ರಾಜಣ್ಣ ಹೊಸ ಬಾಂಬ್
ಬೆಂಗಳೂರು: ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿದರೆ, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಭವಿಷ್ಯ ನುಡಿದಿದ್ದಾರೆ.
ಮುಖ್ಯಮಂತ್ರಿ ಗಾದಿಯಲ್ಲಿ ಸಿದ್ದರಾಮಯ್ಯ ಇರುವವೆಗೂ ನಾವು ಅವರ ಪರ, ಅವರು ಒಂದು ವೇಳೆ ಅಧಿಕಾರದಿಂದ ಕೆಳಗಿಳಿದರೆ ನಾವೆಲ್ಲಾ ಪರಮೇಶ್ವರ್ ಪರ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರದಂತೆ ಎರಡು ವರ್ಷಗಳ ನಂತರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಎಂಬುದು ಎಐಸಿಸಿಯಲ್ಲಿ ನಡೆದಿರುವ ತೀರ್ಮಾನ. ಇದು ಸರ್ಕಾರ ಮತ್ತು ಕಾಂಗ್ರೆಸ್ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಶಿವಕಮಾರ್ ಪರ ಆಡಳಿತ ಪಕ್ಷದ ಕೆಲವು ಶಾಸಕರು ಬ್ಯಾಟಿಂಗ್ ಮಾಡಿದರೆ, ಸಿದ್ದರಾಮಯ್ಯ ಬೆಂಬಲಿಗರು ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಆಂತರಿಕ ಕಸರತ್ತು ನಡೆಸಿದ್ದಾರೆ.
ಈ ಕಸರತ್ತಿಗಾಗಿ ಔತಣಕೂಟದ ಸಭೆಗಳು ನಡೆದು, ಸಾರ್ವಜನಿಕವಾಗಿ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಆಗುತ್ತಿರುವುದನ್ನು ತಪ್ಪಿಸಲು ಎಐಸಿಸಿ ವರಿಷ್ಠರು ಎಚ್ಚರಿಕೆ ನೀಡಿದರೂ ಅವರ ಮಾತಿಗೆ ಬೆಲೆಯೇ ಇಲ್ಲದಂತಾಗಿದೆ.
ವರಿಷ್ಠರ ಆದೇಶ ಧಿಕ್ಕರಿಸಿದ ರಾಜಣ್ಣ, ಸಾರ್ವಜನಿಕ ವೇದಿಕೆಯಲ್ಲೇ, ಗೃಹ ಸಚಿವರಾಗಿರುವ ಪರಮೇಶ್ವರ್ ಮುಂದೆ ಮುಖ್ಯಮಂತ್ರಿ ಆಗಲಿದ್ದಾರೆ, ಅವರಿಗೆ ನಮ್ಮ ಬೆಂಬಲವಿದೆ ಎಂದು ಘೋಷಸಿದ್ದಾರೆ.
ಸಮಾರಂಭದಲ್ಲೇ ಡಾಕ್ಟರೇ ನಿಮಗೆ ಅದೃಷ್ಟ ಇದೆ. ಮುಂದೆ ಮುಖ್ಯಮಂತ್ರಿ ಆಗುತ್ತೀರಿ, ಅವರು ಮುಖ್ಯಮಂತ್ರಿಯಾದರೆ ನಮಗೆಲ್ಲರಿಗೂ ಸಂತಸ, ಸದ್ಯಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಯಲ್ಲಿ ಇರುವವರೆಗೆ ಪರಮೇಶ್ವರ್ ಸೇರಿದಂತೆ ನಾವೆಲ್ಲರೂ ಅವರ ಪರ ಎಂದಿದ್ದಾರೆ.
ಸಿದ್ದರಾಮಯ್ಯ ಹೊರತುಪಡಿಸಿದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಪರಮೇಶ್ವರ್ ಅವರೇ ಎನ್ನುವುದರ ಮೂಲಕ ಶಿವಕುಮಾರ್ ಮುಖ್ಯಮಂತ್ರಿ ಆಗುವುದಕ್ಕೆ ಸಾರ್ವಜನಿಕವಾಗಿಯೇ ವಿರೋಧ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ನಮಗೆ ಹೇಳಿದ್ದಾರೆ, ಏನು ಮಾತನಾಡಬಾರದು ಎಂದು. ಆದರೆ, ಮಾತನಾಡಿಬಿಟ್ಟಿದ್ದೇನೆ, ಅವರು ಏನಾದರೂ ಮಾಡಿಕೊಳ್ಳಲಿ ನಾನು ಅವರಿಗೂ ಹೆದರುವುದಿಲ್ಲ. ಇಂತಹ ಯಾವುದೇ ಸೂಚನೆಗಳಿಗೆ ಅಂಜುವುದಿಲ್ಲ, ಮುಂದೆ ನಾನು ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಗುಡುಗಿದರು.
ನಿನ್ನೆಯಷ್ಟೇ ಸಿದ್ದರಾಮಯ್ಯ, ನಾನೇ ಮುಂದಿನ ಐದು ವರ್ಷ ಕಾಲ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜಣ್ಣ ಈ ಬಾಂಬ್ ಸಿಡಿಸಿದ್ದಾರೆ, ಇದರ ಹಿಂದಿನ ಮರ್ಮ ಮಾತ್ರ ತಿಳಿಯದಾಗಿದೆ.