ಮಂತ್ರಿಗಳಿಗೆ ಸಿಎಂ-ಡಿಸಿಎಂ ಖಡಕ್ ಎಚ್ಚರಿಕೆ
ಬೆಂಗಳೂರು: ಹೇಳಿಕೆ ಬಿಡಿ, ಲೋಕಸಭಾ ಚುನಾವಣೆ ಕಡೆಗೆ ಗಮನ ಹರಿಸಿ. ಇಲ್ಲದಿದ್ದರೆ ನಿಮಗೆ ಕಷ್ಟವಾಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಸಹೋದ್ಯೋಗಿಗಳಿಗೆ ಇಂದಿಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಉಪಹಾರ ಕೂಟಕ್ಕೆ ಒಂದಷ್ಟು ಆಯ್ದ ಸಚಿವರನ್ನು ಮಾತ್ರ ಆಹ್ವಾನಿಸಿದ್ದ ಮುಖ್ಯಮಂತ್ರಿ ಅವರು, ಉಪಹಾರದ ನಂತರದ ಸಭೆಯಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಮುಂದಿಟ್ಟುಕೊಂಡು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಕ್ಷ ಮತ್ತು ಸರ್ಕಾರದ ಆಂತರಿಕ ವಿಚಾರಗಳನ್ನು ಹಾದಿಬೀದಿಯಲ್ಲಿ ಮಾತಾಡಿ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದೀರಿ. ಇದರಿಂದ ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ವರಿಷ್ಠರು ನೀಡುವ ಎಚ್ಚರಿಕೆಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದೀರಿ. ಇದು ನಿಮಗೆ ಮುಂದೆ ಮುಳುವಾಗಬಹುದು ಎಂದ ಮುಖ್ಯಮಂತ್ರಿಗಳು, ಮಾಧ್ಯಮದವರು ನನ್ನ ಹೇಳಿಕೆಯನ್ನೇ ತಿರುಚಿದ್ದಾರೆ. ಅವರ ಅನುಕೂಲಕ್ಕೆ ತಕ್ಕಂತೆ ಸುದ್ದಿ ಮಾಡಿದ್ದಾರೆ. ನೀವು ಬಹಿರಂಗವಾಗಿ ಮಾತನಾಡುವಾಗ ಅದರಿಂದಾಗುವ ಪರಿಣಾಮಗಳ ಬಗ್ಗೆ ವಿವೇಚಿಸಿ ಹೇಳಿಕೆ ನೀಡಿ ಎಂದಿದ್ದಾರೆ.
ರಾಜ್ಯದ ೨೮ರಲ್ಲಿ ೨೦ ಕ್ಷೇತ್ರಗಳನ್ನು ಗೆಲ್ಲಲ್ಲೇ ಬೇಕು ಎಂಬ ಗುರಿಯನ್ನು ವರಿಷ್ಠರು ನೀಡಿದ್ದಾರೆ. ನಿಮಗೆ ವಹಿಸಿದ್ದ ಜವಾಬ್ದಾರಿ ಇದುವರೆಗೂ ಮಾಡಿಲ್ಲ. ಕೆಲವರಂತೂ ಕ್ಷೇತ್ರ ಮತ್ತು ರಾಜಧಾನಿ ಬಿಟ್ಟು, ಉಸ್ತುವಾರಿ ಜಿಲ್ಲೆಯಲ್ಲೂ ಪ್ರವಾಸ ಮಾಡುತ್ತಿಲ್ಲ.
ಲೋಕಸಭೆ ಚುನಾವಣೆಗೆ ಸಮರ್ಥ ಅಭ್ಯರ್ಥಿಗಳ ಪಟ್ಟಿ ಮಾಡಿ
ನಿಮಗೆ ವಹಿಸಿರುವ ಮತ್ತು ನಿಮ್ಮ ಜಿಲ್ಲಾ ಉಸ್ತುವಾರಿ ವ್ಯಾಪ್ತಿಯ ಲೋಕಸಭಾ ಕ್ಷೇತ್ರಕ್ಕೆ ಮೂವರು ಸಮರ್ಥ ಅಭ್ಯರ್ಥಿಗಳ ಹೆಸರನ್ನು ಪಟ್ಟಿ ಮಾಡಿಕೊಡಿ. ತಕ್ಷಣದಿಂದಲ್ಲೇ ಈ ಕಾರ್ಯ ಆಗಬೇಕು. ಹಿಂದೆ ನಿಮಗೆ ನೀಡಿದ್ದ ಗಡುವು ಈಗಾಗಲೇ ಮುಗಿದಿದೆ.
