ಗ್ಯಾರಂಟಿ ವಿರೋಧಿಸಿದರೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸುತ್ತಾರೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರೇ, ನಿಮಗೆ ಯಾಕೆ ರಾಜ್ಯದ ಬಡವರ ಮೇಲೆ ಈ ಪರಿಯ ದ್ವೇಷ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ದಿನದಿಂದ ಅದರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ನಿಮ್ಮ ದಿನಚರಿಯಾಗಿ ಬಿಟ್ಟಿದೆ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವುದೆಂದರೆ ಕೋಟ್ಯಂತರ ಸಂಖ್ಯೆಯಲ್ಲಿರುವ ಬಡ ಫಲಾನುಭವಿಗಳನ್ನು ವಿರೋಧಿಸುವುದೆಂದೇ ಅರ್ಥ. ಯಾಕೆ ಬಡವರ ಹೊಟ್ಟೆಗೆ ಹೊಡೆಯುವ ಕಿಚ್ಚು? ಎಂದು ಅವರು ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ಪ್ರಶ್ನಿಸಿದ್ದಾರೆ.
ರಾಜ್ಯದ ಕೋಟ್ಯಂತರ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳ ಲಾಭ ಪಡೆದು ಸಂಭ್ರಮಿಸುತ್ತಿದ್ದಾರೆ. ಈ ಸಂಭ್ರಮದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮತದಾರರೂ ಸೇರಿದ್ದಾರೆ. ಗ್ಯಾರಂಟಿ ಯೋಜನೆಗಳ ಫಲಿತಾಂಶವನ್ನು ತಿಳಿದುಕೊಳ‍್ಳಬೇಕಾದ ಪ್ರಾಮಾಣಿಕ ಉದ್ದೇಶ ನಿಮಗಿದ್ದರೆ ಬೆಂಗಳೂರಿನಲ್ಲಿ ಕೂತು ಪತ್ರಿಕಾಗೋಷ್ಠಿ ನಡೆಸುವುದಲ್ಲ, ಹಳ್ಳಿಗಳಿಗೆ ಹೋಗಿ ಅಲ್ಲಿರುವ ಫಲಾನುಭವಿಗಳನ್ನು ಮಾತನಾಡಿಸಿ ಎಂದು ತಿರುಗೇಟು ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಬಹಳ ಮುಖ್ಯವಾಗಿ ರಾಜ್ಯದ ಬಡಜನರನ್ನು ಗುರಿಯಾಗಿಸಿಕೊಂಡು ರೂಪಿಸಿರುವಂತಹದ್ದು. ಅದು ಶ್ರೀಮಂತರು ಇಲ್ಲವೇ ಉದ್ಯಮಿಗಳಿಗೆ ನೆರವಾಗುವ ತೆರಿಗೆ ವಿನಾಯಿತಿಯೂ ಅಲ್ಲ, ಅವರ ಸಾಲ ಮನ್ನಾ ಮಾಡುವ ಯೋಜನೆಯೂ ಅಲ್ಲ. ವಂಚಕ ಉದ್ಯಮಿಗಳಿಗೆ ನೆರವಾಗಲು ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸೊಲ್ಲೆತ್ತಲಾಗದ ಕುಮಾರಸ್ವಾಮಿಯವರು ಮೂರು ಹೊತ್ತು ಗ್ಯಾರಂಟಿ ಯೋಜನೆಗಳ ಚುಂಗು ಹಿಡಿದು ಜಗ್ಗಾಡುತ್ತಿದ್ದಾರೆ.
ನಿಮ್ಮ ಪಕ್ಷವನ್ನು ತಿರಸ್ಕರಿಸಿದ್ದಕ್ಕಾಗಿ ದ್ವೇಷವೇ?
