ಕರ್ನಾಟಕ, ಕನ್ನಡಾಂಬೆಗೆ ನಮಿಸಿದ ರಾಜ್ಯಪಾಲರು
ಬೆಂಗಳೂರು: ಕರ್ನಾಟಕ ರಾಜ್ಯವನ್ನು ಆರೋಗ್ಯಕರ ಮತ್ತು ಸಮೃದ್ಧವಾಗಿಸಲು ಹಾಗೂ ದೇಶದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಎಂದು ಕರೆ ನೀಡಿದರು. ಅಲ್ಲದೆ, ರಾಜ್ಯದ ಜನತೆಗೆ ಕನ್ನಡ ಭಾಷೆಯಲ್ಲಿ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದರು.
ರಾಜಭವನ, ಕರ್ನಾಟಕ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಕರ್ನಾಟಕ ರಾಜ್ಯವು ತನ್ನ ಐತಿಹಾಸಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮತ್ತು ಕಲಾ ಸಾಹಿತ್ಯ, ಸಮನ್ವಯ ಮತ್ತು ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ ಎಂದರು.
ಈ ರಾಜ್ಯವು ತನ್ನ ನೈಸರ್ಗಿಕ ಸೌಂದರ್ಯ, ದೇವಾಲಯಗಳು ಮತ್ತು ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಕರ್ನಾಟಕ ರಾಜ್ಯವು ವಾಣಿಜ್ಯ ದೃಷ್ಟಿಯಿಂದ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮತ್ತು ಸಮೃದ್ಧ ರಾಜ್ಯವಾಗಿದ್ದು, ಸರ್ಕಾರ ಮತ್ತು ದಕ್ಷ ಆಡಳಿತವು ರಾಜ್ಯಕ್ಕೆ ವಿಶೇಷ ಗುರುತನ್ನು ನೀಡಿದೆ. ಕರ್ನಾಟಕ ರಾಜ್ಯವು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಪ್ರಗತಿ ಸಾಧಿಸಿದೆ. ದೇಶದ ಅಭಿವೃದ್ಧಿ ಮತ್ತು ಪ್ರಗತಿಗೆ ಗಣನೀಯ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ದೇಶದ ಪ್ರಗತಿಪರ ರಾಜ್ಯ. ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಗುರಿಯೊಂದಿಗೆ ಮೂಲ ಸೇವೆಗಳಿಗೆ ಪ್ರವೇಶ ಸೇರಿದಂತೆ ವಿವಿಧ ನವೀನ ಮತ್ತು ಅಂತರ್ಗತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಮ್ಮ ರಾಜ್ಯವು ಪ್ರವರ್ತಕವಾಗಿದೆ.
ಶಿಕ್ಷಣ, ಆರೋಗ್ಯ, ಕೃಷಿ, ಮಾಹಿತಿ ಮತ್ತು ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಕೈಗಾರಿಕೆ ಮತ್ತು ವಾಣಿಜ್ಯ, ಸ್ಟಾರ್ಟ್‌ಅಪ್‌ಗಳು, ಸಂಶೋಧನಾ ಕೇಂದ್ರಗಳು, ಏರೋಸ್ಪೇಸ್, ಕೃತಕ ಬುದ್ಧಿಮತ್ತೆ, ಇಂಧನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕರ್ನಾಟಕ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಪ್ರಶಂಸಿದರು.
ಕರ್ನಾಟಕ ರಾಜ್ಯೋತ್ಸವವು ಹೆಮ್ಮೆ ಮತ್ತು ಏಕತೆಯ ಆಚರಣೆಯಾಗಿದೆ. ನಮ್ಮ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಸಂಪ್ರದಾಯಗಳನ್ನು ನೆನಪಿಟ್ಟುಕೊಳ್ಳಲು ಮತ್ತು ನಮ್ಮ ರಾಜ್ಯದ ಸಾಧನೆಗಳನ್ನು ಗೌರವಿಸಲು ಇದು ಒಂದು ಅವಕಾಶ. ಈ ದಿನ ಕರ್ನಾಟಕ ರಾಜ್ಯದ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಬಿಂಬಿಸುವ ವಿವಿಧ ವರ್ಣರಂಜಿತ ಮತ್ತು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಗಿದೆ. ಅದ್ಭುತವಾದ ಕಾರ್ಯಕ್ರಮಗಳನ್ನು ಪ್ರಸ್ತುತಿಪಡಿಸಿದೆ ಎಲ್ಲಾ ಕಲಾವಿದರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಂಸ್ಥಾಪನಾ ದಿನದ ಜೊತೆಗೆ ಇಂದು ಮಧ್ಯಪ್ರದೇಶ, ಛತ್ತೀಸ್‌ಗಢ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಹರಿಯಾಣ, ಪಂಜಾಬ್ ಮತ್ತು ಅಂಡಮಾನ್ ನಿಕೋಬಾರ್, ಚಂಡೀಗಢ, ದೆಹಲಿ, ಲಕ್ಷದ್ವೀಪ ಮತ್ತು ಪುದುಚೇರಿಗಳ ಸಂಸ್ಥಾಪನಾ ದಿನವೂ ಆಗಿದೆ. ಈ ಎಲ್ಲಾ ರಾಜ್ಯಗಳ ನಿವಾಸಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ ಎಂದು ಹೇಳಿದರು.
