ಒಕ್ಕಲಿಗ ಸಮುದಾಯ ಹಾದಿ ತುಳಿದ ವೀರಶೈವ ಸಮುದಾಯ
ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಒಕ್ಕಲಿಗ ಸಮುದಾಯ ವಿರೋಧ ಮಾಡಿದ ಬೆನ್ನಲ್ಲೇ ವೀರಶೈವ ಸಮುದಾಯವೂ ಅದೇ ಹಾದಿಯನ್ನು ತುಳಿದಿದೆ.
ಕಾಂತರಾಜ್ ಅಧ್ಯಕ್ಷರಾಗಿದ್ದ ಹಿಂದುಳಿದ ವರ್ಗಗಳ ಆಯೋಗದ ವರದಿ ಅವೈಜ್ಞಾನಿಕವಾಗಿದೆ. ಅಲ್ಲದೆ, ಲೋಪ-ದೋಷಗಳಿಂದ ಕೂಡಿದ್ದು, ಅದನ್ನು ಸ್ವೀಕರಿಸಬಾರದು ಎಂದು ಅಖಿಲ ಭಾರತ ವೀರಶೈವ ಮಹಾ ಸಭಾ ಇಂದಿಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಜಾತಿಗಣತಿ ಅಗತ್ಯವಿದ್ದರೆ ಮತ್ತೊಮೆ ಮನೆ ಮನೆಗೆ ಭೇಟಿ ವೈಜ್ಞಾನಿ ಸಮೀಕ್ಷೆ ನಡೆಸಿ ವರದಿ ಪಡೆದುಕೊಳ್ಳಬೇಕು. ನಾವು ಜಾತಿಗಣತಿ ವಿರೋಧಿಗಳಲ್ಲ. ಆದರೆ, ಸರ್ಮಪಕ ಹಾಗೂ ವಾಸ್ತವ ಸಂಗತಿಗಳಿಂದ ಕೂಡಿರಬೇಕು ಎಂದು ಸಮಿತಿ ಅಧ್ಯಕ್ಷ ಹಾಗೂ ಆಡಳಿತ ಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಮತ್ತೆ ಸಮೀಕ್ಷೆ ನಡೆಸಬೇಕು
ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಗೋಡೆಗಳ ನಡುವೆ ಕುಳಿತು ಸಿದ್ಧಪಡಿಸಿರುವ ವರದಿಯನ್ನು ಒಪ್ಪಲು ಸಾಧ್ಯವಿಲ್ಲ. ಆಧಾರ್ ಕಾರ್ಡ್‌ಅನ್ನು ಆಧಾರವಾಗಿಟ್ಟುಕೊಂಡು ಮತ್ತೆ ಸಮೀಕ್ಷೆ ನಡೆಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ.
ಜಾತಿ ಗಣತಿ ವರದಿ ಈಗಾಗಲೇ ೮ ವರ್ಷಗಳಷ್ಟು ಹಳೆಯದಾಗಿದ್ದು, ನ್ಯೂನ್ಯತೆಗಳಿಂದ ಕೂಡಿದೆ. ನ್ಯೂನ್ಯತೆಗಳಿರುವ ಕಾರಣ ಹೊಸದಾಗಿ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಬೇಕು.
ಸಕಲ ಜಾತಿ, ಜನಾಂಗಗಳಿಗೆ ಲೇಸನ್ನೇ ಬಯಸುವ ಸಮಾಜ ವೀರಶೈವ-ಲಿಂಗಾಯಿತ ಸಮುದಾಯವಾಗಿದೆ. ಎಲ್ಲರ ಒಳಿತನ್ನು ಬಯಸುವುದು ಸಮುದಾಯದ ಗುರಿ ಎಂದಿದ್ದಾರೆ.
ಮನೆಗಳಿಗೆ ಭೇಟಿ ನೀಡದೆ ವರದಿ ಸಿದ್ಧಪಡಿಸಿದ ಆರೋಪ
ಜಾತಿ ಗಣತಿ ಸಮೀಕ್ಷೆಯೇ ಸಮರ್ಪಕವಾಗಿ ನಡೆಸಿಲ್ಲ. ಹಲವರ ಮನೆಗಳಿಗೆ ಭೇಟಿ ನೀಡದೆ, ವರದಿ ಸಿದ್ಧಪಡಿಸಲಾಗಿದೆ ಎಂಬ ದೂರುಗಳಿವೆ.
ಸಮೀಕ್ಷೆಯಲ್ಲಿ ವೀರಶೈವ-ಲಿಂಗಾಯಿತ ಸಮುದಾಯ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ಮಾಹಿತಿ ಇದೆ. ಇದರಿಂದ ಸಮಾಜಕ್ಕೆ ತೀವ್ರ ಸ್ವರೂಪದ ನಷ್ಟವಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.
ಸರ್ಕಾರ ಮತ್ತೊಮ್ಮೆ ಈ ಬಗ್ಗೆ ವಿವೇಚನಾಯುಕ್ತವಾಗಿ ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದರು.