್ಲಿ ಅರ್ಜಿಗಳನ್ನು ದಾಖಲೆಗಳೊಂದಿಗೆ ಅರ್ಹ ಪದವೀಧರರು ಮತ್ತು ಶಿಕ್ಷಕರು ನಿರ್ದಿಷ್ಟ ಪಡಿಸಿದ ಅಧಿಕಾರಿಗಳಿಗೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.
ಈ ಅರ್ಜಿ ನಮೂನೆಗಳನ್ನು ಅರ್ಹ ಪದವೀಧರರು ಮತ್ತು ಶಿಕ್ಷಕರು ಸಂಬಂಧಪಟ್ಟ ಸಹಾಯಕ ಮತದಾರರ ನೋಂದಣಾಧಿಕಾರಿಗಳು /ತಹಶೀಲ್ದಾರ್/ನಿಯೋಜಿತ ಅಧಿಕಾರಿಗಳು ರವರ ಕಚೇರಿಗಳಿಂದ ಮತ್ತು ಶಿಕ್ಷಣ ಸಂಸ್ಥೆಗಳಿಂದ ಪಡೆಯಬಹುದು ಅಥವಾ ಮುಖ್ಯ ಚುನಾವಣಾಧಿಕಾರಿರವರ ವೆಬ್ ಸೈಟ್ https://ceo.karnataka.gov.in/341/teachers-and-graduates-constituencies-2024/en ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
ಪದವೀಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಪದವೀಧರ ಕ್ಷೇತ್ರದಲ್ಲಿ ಸಾಮಾನ್ಯ ನಿವಾಸಿಯಾಗಿದ್ದು, ನವೆಂಬರ್ ಒಂದಕ್ಕೆ ಮೊದಲು ಕನಿಷ್ಠ ಮೂರು ವರ್ಷಗಳ ಕಾಲ ಅವರು ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವೀಧರರಾಗಿರಬೇಕು/ ಅಧಿಸೂಚಿತ ಸಂಸ್ಥೆಯಿಂದ ಡಿಪ್ಲೋಮೊ ಹೊಂದಿರಬೇಕು ಅಥವಾ ರಾಜ್ಯ ಮುಖ್ಯ ಚುನಾವಣಾಧಿಕಾರಿರವರು ಸಿದ್ದಪಡಿಸಿರುವ ಪದವೀಧರರಿಗೆ ಸಮಾನವಾದ ವಿದ್ಯಾರ್ಹತೆಗಳನ್ನು ಹೊಂದಿರಬೇಕು.
ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಪದವೀಧರ ಕ್ಷೇತ್ರದಲ್ಲಿ ಸಾಮಾನ್ಯ ನಿವಾಸಿಯಾಗಿದ್ದು ಮತ್ತು ನವೆಂಬರ್ ಒಂದಕ್ಕೆ ಮೊದಲು ಆರು ವರ್ಷದೊಳಗೆ ಅರ್ಹ ವ್ಯಕ್ತಿ ನಿರ್ದಿಷ್ಟಪಡಿಸಿದ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಪ್ರೌಢ ಶಾಲೆಗಿಂತ ಕಡಿಮೆ ಇಲ್ಲದೆಂತೆ ಭೋಧನೆಯಲ್ಲಿ ತೊಡಗಿರುವ ವ್ಯಕ್ತಿ ಅರ್ಹರಿರುತ್ತಾರೆ.
ಶಿಕ್ಷಕರ ಕ್ಷೇತ್ರ ಮಾತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ನಮೂನೆ 19 ರಲ್ಲಿ ಅರ್ಜಿಯನ್ನು ಸಲ್ಲಿಸಿ ಶಿಕ್ಷಕರ ಕ್ಷೇತ್ರದಲ್ಲಿ ಮತದಾರನಾಗಿ ನೋಂದಾಯಿಸಿಕೊಳ್ಳಲು ತನ್ನ ಶೈಕ್ಷಣಿಕ ಸಂಸ್ಥೆಯ ಮುಖ್ಯಸ್ಥರಿಂದ ಅನುಬಂಧ-2 ರಲ್ಲಿ ದೃಢೀಕರಣ ಪತ್ರವನ್ನು ಸಲ್ಲಿಸಬೇಕು.
ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ನಮೂನೆ-18/ನಮೂನೆ-19 ರೊಂದಿಗೆ ವಿದ್ಯಾರ್ಹತೆಗೆ ಸಂಬಂಧಪಟ್ಟ ದಾಖಲೆಗಳ ದೃಢೀಕೃತ ಪ್ರತಿಯನ್ನು ಸಲ್ಲಿಸಬೇಕಾಗಿದ್ದು, ದಾಖಲೆಗಳನ್ನು ಗೊತ್ತುಪಡಿಸಿದ ಅಧಿಕಾರಿಗಳು ಅಥವಾ ಹೆಚ್ಚುವರಿ ನಿಯೋಜಿತ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಜಿಲ್ಲೆಯ ಗೆಜೆಟೆಡ್ ಅಧಿಕಾರಿ ಅಥವಾ ನೋಟರಿ ಸಾರ್ವಜನಿಕ ಇವರಿಂದ ದೃಢೀಕರಿಸಿ ಸಲ್ಲಿಸಬೇಕು .
ಈ ಅವಕಾಶವನ್ನು ಅರ್ಹ ಪದವೀಧರರು ಸದುಪಯೋಗಪಡಿಸಿಕೊಂಡು ಸಂಬಂಧಪಟ್ಟ ಬೆಂಗಳೂರು ಪದವೀಧರರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.