ನೇರ-ಪರೋಕ್ಷವಾಗಿ ಸಾವಿರಾರು ಉದ್ಯೋಗಗಳು ಸೃಷ್ಟಿ:ಎಂಬಿ ಪಾಟೀಲ್
ಬೆಂಗಳೂರು:ಬೆಂಗಳೂರು-ಮೈಸೂರು ನಗರಗಳ ನಡುವೆ ನಾಲೆಡ್ಜ್ ಹೆಲ್ತ್ ಸಿಟಿ( ಆರೋಗ್ಯ ಜ್ಞಾನ ನಗರ) ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ವಿಶ್ವದ ಖ್ಯಾತ ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳು ಒಂದೇ ಕೇಂದ್ರದಲ್ಲಿ ನೆಲೆಯೂರಲಿವೆ.
ಅರಮನೆ ನಗರಿ ಮತ್ತು ಮಾಹಿತಿ ತಂತ್ರಜ್ಞಾನ ನಗರ ನಡುವೆ ಉತ್ತಮ ರಸ್ತೆ, ರೈಲು, ವಿಮಾನ ಸಂಪರ್ಕ ಹಾಗೂ ರಾಜಧಾನಿ ಜೊತೆಗೆ ಚನ್ನೈ-ಪುಣೆ ಕೈಗಾರಿಕಾ ಕಾರಿಡಾರ್‌ಗೆ ಸಮೀಪ ಇರುವುದರಿಂದ ಇದನ್ನು ಸ್ಥಾಪಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸಮೀಪದಲ್ಲಿ ಒಂದು ಸ್ಥಳ ಸಮೀಕ್ಷೆ ನಡೆಸಲಾಗಿತ್ತು. ಹೆಚ್.ಡಿ.ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಉಪ ನಗರ ಸ್ಥಾಪನೆಗಾಗಿ ಈ ಅವಳಿ ನಗರದ ನಡುವೆ ೧೦ ಸಾವಿರ ಎಕರೆ ಗುರುತಿಸಿ ಭೂ ಸ್ವಾಧೀನಕ್ಕೆ ಆದೇಶ ಮಾಡಿದ್ದರು.
ಈ ಸ್ಥಳದಲ್ಲಿ ಮೊದಲ ಹಂತದಲ್ಲಿ ಎರಡು ಸಾವಿರ ಎಕರೆ ಭೂಮಿ ಬಳಸಿಕೊಂಡು ನಂತರ ೧೦ ಸಾವಿರ ಎಕರೆವರೆಗೆ ವಿಸ್ತರಣೆ ಮಾಡುವ ಅವಕಾಶ ಕಲ್ಪಿಸಲಾಗಿತ್ತು.
ಉದ್ಯಮಿಗಳು, ತಜ್ಞರ ಮಹತ್ತ್ವದ ದುಂಡುಮೇಜಿನ ಸಭೆ
ಜ್ಞಾನ ಆರೋಗ್ಯ ನಗರದಲ್ಲಿ ವಿಶ್ವದ ೧೫ಕ್ಕೂ ಹೆಚ್ಚು ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ತಲೆ ಎತ್ತಲಿದ್ದು, ಈ ಸಂಬಂಧ ಉನ್ನತ ಶಿಕ್ಷಣ ಸಚಿವ ಎಂ.ಬಿ.ಪಾಟೀಲ್ ಅವರು ಗಣ್ಯ ಉದ್ಯಮಿಗಳು, ವೈದ್ಯರು, ಶಿಕ್ಷಣ ತಜ್ಞರು ಮತ್ತಿತರರ ಮಹತ್ತ್ವದ ದುಂಡುಮೇಜಿನ ಸಭೆಯನ್ನು ನಡೆಸಲಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ. ಇವರಲ್ಲದೆ ಖ್ಯಾತನಾಮರಾದ ಕ್ರಿಸ್ ಗೋಪಾಲಕೃಷ್ಣನ್, ಡಾ.ದೇವಿ ಶೆಟ್ಟಿ, ಗೀತಾಂಜಲಿ ಕಿರ್ಲೋಸ್ಕರ್, ಪ್ರಶಾಂತ್ ಪ್ರಕಾಶ್, ಮಣಿಪಾಲ್ ಆಸ್ಪತ್ರೆಗಳ ಸಮೂಹದ ಡಾ.ದೀಪಕ್ ವೇಣುಗೋಪಾಲನ್, ಡಾ.ಶರಣ್ ಪಾಟೀಲ್, ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ ಸಂಸ್ಥೆಯ ನಿರ್ದೇಶಕ ಡಾ.ಎಲ್ ಎಸ್.ಶಶಿಧರ, ಏಕಸ್ ಉದ್ಯಮ ಸಂಸ್ಥೆಯ ಸಿಇಒ ಅರವಿಂದ ಮೆಳ್ಳಿಗೇರಿ, ಜೆರೋದಾ ಸಂಸ್ಥೆಯ ಸಹಸಂಸ್ಥಾಪಕ ನಿಖಿಲ್ ಕಾಮತ್, ಕಾಸರಗೋಡು ಉಲ್ಲಾಸ್ ಕಾರಂತ್, ಐಐಎಂಬಿ ನಿರ್ದೇಶಕ ಡಾ.ಹೃಷಿಕೇಶ್ ಕೃಷ್ಣನ್ ಭಾಗವಹಿಸಲಿದ್ದಾರೆ.