ಅಭ್ಯರ್ಥಿ ಆಯ್ಕೆ ಮಾಡಿ ಕಣಕ್ಕಿಳಿಸಿದ ಮೇಲೆ ಅವರನ್ನು ಸಂಸತ್ತಿಗೆ ಕಳುಹಿಸುವ ಜವಾಬ್ದಾರಿ ನಿಮ್ಮದು. ಚುನಾವಣೆಯ ಖರ್ಚು-ವೆಚ್ಚವೂ ನಿಮ್ಮದೆ. ನಮ್ಮಿಂದ ಏನನ್ನೂ ನಿರೀಕ್ಷಿಸಬೇಡಿ. ಒಂದು ವೇಳೆ ಚುನಾವಣೆಯಲ್ಲಿ ವ್ಯತ್ಯಾಸವಾದರೆ, ನಿಮ್ಮ ಅಧಿಕಾರಕ್ಕೆ ಕುತ್ತು ಬರಬಹುದು.
ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿವೆಯೇ ಇಲ್ಲವೇ ಎಂಬುದನ್ನು ನೋಡಿಲ್ಲ. ಆ ಬಗ್ಗೆ ಸೂಕ್ತ ಪ್ರಚಾರವಾಗುತ್ತಿಲ್ಲ. ಮುಂದಿನ ಚುನಾವಣೆಗೆ ಪಂಚಗ್ಯಾರಂಟಿಗಳೇ ಅಸ್ತ್ರ. ಆದರೆ, ನೀವು ಸಮರ್ಥವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ.
ಬಿಜೆಪಿಯವರು ಬರ ಅಧ್ಯಯನ ಪ್ರವಾಸ ಹೊರಟಿದ್ದಾರೆ. ನೀವು ಮಾಡಿದ್ದೀರಾ? ಸರ್ಕಾರಕ್ಕೆ ವರದಿ ಕೊಟ್ಟಿದ್ದೀರಾ? ಜನರ ಅಹವಾಲು ಸ್ವೀಕಾರ ಮಾಡಿದ್ದೀರಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂದಿನ ೧೫ದಿನದಲ್ಲಿ ಇಡೀ ಜಿಲ್ಲೆ ಪ್ರವಾಸ ಮಾಡಿ ತಾಲ್ಲೂಕು ಕೇಂದ್ರಗಳಲ್ಲಿ ಸಭೆ ನಡೆಸಿ ಬರದ ಪರಿಸ್ಥಿತಿ ಮತ್ತು ಜಿಲ್ಲಾಡಳಿತ ಪರಿಹಾರ ಕಾಮಗಾರಿ ಯಾವ ರೀತಿ ಕೈಗೊಂಡಿದೆ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು.
ಕೇಂದ್ರ ಸ್ಥಾನದಲ್ಲಿ ಸುತ್ತುವುದನ್ನು ಬಿಡಿ. ಜನರ ಬಳಿಗೆ ಹೋಗಿ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ಮುಟ್ಟಿಸಿ, ಜನಮಾನಸಕ್ಕೆ ತಲುಪಿಸಿ ಎಂಬ ಕಿವಿ ಮಾತು ಹೇಳಿದ್ದಾರೆ.
ಯೋಜನೆಯ ಅನುಷ್ಠಾನದಲ್ಲಿ ಕೆಲವೆಡೆ ಸಮಸ್ಯೆಗಳಿವೆ. ಆ ಸಮಸ್ಯೆಗಳನ್ನು ನೀವು ಪರಿಶೀಲಿಸಿ ಪರಿಹರಿಸಬೇಕು. ಅಧಿಕಾರಿಗಳಿಗೆ ಅದರ ಅವಶ್ಯಕತೆ ಇರುವುದಿಲ್ಲ. ಆದರೆ, ನಾವು ತಳಮಟ್ಟದವರೆಗೂ ಸ್ಪಂಧಿಸಬೇಕಾಗಿದೆ.