ಇನ್ನುಮುಂದೆ ರೈತರು ಹೊಸ ಸಂಪರ್ಕ ಪಡೆಯಲು 2 ಲಕ್ಷ ರೂ.ವರೆಗೂ ವೆಚ್ಚ ಭರಿಸಬೇಕು
ಬೆಂಗಳೂರು: ಗೃಹ ಜ್ಯೋತಿ ನೀಡಿದ ಸಿದ್ದರಾಮಯ್ಯ ಸರ್ಕಾರ ಕೃಷಿ ಪಂಪ್‌ಸೆಟ್‌ಗಳ ಹೊಸ ವಿದ್ಯುತ್ ಸಂಪರ್ಕಕ್ಕಿದ್ದ ಸಬ್ಸಿಡಿ ರದ್ದು ಮಾಡಿದೆ.
ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಅಕ್ಟೋಬರ್ 22 ನಂತರ ನೋಂದಾಯಿಸಲ್ಪಡುವ ಕೃಷಿ ಪಂಪ್‌ಸೆಟ್‌ಗಳಿಗೆ ಮೂಲ ಸೌಕರ್ಯವನ್ನು ರೈತರು ಸ್ವಂತ ವೆಚ್ಚದಲ್ಲಿ ಮಾಡಿಸಿಕೊಳ್ಳಬೇಕು.
ಸರ್ಕಾರದ ಈ ನಿರ್ಧಾರದಿಂದ ರೈತರು ಹೊಸ ಸಂಪರ್ಕ ಪಡೆಯಲು ಇನ್ನುಮುಂದೆ ಎರಡು ಲಕ್ಷ ರೂ.ವರೆಗೂ ವೆಚ್ಚ ಮಾಡಬೇಕು. ಈ ಮೊದಲು 22ರಿಂದ 25 ಸಾವಿರ ರೂ.ಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದರು.
ಮಳೆ ಇಲ್ಲದೆ, ಬರಪರಿಸ್ಥಿತಿ ಒಂದೆಡೆಯಾದರೆ, ವಿದ್ಯುತ್ ಅಭಾವ ಸಣ್ಣ ಮತ್ತು ಮಧ್ಯಮ ರೈತರಿಗೆ ದೊಡ್ಡ ಶಾಕ್ ನೀಡಿದೆ.
ವಿದ್ಯುತ್ ಸರಬರಾಜು ಕಂಪನಿಗಳು 2015ರಿಂದ ಸರ್ಕಾರ ಹೊರಡಿಸಿರುವ ಆದೇಶದವರೆಗೂ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಮೂಲಸೌಕರ್ಯ ಕಲ್ಪಿಸಲು ಪರ್ಯಾಯ ಮಾರ್ಗ ಹಿಡಿದಿದೆ.
ಬರ ಪರಿಸ್ಥಿತಿಯಲ್ಲಿ ವಿದ್ಯುತ್ ಅಭಾವ ರೈತರಿಗೆ ದೊಡ್ಡ ಶಾಕ್
ಅಕ್ರಮ ಸಂಪರ್ಕ ಹೊಂದಿರುವವರು ಸೋಲಾರ್ ವಿದ್ಯುತ್ ಬಳಕೆಗೆ ಆದ್ಯತೆ ನೀಡಬೇಕು. ಅಂಥವರಿಗೆ ಕೇಂದ್ರ ಸರ್ಕಾರ ಶೇ.30 ಹಾಗೂ ರಾಜ್ಯ ಸರ್ಕಾರ ಶೇ.30 ರಷ್ಟು ಸಬ್ಸಿಡಿ ನೀಡುತ್ತಿತ್ತು. ಇದೀಗ ರಾಜ್ಯ ಸರ್ಕಾರ ಸಬ್ಸಿಡಿ ಪ್ರಮಾಣವನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಿದೆ.
ಫಲಾನುಭವಿ ರೈತರು ಶೇ.20ರಷ್ಟು ರೈತರು ಹಣ ಸಂದಾಯ ಮಾಡಿ ಸೌರ ವಿದ್ಯುತ್ ಸಂಪರ್ಕ ಪಡೆದು ಅಕ್ರಮ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಿಕೊಳ್ಳಬಹುದಾಗಿದೆ.
ಸೌರಶಕ್ತಿ ಅಳವಡಿಕೆಗೆ ಬಳಸಲು ಹೆಚ್ಚು ಒತ್ತು
ವಿದ್ಯುತ್ ಸರಬರಾಜು ಕಂಪನಿಗಳು ಅಕ್ರಮ ಪಂಪ್‌ಸೆಟ್‌ಗಳಿಗೆ ಸಕ್ರಮಗೊಳಿಸಲು ಹೂಡುತ್ತಿದ್ದ ಬಂಡವಾಳವನ್ನು ಸೌರಶಕ್ತಿ ಅಳವಡಿಕೆಗೆ ಬಳಸಲು ಹೆಚ್ಚು ಒತ್ತು ನೀಡುವಂತೆ ನಿರ್ದೇಶಿಸಿದೆ.
ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ 200ಯುನಿಟ್ ಬಳಕೆ ಮಾಡಿಕೊಳ್ಳುವ ಎಲ್ಲರ ಮನೆಗೂ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಐದು ಗ್ಯಾರಂಟಿಗಳಲ್ಲಿ ಇದನ್ನು ಘೋಷಣೆ ಮಾಡಿತ್ತು.
ಅಧಿಕಾರಕ್ಕೆ ಬಂದ ಎರಡು-ಮೂರು ತಿಂಗಳಲ್ಲೇ, ಪಕ್ಷ ಘೋಷಣೆ ಮಾಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಷ್ಠಾನಗೊಳಿಸಿದರು. ಆದರೆ, ಇದೇ ಕಾಲದಲ್ಲಿ ಹೆಚ್ಚು ವಿದ್ಯುತ್ ಬಳಕೆ ಮಾಡಿಕೊಳ್ಳುವವರಿಗೆ ದರವನ್ನು (ದುಬಾರಿ) ಹೆಚ್ಚಳ ಮಾಡಲಾಯಿತು.
ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾದ್ದರಿಂದ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿನಿತ್ಯ 3 ಪೇಸ್‌ನಲ್ಲಿ ನೀಡುತ್ತಿದ್ದ ವಿದ್ಯುತ್ ಅನ್ನು 5 ಗಂಟೆಗೆ ಇಳಿಸಲಾಗಿತ್ತು. ಮತ್ತೆ 7ಗಂಟೆ ಕೊಡುವುದಾಗಿ ಘೋಷಿಸಿದ್ದಾರೆ.
ಅನಧಿಕೃತ ಕೊಳವೆ ಬಾವಿ ಕೊರೆಯದಂತೆ ಮತ್ತೊಂದು ಆದೇಶ
7 ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿದ ಬೆನ್ನಲ್ಲೇ ಕೃಷಿ ಪಂಪ್‌ಸೆಟ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣ ರದ್ದು ಮಾಡಿರುವುದಲ್ಲದೆ, ಬೆಂಗಳೂರು ನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ ಅನಧಿಕೃತವಾಗಿ ಕೊಳವೆ ಬಾವಿ ಕೊರೆಯದಂತೆ ಮತ್ತೊಂದು ಆದೇಶವನ್ನು ಸರ್ಕಾರ ಹೊರಡಿಸಿದೆ.
ಅಷ್ಟೇ ಅಲ್ಲ, ಇದರ ಹೊಣೆಗಾರಿಕೆಯನ್ನು ಕೆಲವು ಅಧಿಕಾರಿಗಳಿಗೆ ವಹಿಸಿ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಿದೆ. ಸದ್ಯಕ್ಕೆ ವಿದ್ಯುತ್ ಬೇಡಿಕೆ ಪ್ರಮಾಣ ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿದೆ. ಜೊತೆ ವಿದ್ಯುತ್ ಉತ್ಪಾದನೆಯೂ ಕುಸಿತ ಕಂಡಿದೆ.
ಕೊರತೆ ನೀಗಿಸಿ ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಉತ್ತರ ಪ್ರದೇಶ, ಪಂಜಾಬ್ ಸರ್ಕಾರ ಹಾಗೂ ಖಾಸಗಿ ಕಂಪನಿಗಳಿಂದ 6000 ಮೆ.ವ್ಯಾ.ವಿದ್ಯುತ್ ಖರೀದಿಗೆ ಮುಂದಾಗಿದೆ.