ಸರ್ಕಾರದಿಂದ ಆರನೇ ಗ್ಯಾರಂಟಿ – ಜಮೀರ್ ಅಹಮದ್ ಖಾನ್
ಬೆಂಗಳೂರು : ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 2.32 ಲಕ್ಷ ಮನೆಗಳನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿದ್ದಾರೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಬಡವರಿಗೆ ಸೂರು ಕಲ್ಪಿಸಲು ರೂಪಿಸಿದ್ದ ಯೋಜನೆಯು ಫಲಾನುಭವಿಗಳ ವಂತಿಗೆ ಪಾವತಿಯಾಗದೆ ನೆನೆಗುದಿಗೆ ಬಿದ್ದಿದ್ದು ಇದೀಗ ಸರ್ಕಾರವೇ ಸಂಪೂರ್ಣ ವೆಚ್ಚ ಭರಿಸಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಜತೆಗೆ ಆರನೇ ಗ್ಯಾರಂಟಿಯಾಗಿ ಅಪೂರ್ಣ ಆಗಿರುವ 2.32 ಲಕ್ಷ ಮನೆ ಮುಂದಿನ ವರ್ಷದ ಅಂತ್ಯದೊಳಗೆ ಪೂರ್ಣ ಗೊಳಿಸಲು ಗುರಿ ಹಾಕಿಕೊಳ್ಳ ಲಾಗಿದೆ ಎಂದರು.
ಮುಖ್ಯಮಂತ್ರಿ ಅವರು ಹಂಪಿಯಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದ ವೇದಿಕೆಯಲ್ಲೇ 2.42 ಲಕ್ಷ ಮನೆ ಉಚಿತವಾಗಿ ನೀಡುವ ಭರವಸೆ ನೀಡಿದ್ದು, ಅದಕ್ಕೆ ತಗಲುವ ಎಂಟು ಸಾವಿರ ಕೋಟಿ ರೂ.ವನ್ನು ಹಂತ ಹಂತವಾಗಿ ಒದಗಿಸುವ ಭರವಸೆ ನೀಡಲಾಗಿದೆ. ಈ ಸಂಬಂಧ ಮುಂದಿನ ವಾರ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಸಭೆ ಕರೆದಿದ್ದಾರೆ ಎಂದು ಹೇಳಿದರು.
ಈ ತೀರ್ಮಾನ ದಿಂದಾಗಿ 2.42 ಲಕ್ಷ ಕುಟುಂಬಗಳಿಗೆ ನೆಮ್ಮದಿ ದೊರಕಲಿದೆ. ಬ್ಯಾಂಕ್ ಸಾಲ ಸಿಗದೆ ಆತಂಕದಲ್ಲಿದ್ದವರು ನಿರಾಳವಾಗಲಿದ್ದು, ಫಲಾನುಭವಿಗಳ ವಂತಿಗೆ ಇಲ್ಲದೆ ಮನೆ ಸಿಗಲಿದೆ ಎಂದು ತಿಳಿಸಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಿಸಿ ಕೊಡುವ ಮನೆಗೆ ಘಟಕ ವೆಚ್ಚ 7 ಲಕ್ಷ ರೂ. ಆಗಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ 3 ಲಕ್ಷ ರೂ.ವರೆಗೆ ಸಿಗಲಿದ್ದು, ಉಳಿದ ನಾಲ್ಕು ಲಕ್ಷ ರೂ. ಫಲಾನುಭವಿಗಳು ಕಟ್ಟಬೇಕಿತ್ತು. ಇದೀಗ ಫಲಾನುಭವಿ ಪಾಲಿನ ವಂತಿಗೆ ಸರ್ಕಾರವೇ ಭರಿಸಲಿದಂತಾಗಲಿದೆ ಎಂದು ಹೇಳಿದರು.