ಕನ್ನಡ ಕಂಪನ್ನು ಸಾರಿದ ಕಲಾವಿದರು:
ಸಂಜೆ ರಾಷ್ಟ್ರಗೀತೆ ಹಾಗೂ ನಾಡಗೀತೆಯೊಂದಿಗೆ ಕಾರ್ಯಕ್ರಮವು ವಿದ್ಯುಕ್ತವಾಗಿ ಆರಂಭಗೊಂಡಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿದರು. ಮೊದಲಿಗೆ ನಾಗಚಂದ್ರಿಕಾ ಕೆ. ಎಸ್. ಮತ್ತು ತಂಡದವರು ” ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’… ‘ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’… ಡಾ. ದ. ರಾ ಬೆಂದ್ರೆ ಅವರ ರಚನೆಯ “ಒಂದೇ ಒಂದೇ ಕರ್ನಾಟಕ ಒಂದೇ ” ಗೀತ ಗಾಯನದ ಪ್ರಸ್ತುತಿಯ ಜೊತೆ ಜೊತೆಗೆ ನೆರದಿದ್ದ ಪ್ರೇಕ್ಷಕರು ಕೈ ಕರತಾಳ ತಟ್ಟುವ ಮೂಲಕ ಸಂಗೀತವನ್ನು ಆಸ್ವಾದಿಸಿದರು.
ನಂತರ ಬೆಂಗಳೂರಿನ ರಂಗ ಚಾರಕ ಟ್ರಸ್ಟ್ ವತಿಯ ಹಿದಾಯುತ್ ಅಹಮದ್ ಅವರ ತಂಡದಿಂದ ಸಂಪ್ರದಾಯದ ಡೊಳ್ಳು ಕುಣಿತ ರಂಜಿಸಿತು.
ಧರಣಿ ಟಿ.ಕಶ್ಯಪ್ ಮತ್ತು ತಂಡದವರಿಂದ ಕುವೆಂಪು ಅವರ ಬಾಗಿಲೋಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ… ಕುಚುಪುಡಿ ಶೈಲಿಯ ನೃತ್ಯ ಪ್ರದರ್ಶನ ಹಾಗೂ ತೊಡೆಯ ಮಂಗಳಂ ಮತ್ತು ಅಂಬಾ ಜಗದ್ ಜನನಿ – ಭರತನಾಟ್ಯ ಮನ ಸೂರೆಗೊಂಡಿತು.
ಶ್ರೀನಿವಾಸ ಅಸ್ಥನಾ ಮತ್ತು ತಂಡದವರು ಯಕ್ಷಗಾನದಲ್ಲಿ ಪ್ರಸ್ತುತ ಪಡಿಸಿದ ‘ಮಹಿಷ ವಧೆ’ ಪ್ರಸಂಗದ ಮೂಲಕ ತಾಯಿ ದೇವಿಯ ಮಹಾತ್ಮೆ ಬಹಳ ಸುಂದರವಾಗಿ ಮೂಡಿಬಂತು.
ರಾಜಭವನದ ವಿಶೇಷ ಕಾರ್ಯದರ್ಶಿಗಳಾದ ಆರ್ ಪ್ರಭುಶಂಕರ್ ಅವರು ಸ್ವಾಗತ ಭಾಷಣ ಮಾಡಿದರು. ಇನ್ನು ಕಾರ್ಯಕ್ರಮದ ಸಂಪೂರ್ಣ ನಿರೂಪಣೆ ಹಾಗೂ ಕನ್ನಾಟಕ ರಾಜ್ಯ ಸೇರಿದಂತೆ ಮಧ್ಯಪ್ರದೇಶ, ಛತ್ತೀಸ್‌ಗಢ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಹರಿಯಾಣ, ಪಂಜಾಬ್ ಮತ್ತು ಅಂಡಮಾನ್ ನಿಕೋಬಾರ್, ಚಂಡೀಗಢ, ದೆಹಲಿ, ಲಕ್ಷದ್ವೀಪ ಮತ್ತು ಪುದುಚೇರಿಗಳ ರಾಜ್ಯಗಳ ಸಂಸ್ಥಾಪನಾ ದಿನಗಳ ಅಂಗವಾಗಿ ರಾಜ್ಯಗಳ ಕುರಿತ ಮಾಹಿತಿಯನ್ನು ವಿಸ್ತಾರವಾಗಿ ವಿವರಣೆ ನೀಡಿದ ಚೈತ್ರಾ ಅವರು ರಾಜ್ಯಪಾಲರ ಅಭಿನಂದನೆಗೆ ಭಾಜನರಾದರು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.