ಪರಿಷತ್ತಿನ ನಿಬಂಧನೆ ಸಂಖ್ಯೆ 4,5,6,7,9,10,17,18,20,22,24.27,32 ಮತ್ತು 33 ಕ್ಕೆ ತಿದ್ದುಪಡಿ
ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನ ಪುಷ್ಪಗಿರಿ ಮಠದ ಸಭಾಭವನದಲ್ಲಿ ಸೆಪ್ಟಂಬರ್ 3 ರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ಧ್ಯೇಯೋದ್ದೇಶಗಳ ತಿದ್ದುಪಡಿಯು ಕರ್ನಾಟಕ ಸರ್ಕಾರದ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ಕಾನೂನು ಬದ್ದವಾಗಿದೆ ಎಂದು ಕೂಲಂಕುಶವಾಗಿ ಪರಿಶೀಲಿಸಿ ಒಪ್ಪಿಗೆಯನ್ನು ನೀಡಿದ್ದಾರೆ. ಇದರಿಂದ ಪರಿಷತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ನೆರವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಪಟ್ಟಂತೆ ಪ್ರಸ್ತುತ ಜಾರಿಯಲ್ಲಿರುವ, ಪರಿಷತ್ತಿನ ನಿಬಂಧನೆಗಳಲ್ಲಿ ಕೆಲವು ನಿಯಮಗಳಿಗೆ ತಿದ್ದುಪಡಿ ತರುವ ಅವಶ್ಯಕತೆ ಇರುವ ಬಗ್ಗೆ ಜೂನ್ 22 ರಂದು ತುಮಕೂರಿನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಪರಿಣಿತ ಹಾಗೂ ಅನುಭವಿ ಸದಸ್ಯರನ್ನೊಳಗೊಂಡ ತಿದ್ದುಪಡಿ ಸಮಿತಿ ರಚಿಸಲು ಸರ್ವಾನುಮತದಿಂದ ನಿರ್ಣಯಕೈಗೊಳ್ಳಲಾಗಿತ್ತು. ಜೊತೆಗೆ ಈ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರಿಗೂ ಪತ್ರ ಬರೆದು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.
ಕಸಾಪದ ಹಲವು ನಿಬಂಧನೆಗಳಿಗೆ ತಿದ್ದುಪಡಿ
ಸಮಿತಿಯು ಯಾವುದೇ ಲೋಪ-ದೋಷಗಳು ಇರದಂತೆ ಹಾಗೂ ಕಾನೂನಾತ್ಮಕವಾಗಿ ಎಡರು-ತೊಡರುಗಳು ಉಂಟಾಗದಂತೆ ಈ ತಿದ್ದುಪಡಿಗಳನ್ನು ಸಿದ್ಧಪಡಿಸಿಕೊಟ್ಟಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಪರಿಷತ್ತಿನ ನಿಬಂಧನೆ ಸಂಖ್ಯೆ 4,5,6,7,9,10,17,18,20,22,24.27, 32 ಮತ್ತು 33ರುಗಳನ್ನು ತಿದ್ದುಪಡಿ ಮಾಡಲಾಗಿದ್ದು. ಈ ಮೂಲಕ ಪರಿಷತ್ತು ಸಮಕಾಲೀನ ವಿದ್ಯಮಮಾನಗಳಿಗೆ ಸ್ಪಂದಿಸುವುದು ಸಾಧ್ಯವಾಗಲಿದೆ.
ವಿದೇಶಗಳಲ್ಲಿರುವ ಕನ್ನಡ ಸಂಘಗಳ ಚಟುವಟಿಕೆಗಳನ್ನು ತನ್ನ ಕ್ರಿಯಾಶೀಲವ್ಯಾಪ್ತಿಗೆ ತರುವ ಉದ್ದೇಶದಿಂದ ಅವುಗಳನ್ನು ‘ಅಂಗಸಂಸ್ಥೆ’ ಗಳನ್ನಾಗಿ ಮಾಡಿ ಕೊಳ್ಳಲು ತಿದ್ದುಪಡಿಯು ಅನುವು ಮಾಡಿ ಕೊಡಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ಘಟಕಗಳನ್ನು ಸ್ಥಾಪಿಸುವದಕ್ಕಿಂತ ಇದು ಪರಿಣಾಮಕಾರಿಯಾಗಿದ್ದು, ಈ ಸಂಘ ಸಂಸ್ಥೆಗಳು ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದು ಪರಿಷತ್ತಿನ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಇದು ನೆರವು ನೀಡಲಿದೆ. ವಿಶ್ವಾದ್ಯಂತ ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪರಿಷತ್ತಿಗೆ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಈ ತಿದ್ದುಪಡಿಯನ್ನು ಮಾಡಲಾಗಿದೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಪಟ್ಟ 33 ವಿಧಿಯ ತಿದ್ದುಪಡಿಯು ಸಮ್ಮೇಳನ ಜರುಗಲಿರುವ ಜಿಲ್ಲೆಯ ಚುನಾಯಿತ ಅಧ್ಯಕ್ಷರ ಸ್ಥಾನ ಯಾವುದೇ ಕಾರಣದಿಂದ ತೆರವಾಗಿದ್ದಲ್ಲಿ ಅಥವಾ ಜಿಲ್ಲಾಧ್ಯಕ್ಷರು ಆರೋಗ್ಯದ ಸಮಸ್ಯೆಯೂ ಸೇರಿದಂತೆ ಯಾವುದೇ ಕಾರಣದಿಂದ ಸಕ್ರಿಯವಾಗಿ ಪಾಲ್ಗೊಳ್ಳಲು ಸಮರ್ಥರಲ್ಲದ ಪಕ್ಷದಲ್ಲಿ ಕೇಂದ್ರ ಪರಿಷತ್ತಿನ ಅಧ್ಯಕ್ಷರು ಸಮಿತಿಯನ್ನು ರಚಿಸಿ ಕ್ರಿಯಾಶೀಲರಾಗಲು ಅವಕಾಶ ನೀಡಲಿದೆ.
ಇದು ಕನ್ನಡ ಸಾಹಿತ್ಯ ಪರಿಷತ್ತಿನ ಬದ್ದತೆಗೆ ನಿದರ್ಶನವಾಗಿದ್ದು ಎಂತಹ ಸಂದರ್ಭದಲ್ಲಿಯೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆಯಲು ನೆರವು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಆಚರಿಸಲು ಸ್ಥಳ ನಿಗದಿಯಾಗಿರುವುದರಿಂದ ಸಮ್ಮೇಳನ ಸಂಘಟನೆಗೆ ಅನಿವಾರ್ಯತೆ ಇರುವ ಕಾರಣ, ಇವೆಲ್ಲವುಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಮಂಡ್ಯ ಜಿಲ್ಲಾಧ್ಯಕ್ಷರನ್ನು ಒಳಗೊಂಡಂತೆ ಒಂದು ಸಮಿತಿಯನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರು ರಚಿಸಿ ಕಾರ್ಯಪ್ರವೃತ್ತರಾಗಬೇಕಿದೆ. ಈ ಹಿನ್ನೆಲೆಯಲ್ಲಿ ನಿಬಂಧನೆಗಳಿಗೆ ತಿದ್ದುಪಡಿಯ ಮೂಲಕ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದ್ದಾರೆ.