ಕೇಂದ್ರ ಸರ್ಕಾರದ ಬರ ಆಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ತೆರಳಿದರೂ ಅನುದಾನ ದೊರೆತಿಲ್ಲ
ರಾಯಚೂರು: ರಾಜ್ಯದ 216 ತಾಲ್ಲೂಕುಗಳಲ್ಲಿ ಬರವಿದ್ದರೂ ಇನ್ನೂ ಕೇಂದ್ರ ಸರ್ಕಾರದ ನೆರವು ಸಿಕ್ಕಿಲ್ಲ. ಆದರೆ, ರಾಜ್ಯ ಸರ್ಕಾರ ರೈತರ ಹಿತ ಕಾಯುವುದನ್ನು ಮರೆಯುವುದಿಲ್ಲ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದರು.
ರಾಯಚೂರು ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬರ ಆಧ್ಯಯನ ತಂಡ ಬಂದು ಪರಿಶೀಲನೆ ನಡೆಸಿ ತೆರಳಿದೆ, ಆದರೂ ಈವರಗೆ ಅನುದಾನ ದೊರೆತಿಲ್ಲ. ಹಾಗಾಗಿ ನ. 9 ರಂದು ನಡೆಯುವ ಸಂಪುಟ ಸಭೆಯಲ್ಲಿ ರೈತರ ನೆರವು ಕುರಿತು ಚರ್ಚಿಸಿಲಾಗುವುದು ಎಂದರು.
ಬರದ ಸಂದರ್ಭದಲ್ಲಿಯೂ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಕೂಲಿ ಹಣದ ಬಾಕಿ 3 ತಿಂಗಳಿಂದ ಬೆಡುಗಡೆ ಮಾಡಿರಲಿಲ್ಲ. ತಾವು ಸೇರಿದಂತೆ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ ಖರ್ಗೆ ಮತ್ತಿತರರು ದೆಹಲಿಗೆ ತೆರಳಿ ಮನವಿ ಮಾಡಿದ ನಂತರ 720 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದು ಅವರು ಹೇಳಿದರು.
ರೈತರ ಅನುಕೂಲಕ್ಕಾಗಿ ಏಕೀಕೃತ ಕರೆ ಕೇಂದ್ರ
ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಎಂದಿನಂತೆ ಇದ್ದರೂ ಬಳಕೆ ಹೆಚ್ಚಿರುವುದರಿಂದ ಪಂಪ್ ಸೆಟ್ ಗಳಿಗೆ 5-7 ಗಂಟೆ ಶಿಫ್ಟ್ ಆಧಾರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ರಸಗೊಬ್ಬರ ಬಿತ್ತನೆ ಬೀಜದ ಪೂರೈಕೆ ಕೊರತೆ ಇಲ್ಲ. ರೈತರ ಅನುಕೂಲಕ್ಕಾಗಿ ಏಕೀಕೃತ ಕರೆ ಕೇಂದ್ರ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಕೃಷಿ ನವೋದ್ಯಮ ಪ್ರೋತ್ಸಾಹ, ಹೈಟೆಕ್ ಹಾರ್ವೆಸ್ಟ್ ಹಬ್ ಸ್ಥಾಪನೆ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.ಜಲಸಂರಕ್ಷಣೆಗೆ ಆಧ್ಯತೆ ನೀಡಲಾಗುತ್ತಿದೆ ಎಂದರು.
ರಸಗೊಬ್ಬರ ನಿಯಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಲು ಸೂಚನೆ
ರೈತರಿಗೆ ರಸಗೊಬ್ಬರ, ಕೀಟನಾಶಕಗಳ ನಿಯಮಿತ ಬಳಕೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಭೂಮಿಯ ಸಾರ ಉಳಿಸಿ. ಜಿಲ್ಲೆಯಲ್ಲಿ ಈ ಬಾರಿ ಬಿತ್ತನೆ ಕಡಿಮೆಯಾದರೂ ರಸಗೊಬ್ಬರ ಬಳಕೆ ಹೆಚ್ಚಾಗಿದೆ. ಇದು ಮಣ್ಣಿನ ಫಲವತ್ತತೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಹಾಗಾಗಿ ಕೃಷಿಕರಿಗೆ ಅರಿವು ಮೂಡಿಸಿ ಎಂದರು.
ಕೃಷಿ ವಿಜ್ಞಾನಿಗಳು ರೈತರಿಗೆ ಲಾಭದಾಯಕ ಹಾಗೂ ಆರೋಗ್ಯ ಪೂರ್ಣ ಬೇಸಾಯ ಪದ್ದತಿ ಬಗ್ಗೆ ಅರಿವು ಮೂಡಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ಇದನ್ನು ಸಮನ್ವಯ ಮಾಡಬೇಕಿದೆ ಎಂದು ಸಚಿವರು ನಿರ್ದೇಶನ ನೀಡಿದರು.
ರೈತರಿಗೆ ಬೆಳೆ ವಿಮೆ ಅನುಕೂಲಗಳ ಬಗ್ಗೆ ಅರಿವು ಮೂಡಿಸಬೇಕು.ಅಲ್ಲದೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ತಲುಪಿಸಬೇಕು. ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನದ ಬಗ್ಗೆ ಮನೆ ಮನೆ ಸಮೀಕ್ಷೆ ನಡೆಸಿ ಖಚಿತ ಪಡಿಸಿಕೊಳ್ಳಿ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಹಾಗೂ ಕೆವೈಸಿ ಅಪ್ಡೇಟ್
ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಹಾಗೂ ಕೆವೈಸಿ ಅಪ್ಡೇಟ್ 100ರಷ್ಟು ಸಾಧನೆಯಾಗಬೇಕು. ಜಿಲ್ಲೆಯಲ್ಲಿ ಜಾಗೃತ ದಳ ಚುರುಕು ಮಾಡಿ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಸಂಪೂರ್ಣ ತಡೆದು ತಪ್ಪಿತಸ್ಥರ ವಿರುದ್ದ ಕ್ರಮ ವಹಿಸಿ ಎಂದು ಸಚಿವರು ನಿರ್ದೇಶನ ನೀಡಿದರು. ಜಲಾನಯನ ಅಭಿವೃದ್ಧಿ, ಜಲಸಂರಕ್ಷಣೆ ಬಗ್ಗೆ ಹೆಚ್ಚಿನ ಗಮನ ಹರಿಸಿ.ಸಿರಿಧಾನ್ಯ ಬೆಳೆ ಪ್ರದೇಶ ವಿಸ್ತರಣೆ ಪ್ರೋತ್ಸಾಹಿಸಿ ಎಂದು ಚಲುವರಾಯಸ್ವಾಮಿ ಹೇಳಿದರು.
ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಬೊಸ್ ರಾಜ್, ಮಾನ್ವಿ ಶಾಸಕರಾದ ಹಂಪಯ್ಯ ನಾಯಕ್, ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾಡ್ವೆ ರಾಹುಲ್ ತುಕಾರಾಂ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಚಂದ್ರಶೇಖರ್ ನಾಯಕ್ ಅಪರ ಕೃಷಿ ನಿರ್ದೇಶಕರಾದ ವೆಂಕಟರಾಮ ರೆಡ್ಡಿ ಮತ್ತಿತರರು ಹಾಜರಿದ್ದರು.