ಕೆಎಚ್ಆರ್ ಐ ಸಿಟಿಯಲ್ಲಿ ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಗಳು
ಉದ್ದೇಶಿತ ಕೆ.ಎಚ್.ಆರ್.ಐ ಸಿಟಿಯಲ್ಲಿ ನಾಲ್ಕೂ ವಲಯಗಳಿಗೆ ಸೇರಿದ ಜಾಗತಿಕ ಮಟ್ಟದ ಪ್ರತಿಷ್ಠಿತ ಕಂಪನಿಗಳು, ವಿಶ್ವವಿದ್ಯಾಲಯಗಳು, ಸಂಶೋಧನಾ ಕೇಂದ್ರಗಳು ಬರಲಿದ್ದು, ತಮ್ಮ ಕಾರ್ಯ ಚಟುವಟಿಕೆ ಆರಂಭಿಸಲಿವೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ನೇರವಾಗಿ ಮತ್ತು ಇದಕ್ಕಿಂತ ಹಲವು ಪಟ್ಟುಗಳಲ್ಲಿ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದಕ್ಕಾಗಿ ಸ್ಪಷ್ಟವಾದ ನೀಲನಕ್ಷೆಯನ್ನು ರೂಪಿಸಲು ಮತ್ತು ನಿರ್ದಿಷ್ಟ ಕಾರ್ಯತಂತ್ರವನ್ನು ರೂಪಿಸಬೇಕಾದ್ದು ಅತ್ಯಗತ್ಯವಾಗಿದೆ. ಈ ಉದ್ದೇಶದಿಂದಲೇ ದುಂಡು ಮೇಜಿನ ಸಭೆ ಕರೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ನಾವು ಹಾಕಿಕೊಳ್ಳುವ ನಿರ್ದಿಷ್ಟ ಗುರಿಗಳನ್ನು ಸಾಧಿಸಲು ತಂಡಗಳನ್ನು ರಚಿಸಲಾಗುವುದು. ಒಟ್ಟಾರೆಯಾಗಿ ಯೋಜನೆಯು ರಾಜ್ಯಕ್ಕೆ ವಾಣಿಜ್ಯ ದೃಷ್ಟಿಯಿಂದ ಲಾಭದಾಯಕವಾಗಿ ಪರಿಣಮಿಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಜೊತೆಗೆ ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಸಹಭಾಗಿತ್ವವು ಪರಿಣಾಮಕಾರಿಯಾಗಿ ಇರುವಂತೆ ನೋಡಿಕೊಳ್ಳಬೇಕಾಗಿದೆ.
ಇದಕ್ಕೆ ಉದ್ಯಮಿಗಳು ಸೇರಿದಂತೆ ನಾಲ್ಕೂ ವಲಯಗಳ ಸಾಧಕರ ಸಲಹೆ/ಅಭಿಪ್ರಾಯಗಳನ್ನು ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ. ಸಭೆಯಲ್ಲಿ ಉದ್ದೇಶಿತ ಯೋಜನೆಯ ಬಗ್ಗೆ ವಿವರವಾದ ಪ್ರಾತ್ಯಕ್ಷಿಕೆಯನ್ನೂ ಸಾದರಪಡಿಸಲಾಗುವುದು ಎಂದು ಪಾಟೀಲ ಹೇಳಿದ್ದಾರೆ.