ದೇವೇಗೌಡರು, ಎಸ್.ಎಂ.ಕೃಷ್ಣ, ಬಸವರಾಜ ಬೊಮ್ಮಾಯಿ ಭೇಟಿಯಾಗಿ ಮಾರ್ಗದರ್ಶನ
ಬೆಂಗಳೂರು: ಅನುಭವಿ ರಾಜಕಾರಣಿಗಳ ಮಾರ್ಗದರ್ಶನದಂತೆ ಪಕ್ಷ ಸಂಘಟನೆ ಮಾಡಲು ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು ಎನ್‌ಡಿಎ ಮೈತ್ರಿಕೂಟದ ನಾಯಕರನ್ನು ಭೇಟಿ ಸಹಕಾರ ಕೋರಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿ ಮಾಡಿ ಸಲಹೆ ಮತ್ತು ಮಾರ್ಗದರ್ಶನ ಪಡೆದುಕೊಂಡರು.
ರಾಜ್ಯಾಧ್ಯಕ್ಷರಾಗಿ ಅಧ್ಯಕ್ಷರಾಗಿ ಗದ್ದಿಗೇರಲು ಕೇವಲ ಎರಡು ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಕಾರ್ಯಕರ್ತರ ವಿಶ್ವಾಸ ಪಡೆಯುವುದರ ಜತೆಗೆ ಹಿರಿಯರ ಆಶೀರ್ವಾದ ಪಡೆದು ಕಮಲದ ಬಾವುಟ ಹಿಡಿಯಲು ವೇದಿಕೆ ಅಣಿಗೊಳಿಸಿದ್ದಾರೆ.
ಹಿರಿಯರ ಮಾರ್ಗದರ್ಶನ, ಆಶೀರ್ವಾದ ಪಡೆದಿರುವೆ
ನಾಯಕರ ಭೇಟಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ಹಿರಿಯರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯ ವಿನಿಮಯ ಮಾಡಿಕೊಂಡಿದ್ದೇನೆ. ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಲು ಅವರ ಸಲಹೆ ಹಾಗೂ ಮಾರ್ಗದರ್ಶನ ಪಡೆದುಕೊಂಡಿದ್ದೇನೆ.
ಮುಂಬರುವ ಲೋಕಸಭಾ ಚುನಾವಣೆಯನ್ನು ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಾಗಿದೆ. ಇದಕ್ಕಾಗಿ ಹಿರಿಯರು, ಕಿರಿಯರು ಎನ್ನದೆ, ಎಲ್ಲರ ಮಾರ್ಗದರ್ಶನ ಮತ್ತು ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಆರಂಭಿಸಿರುವುದಾಗಿ ಹೇಳಿದರು.
ಲೋಕಸಭಾ ಚುನಾವಣೆ ಸವಾಲು ಮುಂದಿದೆ
ಭೇಟಿ ಮಾಡಿದ ನಾಯಕರು ನಮ್ಮ ತಂದೆ ಯಡಿಯೂರಪ್ಪ ಅವರ ಹಾದಿಯನ್ನೇ ತುಳಿಯುವಂತೆ ಸಲಹೆ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿ ಕೊಟ್ಟು ಪಕ್ಷ ಬೆಳೆಸಿದ್ದಾರೆ ಮತ್ತು ಅಧಿಕಾರಕ್ಕೂ ತಂದಿದ್ದಾರೆ.
ನೀವು ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿದ್ದೀರಿ. ನಿಮಗೆ ಈ ಚುನಾವಣೆ ಸವಾಲಾಗಿದ್ದು, ಆ ಸವಾಲನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ ಎಂಬ ವಿಶ್ವಾಸ ನಮಗಿದೆ. ನಿಮಗೆ ಒಳ್ಳೆಯದಾಗಲಿ ಮುನ್ನಡೆಯಿರಿ ಎಂದು ಬೆನ್ನುತಟ್ಟಿದ್ದಾರೆ.