ರಾಜ್ಯ ಸರ್ಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು: ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೇಮಕಾತಿ ಮರು ಪರೀಕ್ಷೆಗೆ ಆದೇಶಿಸಿ ಸರ್ಕಾರ ಹೊರಡಿಸಿದ್ದ ಸೂಚನೆಯನ್ನು ರಾಜ್ಯ ಹೈಕೋರ್ಟ್ ಇಂದಿಲ್ಲಿ ಎತ್ತಿಹಿಡಿದಿದೆ.
ಕಳೆದ ಒಂದೂವರೆ ವರ್ಷಗಳಿಂದ ಪಿಎಸ್‌ಐ ನೇಮಕಾತಿ ಗೊಂದಲಕ್ಕೆ ತೆರೆ ಎಳೆದಿರುವ ಹೈಕೋರ್ಟ್ 545 ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆ ಮತ್ತು ಬಳಿಕ ಪ್ರಕಟಿಸಿದ ನೇಮಕಾತಿ ಪಟ್ಟಿ ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ನ್ಯಾಯಾಲಯ ಅವಕಾಶ ಮಾಡಿಕೊಟ್ಟಿದೆ.
ನೇಮಕಾತಿಯ ಆಯ್ಕೆ ಪಟ್ಟಿ ರದ್ದು
ಹಿಂದಿನ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಹಗರಣ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸಿದ್ದ ಅಂದಿನ ಸರ್ಕಾರ, ಆಯ್ಕೆ ಪಟ್ಟಿಯನ್ನೇ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿತ್ತು.
ಸರ್ಕಾರದ ಈ ಆದೇಶ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಾದ-ಪ್ರತಿವಾದ ಆಲಿಸಿ ಇಂದು ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ದಿನೇಶ್ ಕುಮಾರ್ ಹಾಗೂ ಪಿ.ಜಿ. ಶಿವಶಂಕರೇಗೌಡ ಅವರನ್ನೊಳಗೊಂಡ ವಿಭಾಗೀಯ ಪೀಠವು ಸರ್ಕಾರದ ಆದೇಶವನ್ನು ಎತ್ತಿಹಿಡಿದು ಮರುಪರೀಕ್ಷೆ ನಡೆಸಲು ಅನುವು ಮಾಡಿಕೊಟ್ಟಿದೆ.
ಮರು ಪರೀಕ್ಷೆ ಬೇಡ ಎಂಬ ಮನವಿ ತಿರಸ್ಕೃತ
ಮರು ಪರೀಕ್ಷೆ ಬೇಡ, ಕಳಂಕಿತರನ್ನು ಹೊರತುಪಡಿಸಿ ನೇಮಕಾತಿ ಪಟ್ಟಿ ಪ್ರಕಟಿಸಲು ಸರ್ಕಾರಕ್ಕೆ ಆದೇಶ ನೀಡುವಂತೆ ಮಾಡಿಕೊಂಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ 800 ಪಿಎಸ್‌ಐ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನ ಕೈಗೊಂಡಿತ್ತು. ಆದರೆ, ಹಳೆಯ ನೇಮಕಾತಿ ವಿಚಾರದಲ್ಲಿ ನ್ಯಾಯಾಲಯ ತೀರ್ಪು ನೀಡದ ಕಾರಣ ಹೊಸ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿರಲಿಲ್ಲ.
ಇದೀಗ ನ್ಯಾಯಾಲಯ ತೀರ್ಪು ಪ್ರಕಟಿಸಿರುವುದರಿಂದ 545 ರ ಜೊತೆಗೆ 800 ಹುದ್ದೆಗಳಿಗೂ ಏಕಕಾಲದಲ್ಲಿ ಪರೀಕ್ಷೆ ನಡೆಸಲಿದೆಯೇ ಎಂದು ಕಾದು ನೋಡಬೇಕು.
ರಾಜ್ಯ ಸರ್ಕಾರ ಮರು ಪರೀಕ್ಷೆ ನಡೆಸಲು ಉದ್ದೇಶಿಸಿದ್ದ ತೀರ್ಮಾನದಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶ ಮಾಡಲಾಗದು ಎಂದು ವಿಭಾಗೀಯ ಪೀಠ ಈ ಹಿಂದೆಯೇ ಮೌಖಿಕವಾಗಿ ತಿಳಿಸಿತ್ತು.
545 ಹುದ್ದೆಗೆ 2021ರ ಅಕ್ಟೋಬರ್ 3ರಂದು ಲಿಖಿತ ಪರೀಕ್ಷೆ ನಡೆಸಿದ್ದು, ಈ ಪರೀಕ್ಷೆಗೆ 54,289 ಅಭ್ಯರ್ಥಿಗಳು ಹಾಜರಾಗಿದ್ದರು.
ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಅಕ್ರಮ ಎಸಗಿದ ಆರೋಪ
ಪರೀಕ್ಷೆ ಬರೆದ 52 ಅಭ್ಯರ್ಥಿಗಳು ಅಕ್ರಮ ಎಸಗಿದ ಕಾರಣದಿಂದಾಗಿ ಆಯ್ಕೆಗೊಂಡಿದ್ದ ಇತರೆ ಅಭ್ಯರ್ಥಿಗಳಿಗೆ ತೀರ್ಪು ನಿರಾಸೆ ತಂದಿದೆ.
ಒಟ್ಟಾರೆ ಹಗರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಸೇರಿದಂತೆ 110 ಜನರನ್ನು ಬಂಧಿಸಲಾಗಿತ್ತು.
ಇತ್ತೀಚೆಗಷ್ಟೆ ಅಮೃತ್‌ಪಾಲ್ ಅವರಿಗೆ ಜಾಮೀನು ದೊರೆತು ಹೊರಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಎಡಿಜಿಪಿ ಮಟ್ಟದ ಅಧಿಕಾರಿಯೊಬ್ಬರು ಹಗರಣದಲ್ಲಿ ಸಿಲುಕಿ ಬಂಧನಕ್ಕೊಳಗಾಗಿದ್ದು ಇದೇ ಮೊದಲು.