ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಬಾರದು ಎಂದು ವರಿಷ್ಠರು ಎಚ್ಚರಿಕೆ ಕೊಟ್ಟ ಮರುದಿನವೇ ಸಿಎಂ ಹೇಳಿಕೆ
ಬೆಂಗಳೂರು: ಪ್ರಸಕ್ತ ವಿಧಾನಸಭಾ ಅವಧಿಯ ಪೂರ್ತಿ ನಾನೇ ಮುಖ್ಯಮಂತ್ರಿ ಎಂದು ಸಿದ್ದರಾಮಯ್ಯ ಘೋಷಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ, ಅಧಿಕಾರ ಹಂಚಿಕೆ ವಿಷಯ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಅವರೇ ಈ ಸ್ಪಷ್ಟನೆ ನೀಡಿದ್ದಾರೆ.
ಅಧಿಕಾರ ಹಂಚಿಕೆ ಹಾಗೂ ಸರ್ಕಾರಕ್ಕೆ ಇರಿಸು-ಮುರಿಸು ತರುವಂತಹ ಯಾವಿದೇ ಹೇಳಿಕೆ ನೀಡಬಾರದೆಂದು ಎಐಸಿಸಿ ವರಿಷ್ಠರು ನಿನ್ನೆ ಬೆಂಗಳೂರಿನಲ್ಲಿ ಸಭೆ ನಡೆಸಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅವೇ ಇಂತಹ ಹೇಳಿಕೆ ನೀಡಿದ್ದಾರೆ.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಕೂಡ, ಸಿದ್ದರಾಮಯ್ಯ ಅವರೇ ಪೂರ್ಣಾವಧಿಗೆ ಮುಖ್ಯಮಂತ್ರಿ ಎಂದು ಪುನರುಚ್ಛರಿಸಿದ್ದಾರೆ.
ವಿಜಯನಗರ ಜಿಲ್ಲಾ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರ ಹಂಚಿಕೆ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಚರ್ಚೆ ಮಾಡುತ್ತಿರುವವರಿಗೆ ಕೆಲಸವಿಲ್ಲ, ಪೂರ್ಣಾವಧಿಗೆ ನಮ್ಮದೇ ಸರ್ಕಾರ, ನಾನೇ ಸಿಎಂ ಎಂದರು.
ರೈತರ ಬಗ್ಗೆ ಕಾಳಜಿ ಇದ್ದರೆ, ಬಿಜೆಪಿ ಸಂಸದರು ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ಕೇಂದ್ರದೊಂದಿಗೆ ಮಾತನಾಡಿ, ರಾಜ್ಯಕ್ಕೆ ಪರಿಹಾರಗಳನ್ನು ಬಿಡುಗಡೆಗೊಳಿಸಿದರೆ ಉತ್ತಮ.
ಕೇಂದ್ರಕ್ಕೆ ಬರ ಪರಿಹಾರವಾಗಿ ೧೭,೯೦೦ ಕೋಟಿ ರೂ. ಕೋರಿ ಮನವಿ ಸಲ್ಲಿಸಲಾಗಿದೆ. ಪರಿಹಾರ ಮೊತ್ತವನ್ನು ಬಿಡುಗಡೆ ಮಾಡದೇ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರುತ್ತಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ.
ಶಾಸಕರನ್ನು ಕೆಲವು ನಿಗಮ-ಮಂಡಳಿಗಳಿಗೆ ಅಧ್ಯಕ್ಷರಾಗಿ ನೇಮಕ ಮಾಡುವ ಪ್ರಕ್ರಿಯೆಯೂ ಇದ್ದು, ಈ ಬಗ್ಗೆಯೂ ಕೇಂದ್ರ ನಾಯಕರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಈ ಮುಂಚೆ ನೀಡುತ್ತಿದ್ದಂತೆ ಕೃಷಿ ಪಂಪಸೆಟ್ ಗಳಿಗೆ ಪೂರಕ ಸೌಲಭ್ಯಗಳನ್ನು ರೈತರಿಗೆ ಮುಂದುವರೆಸಲಾಗುವುದು.
ಯಡಿಯೂರಪ್ಪ ಆರೋಪಗಳು ಸುಳ್ಳು, ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ.
ಯಡಿಯೂರಪ್ಪನವರು ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಬಿಜೆಪಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು. ವಿಧಾನಸಭೆಯಲ್ಲಿ ಅವರು ಕಣ್ಣೀರಿಟ್ಟಿದ್ದರು. ಅವರ ಪಕ್ಷದವರೇ ಅವರನ್ನು ಮನೆಗೆ ಕಳುಹಿಸಿದ್ದಾರೆ. ಅವರ ಹೇಳಿಕೆಗಳಿಗೆ ಏನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಕಾಂಗ್ರೆಸ್ ಶಾಸಕರು ಅವರ ಹಣದಲ್ಲಿ ವಿದೇಶ ಪ್ರವಾಸ ಹೋಗುತ್ತಿದ್ದಾರೆ, ಸರ್ಕಾರದಿಂದ ನಾವು ಯಾರನ್ನೂ ಕಳಿಸೋಲ್ಲ.
ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ನಾವು ಐದು ವರ್ಷ ಆಡಳಿತ ಮಾಡುತ್ತೇವೆ. ಮತ್ತೆ ಚುನಾವಣೆಗೆ ಹೋಗುತ್ತೇವೆ. ಮತ್ತೆ ಜನ ನಮಗೆ ಆಶೀರ್ವಾದ ಮಾಡಲಿದ್ದಾರೆ.
ರಮೇಶ್ ಜಾರಕಿಹೊಳಿ ಸೋತು ಮನೆಯಲ್ಲಿರುವವರು, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅದಕ್ಕೆಲ್ಲಾ ಉತ್ತರಿಸಲಾಗುವುದಿಲ್ಲ.