ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಣೆ
ಬೆಂಗಳೂರು: ಕರ್ನಾಟಕರತ್ನ ಡಾ. ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ರಾಜ್ಯದಲ್ಲಿಅನುಷ್ಠಾನಕ್ಕೆ ತರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 31 ಜಿಲ್ಲೆಗಳ ವ್ಯಾಪ್ತಿಯಲ್ಲಿ 10 ಹಬ್ಸ್, ಹಾಗೂ 85 ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಸ್ಪೋಕ್ ಕೇಂದ್ರಗಳನ್ನ ರೂಪಿಸುವ ಮೂಲಕ, ಹಠಾತ್ ಹೃದಯಘಾತಕ್ಕೆ ಒಳಗಾಗುವವರ ಜೀವ ಉಳಿಸುವಂತಹ ಒಂದು ಪರಿಣಾಮಕಾರಿ ಚಿಕಿತ್ಸಾ ಕಾರ್ಯಕ್ರಮವನ್ನ ಪುನಿತ್ ರಾಜಕುಮಾರ್ ಹೆಸರಿನಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ಪುನಿತ್ ರಾಜಕುಮಾರ್ ಹೃದಯಜ್ಯೋತಿ ಕಾರ್ಯಕ್ರಮದ ಇನ್ನೊಂದು ಭಾಗವಾಗಿ 2 ಕೋಟಿ ರೂ. ವೆಚ್ಚದಲ್ಲಿ ಎಇಡಿ(Automated External Defibrillator) ಸಾಧನಗಳನ್ನು ಅಳವಡಿಸಲು ನಿರ್ಧರಿಸಿದ್ದೇವೆ.
ಹೃದಯಾಘಾತಕ್ಕೆ ಒಳಗಾದವರಿಗೆ ಸುವರ್ಣ ಸಮಯದೊಳಗೆ ಚಿಕಿತ್ಸೆ ಕೊಡುವುದು ಬಹಳ ಮುಖ್ಯ. ಇತ್ತಿಚೆಗೆ ಯುವಕರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುವುದನ್ನು ನಾವು ನೋಡ್ತಿದ್ದೇವೆ. ಅಧ್ಯಯನದ ಪ್ರಕಾರ ಹೃದಯಾಘಾತಕ್ಕೆ ಈಡಾಗುವರಲ್ಲಿ ಶೇ. 35 ರಷ್ಟು ಮಂದಿ 40ರ ಆಸುಪಾಸಿನ ವಯಸ್ಸಿನವರು ಎಂಬುದು ಕಳವಳಿಕಾರಿ ಸಂಗತಿ.
ಇಂಥಹ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಧಾವಿಸುವುದು ಆರೋಗ್ಯ ಸಚಿವನಾಗಿ ನನ್ನ ಆದ್ಯ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಹೃದಯಾಘಾತ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಜೀವಗಳನ್ನು ಉಳಿಸಬೇಕು. ಮತ್ತೆ ಸುವರ್ಣ ಸಮಯದ ಒಳಗೆ, ಸಕಾಲಕ್ಕೆ ಅವರಿಗೆ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ.
ಎರಡು ರೀತಿಯಲ್ಲಿ ಕಾರ್ಯಕ್ರಮ ಜಾರಿಗೆ ತರಲಾಗ್ತಿದೆ. ಹಬ್ ಅಂಡ್ ಸ್ಪೋಕ್ ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸಾಧನಗಳಗಳನ್ನು ಅಳವಡಿಸುವುದು. ಈ ಕೇಂದ್ರಗಳು ಹಠಾತ್ ಹೃದಯಾಘಾತಗಳನ್ನ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ.
85 ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳನ್ನು ಸ್ಪೋಕ್ ಕೇಂದ್ರಗಳನ್ನಾಗಿ ರೂಪಿಸುತ್ತಿದ್ದೇವೆ. ಜಯದೇವ ಹೃದ್ರೋಗ ಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ ಒಟ್ಟು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 ಹಬ್ ಗಳನ್ನು ರಚಿಸಲಾಗಿದೆ.
ಯಾರಿಗೇ ಎದೆನೋವು ಕಾಣಿಸಿಕೊಂಡರೂ ಅವರು ನಮ್ಮ ಸ್ಪೋಕ್ ಕೇಂದ್ರಗಳಿಗೆ ಭೇಟಿ ನೀಡಿದರೆ ತಕ್ಷಣ ಇಸಿಜಿ ಮಾಡಲಾಗುತ್ತದೆ. ಜೊತೆಗೆ ಎ1 ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿ ಕ್ರಿಟಿಕಲ್ ಇದೆಯಾ, ಇಲ್ವಾ ಅನ್ನೋದನ್ನು ಸ್ಥಳದಲ್ಲಯೇ ನಾಲ್ಕರಿಂದ ಐದು ನಿಮಿಷದೊಳಗೆ ಪತ್ತೆ ಹಚ್ಚಲಾಗುತ್ತದೆ. ಟ್ರೈಕಾಗ್ ಸಂಸ್ಥೆಯವರ ಈ ತಂತ್ರಜ್ಞಾನದ ಸಹಾಯ ಪಡೆದು ಕ್ರಿಟಿಕಲ್ ಅಥವಾ ನಾನ್ ಕ್ರಿಟಿಕಲ್ ಅನ್ನೋದನ್ನ ಪತ್ತೆ ಹಚ್ಚುವ ವ್ಯವಸ್ಥೆ ಕಲ್ಪಿಸಲಾಗಿದೆ.
ಯಾರು ಕ್ರಿಟಿಕಲ್ ಹಂತದಲ್ಲಿದ್ದಾರೆ, ಅವರಿಗೆ ಸ್ಪೋಕ್ ಕೇಂದ್ರಗಳಲ್ಲೇ ಅಂದ್ರೆ ತಾಲೂಕು ಆಸ್ಪತ್ರೆಗಳಲ್ಲೇ ಉಚಿತವಾಗಿ ಇಂಜೆಕ್ಷನ್ ನ ಕೊಡಲಾಗುತ್ತದೆ. ಈ ಇಂಜೆಕ್ಷನ್ ಹಠಾತ್ ಹೃದಯಾಘಾತ ಆಗುವುದನ್ನು ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಹೀಗಾಗಿ ಕ್ರಿಟಿಕಲ್ ಹಂತದಲ್ಲಿ ಇರುವವರಿಗೆ ತಕ್ಷಣಕ್ಕೆ ಹಾರ್ಟ್ ಅಟ್ಯಾಕ್ ಆಗದಂತೆ ನೋಡಿಕೊಳ್ಳುವಲ್ಲಿ ಈ ಚಿಕಿತ್ಸೆ ಸಹಕಾರಿಯಾಗಲಿದೆ.
ಒಂದು ಚುಚ್ಚುಮದ್ದಿಗೆ ಖಾಸಗಿ ಆಸ್ಪತ್ರೆಗಳಲ್ಲಿ 30 ರಿಂದ 45 ಸಾವಿರ ಚಾರ್ಜ್ ಮಾಡುತ್ತಿದ್ದಾರೆ. ಆದರೆ, ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ ಎಂದರು.