ರಾಜ್ಯ ಬಿಜೆಪಿ ಬರ ಅಧ್ಯಯನಕ್ಕೆ ತಕರಾರು ಇಲ್ಲ
ಬೆಂಗಳೂರು:ಬಿಜೆಪಿಯವರು ರಾಜಕಾರಣಕ್ಕಾಗಿ ಬರ ಅಧ್ಯಯನ ಮಾಡುತ್ತಿದ್ದಾರೆ, ಅದರ ಬದಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಪರಿಹಾರ ಕೊಡಿಸಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬರ ಅಧ್ಯಯನಕ್ಕೆ ಹಾಸನಕ್ಕೆ ತೆರಳಿರುವ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ತಂಡ ಬರ ಅಧ್ಯಯನ ನಡೆಸಿ ಹೋಗಿದೆ, ಇನ್ನೂ ವರದಿ ನೀಡಿಲ್ಲ ಎಂದರು.
ರಾಜ್ಯ ಬಿಜೆಪಿ ಬರ ಅಧ್ಯಯನ ಮಾಡಲಿ, ನಮ್ಮ ತಕರಾರು ಇಲ್ಲ, ರೈತರು ಹಾಗೂ ಕರ್ನಾಟಕದ ಬಗ್ಗೆ ಕಾಳಜಿ ಇದ್ದರೆ ಕೇಂದ್ರದಿಂದ ಪರಿಹಾರ ಕೊಡಿಸಲಿ.
ಕೇಂದ್ರ ಸರ್ಕಾರಕ್ಕೆ ೧೭,೯೦೦ ಕೋಟಿ ರೂ. ಪರಿಹಾರ ಕೋರಲಾಗಿದೆ, ರಾಜ್ಯದಲ್ಲಿ ಸುಮಾರು ೩೩,೭೦೦ ಕೋಟಿ ರೂ. ಮೌಲ್ಯದ ಬೆಳೆ ನಷ್ಟವಾಗಿದೆ ಎಂದರು.
ರಾಜ್ಯದ ೨೫ ಬಿಜೆಪಿ ಸಂಸದರು ಪರಿಹಾರ ಮೊದಲು ಪರಿಹಾರ ಕೊಡಿಸಲಿ, ಕೇಂದ್ರದ ಮಂತ್ರಿಗಳು ರಾಜ್ಯ ಬಿಜೆಪಿ ಸಂಸದರಿಗೆ ಸಮಯವನ್ನೇ ನೀಡಿಲ್ಲ, ಇವರಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ ಎಂದರು.
ಬರ ಕುರಿತು ವೈಜ್ಞಾನಿಕ ಸಮೀಕ್ಷೆಯಾಗಿಲ್ಲ ಎಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸಮೀಕ್ಷೆ ಮಾಡಿದವರು ಕೇಂದ್ರ ಸರ್ಕಾರದ ತಂಡ, ಈ ಬಗ್ಗೆ ಅವರೇ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು ಎಂದರು.