ಸುಳ್ಳು ಆರೋಪಗಳ ಮೂಲಕ ದಿನನಿತ್ಯ ನನ್ನ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕುಮಾರಸ್ವಾಮಿ ಅವರೇ, ನನ್ನನ್ನು ಟೀಕಿಸುವುದರಿಂದ ನಿಮ್ಮ ಮನಸಿಗೆ ಶಾಂತಿ ಸಿಗುವುದಿದ್ದರೆ ನಿಮ್ಮ ದ್ವೇಷಾಸೂಯೆ ಮುಂದುವರಿಯಲಿ. ಚುನಾವಣಾ ಸೋಲಿನ ನಿಮ್ಮ ನಿರಾಶೆ, ಅದರಿಂದಾಗಿರುವ ಹತಾಶೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ರಾಜ್ಯದ ಬಡವರನ್ನು ಯಾಕೆ ಈ ರೀತಿ ದ್ವೇಷಿಸುತ್ತಿದ್ದೀರಿ. ಬಡವರ ಕಲ್ಯಾಣಕ್ಕಾಗಿಯೇ ರೂಪಿಸಲಾಗಿರುವ ಯೋಜನೆಗಳನ್ನು ಯಾಕೆ ವಿರೋಧಿಸುತ್ತಿದ್ದೀರಿ? ಕಳೆದ ಚುನಾವಣೆಯಲ್ಲಿ ಅವರು ನಿಮ್ಮ ಪಕ್ಷವನ್ನು ತಿರಸ್ಕರಿಸಿದ್ದಕ್ಕಾಗಿ ದ್ವೇಷವೇ?
ಬಿಜೆಪಿ ನಡವಳಿಕೆ ಪ್ರಶ್ನಿಸುವ ದಮ್ಮು ತಾಕತ್ ಕುಮಾರಸ್ವಾಮಿಗೆ ಇಲ್ಲ.
ಭಾರತೀಯ ಜನತಾ ಪಕ್ಷದ ಹಿಪಾಕ್ರಟಿಕ್ ನಡವಳಿಕೆಯನ್ನು ಇಡೀ ದೇಶ ಕಂಡು ಛೀಮಾರಿ ಹಾಕುತ್ತಿದೆ. ಮೊನ್ನೆ ಮೊನ್ನೆವರೆಗೆ ಗ್ಯಾರಂಟಿ ಯೋಜನೆಗಳು ಸೇರಿದಂತೆ ಇಂತಹ ಯೋಜನೆಗಳೆಲ್ಲ ಬಿಟ್ಟಿಭಾಗ್ಯ ಎಂದು ಗೇಲಿ ಮಾಡುತ್ತಿದ್ದ ಬಿಜೆಪಿ ಐದು ರಾಜ್ಯಗಳ ಚುನಾವಣಾ ಪ್ರಣಾಳಿಕೆಯಲ್ಲಿ ಇಂತಹ ‘’ಬಿಟ್ಟಿ ಭಾಗ್ಯ’’ಗಳನ್ನೆಲ್ಲ ಸೇರಿಸಿ ಬಿಟ್ಟಿದೆ. ಇವರಿಗೆ ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ನೈತಿಕತೆ ಇಲ್ಲ, ಬಿಜೆಪಿ ನಡವಳಿಕೆಯನ್ನು ಪ್ರಶ್ನಿಸುವ ದಮ್ಮು ತಾಕತ್ ಕುಮಾರಸ್ವಾಮಿಯವರಿಗೆ ಇಲ್ಲ.
ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಘೋಷಣೆಗಳು. ಅದನ್ನು ಒಪ್ಪಿಕೊಂಡೇ ರಾಜ್ಯದ ಜನ ನಮ್ಮ ಪಕ್ಷವನ್ನು ಗೆಲ್ಲಿಸಿದ್ದಾರೆ. ಈ ಯೋಜನೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡೂ ವಿರೋಧಿಸಿದ್ದವು, ಈ ಪಕ್ಷಗಳ ಸೋಲಿಗೆ ಗ್ಯಾರಂಟಿ ಯೋಜನೆಗಳ ಬಗೆಗಿನ ನಿಮ್ಮ ವಿರೋಧವೂ ಕಾರಣ ಎನ್ನುವುದು ನಿಮಗೆ ಇನ್ನೂ ಅರ್ಥವಾಗದೆ ಇರುವುದು ದುರಂತ. ಇದೇ ರೀತಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಾ ಹೋದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳೆರಡಕ್ಕೂ ರಾಜ್ಯದ ಪ್ರಜ್ಞಾವಂತ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ.