ಮೈಸೂರನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಕರೆದೊಯ್ಯಿರಿ: ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಟಾರ್ಗೆಟ್
ಮೈಸೂರು: ಒಗ್ಗಟ್ಟಿನ ಶ್ರಮ ಮತ್ತು ಕೆಲಸಗಳ ಹಂಚಿಕೆ ಮೂಲಕ ಸಾರ್ವಜನಿಕರಿಂದ ಆಕ್ಷೇಪಣೆ ಇಲ್ಲದಂತೆ ದಸರಾ ಯಶಸ್ವಿಗೊಳಿಸಿದ್ದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಕ್ಷಮತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಔತಣ ಕೂಟದಲ್ಲಿ ದಸರಾ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮಾತನಾಡಿದರು. ಅಧಿಕಾರಿಗಳು ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಪರಿಣಾಮಕಾರಿ ಅಭಿವೃದ್ಧಿ ಸಾಧ್ಯ. ಅಧಿಕಾರಿಗಳು ಜನರ ನಡುವೆ ಇದ್ದರೆ ಅಧಿಕಾರಿಗಳ ಜನಪ್ರಿಯತೆಯೂ ಹೆಚ್ಚುತ್ತದೆ. ಜನರ ಸಮಸ್ಯೆಗಳೂ ಅರ್ಥ ಆಗುತ್ತವೆ. ಸಮಸ್ಯೆ ಅರ್ಥವಾದಷ್ಟೂ ಪರಿಣಾಮಕಾರಿ ಪರಿಹಾರ ಒದಗಿಸಲು ಸಾಧ್ಯ ಎಂದು ಸಲಹೆ ನೀಡಿದರು.
ದಸರಾ ಜನರ ಹಬ್ಬ. ಆದ್ದರಿಂದ ಜನರ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯ. ಇದು ಈ ಬಾರಿಯೂ ಯಶಸ್ವಿಯಾಗಿದೆ. ಮುಂದಿನ ಬಾರಿ ಜನರ ಜತೆ ಪೂರ್ವಭಾವಿ ಸಭೆಗಳನ್ನು ನಡೆಸಿ ದಸರಾವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿ ಎಂದು ಕರೆ ನೀಡಿದರು.
ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿ
ಅಧಿಕಾರಿಗಳಿಗೆ ಜನಪರವಾದ ಮನಸ್ಸು, ಕಾಳಜಿ, ಹೃದಯ ಇದ್ದರೆ ಮಾತ್ರ ಜನಪರ ಅಭಿವೃದ್ಧಿ ಸಾಧ್ಯ. ಕಳೆದ ಐದು ವರ್ಷಗಳಲ್ಲಿ ಮೈಸೂರಿನಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹೀಗಾಗಿ ಇಡೀ ಮೈಸೂರು ಜಿಲ್ಲೆಯ ಅಭಿವೃದ್ಧಿಗೆ ನೀಲನಕ್ಷೆ ಸಿದ್ದಪಡಿಸಿ ಎಂದು ಸೂಚನೆ ನೀಡಿದರು.
ನಾಲ್ವಡಿ ಅರಸರು ಮಾದರಿ
ಗತಕಾಲದ ಅಭಿವೃದ್ಧಿಯ ವೈಭವ ಮೈಸೂರಿನಲ್ಲಿ ಮರುಕಳಿಸಬೇಕು. ನಾಲ್ವಡಿ ಅರಸರು ಮಾಡಿದ ನೀರಾವರಿ, ಕೃಷಿ, ಸಮಾಜ ಕಲ್ಯಾಣ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳು ನಮಗೆ ಮಾದರಿಯಾಗಲಿ. ಅವರ ಕಾಲದ ಅಭಿವೃದ್ಧಿಯ ವೈಭವ ಜಿಲ್ಲೆಯಲ್ಲಿ ಮರುಕಳಿಸಬೇಕು ಎಂದರು.
ಮೈಸೂರು ನಂಬರ್ ಒನ್ ಆಗಬೇಕು
ಮೈಸೂರನ್ನು ಅಭಿವೃದ್ಧಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಕರೆದೊಯ್ಯಿರಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಟಾರ್ಗೆಟ್ ನೀಡಿದರು.
ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಲ್ಲಿ ಮೈಸೂರು ನಂಬರ್ ಒನ್ ಆಗಬೇಕು. ಇದು ನಿಮ್ಮಿಂದ ಸಾಧ್ಯವಿದೆ. ಸಾಧಿಸಿ ತೋರಿಸೋಣ ಎಂದು ಎಲ್ಲರ ಸಹಕಾರ ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲಾ ಅಧಿಕಾರಿಗಳಿಗೂ ಅಭಿನಂದಿಸಿ, ದಸರಾದಲ್ಲಿ ಕಾಣಿಸಿದ ಒಗ್ಗಟ್ಟು ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲೂ ಕಾಣಬೇಕು ಎಂದು ಸೂಚಿಸಿದರು.