ಅರಣ್ಯಾಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೂಡಿಗೆರೆ :ಮೂಡಿಗೆರೆಯಲ್ಲಿ ಸುಮಾರು ಆನೆಗಳು ಕಾಡಿನಿಂದ ಬಂದಿವೆ. ಆನೆಗಳನ್ನು ಇಲ್ಲಿಂದ ಸ್ಥಳಾಂತರಿಸಿ ಮರಳಿ ಕಾಡಿಗೆ ಕಳುಹಿಸಲು ಶೀಘ್ರ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡಿಗೆರೆಯಲ್ಲಿ ಆನೆ ತುಳಿತಕ್ಕೆ ಒಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳ ಸಭೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದ ದೊಡ್ಡಯ್ಯ ಅವರೊಂದಿಗೆ ಮಾತನಾಡಿದ್ದೇನೆ. ಅರಣ್ಯ ಸಚಿವರು ಕೂಡ ಇಲ್ಲಿಗೆ ಭೇಟಿ ನೀಡಲಿದ್ದಾರೆ ಎಂದರು.
ಅರಣ್ಯ ಸಚಿವರೊಂದಿಗೆ ಈ ಸಂಬಂಧ ಮಾತನಾಡಿದ್ದೇನೆ. ಶಾಸಕಿ ನಯನಾ ಮೋಟಮ್ಮ ಸೇರಿದಂತೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿದ್ದು, ಆನೆಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಪ್ರಯತ್ನ ವಿಫಲವಾಗಲಿದೆ
ಆಪರೇಷನ್ ಕಮಲದ ಏಜೆಂಟರು ಕಾಂಗ್ರೆಸ್ ಶಾಸಕರ ಸಂಪರ್ಕದಲ್ಲಿದ್ದಾರೆ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಯಾರೇ ಸಂಪರ್ಕ ಮಾಡಿದರೂ ಕೂಡ ನಮ್ಮ ಶಾಸಕರು ಗಟ್ಟಿಯಾಗಿದ್ದಾರೆ. ಬಿಜೆಪಿ ಪ್ರಯತ್ನ ವಿಫಲವಾಗಲಿದೆ ಎಂದರು.
