2024ರ ಲೋಕಸಭಾ ಚುನಾವಣೆಗೆ ರಾಜ್ಯದ15 ಕ್ಷೇತ್ರಗಳಲ್ಲಿ ಹೊಸಮುಖ


ಬೆಂಗಳೂರು: ಕೇಂದ್ರದ ಮಾಜಿ ಸಚಿವರಾದ ಡಿ.ವಿ.ಸದಾನಂದ ಗೌಡ, ವಿ.ಶ್ರೀನಿವಾಸ ಪ್ರಸಾದ್ ಅನಂತ್ ಕುಮಾರ್ ಹೆಗಡೆ ಸೇರಿದಂತೆ ರಾಜ್ಯದ 15 ಹಾಲಿ ಸಂಸದರ ಕ್ಷೇತ್ರಗಳಿಗೆ ಹೊಸ ಮುಖಗಳ ಪರಿಚಯಕ್ಕೆ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ.
ವಯೋಕಾರಣ, ಕೆಲವರು ನಿವೃತ್ತಿ ಘೋಷಣೆ ಹಾಗೂ ಕ್ಷೇತ್ರಗಳಲ್ಲಿ ವರ್ಚಸ್ಸು ಕುಂದಿರುವ ಸದಸ್ಯರನ್ನು ಕೈಬಿಟ್ಟು ಹೊಸ ಮತ್ತು ಯುವ ಮುಖಗಳಿಗೆ ಅವಕಾಶ ಮಾಡಿಕೊಡಲು ಹೈಕಮಾಂಡ್ ನಿರ್ಧರಿಸಿದೆ.
ಜೆಡಿಎಸ್ ಎನ್ ಡಿಎ ಮೈತ್ರಿಕೂಟ ಸೇರಿದ ನಂತರ ಕರ್ನಾಟಕದ ಮಟ್ಟಿಗೆ ಎರಡೂ ಪಕ್ಷಗಳಿಗೆ ಬಲ ಬಂದಿದೆ. ಚುನಾವಣಾ ಮೈತ್ರಿ ಹಾಗೂ ಅಭ್ಯರ್ಥಿಗಳ ಆಯ್ಕೆಗೆ ನಡೆದಿರುವ ಚುನಾವಣಾ ಪೂರ್ವ ಸಮೀಕ್ಷೆಯ ಪ್ರಾಥಮಿಕ ವರದಿ ಆಧರಿಸಿ ಪಕ್ಷ 15 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳ ಅನ್ವೇಷಣೆ ಆರಂಭಿಸಿದೆ.
.



ಸಂಸದರಾದ ಶ್ರೀನಿವಾಸ ಪ್ರಸಾದ್( ಚಾಮರಾಜನಗರ) ಡಿ.ವಿ.ಸದಾನಂದಗೌಡ ( ಬೆಂಗಳೂರು ಉತ್ತರ), ಶಿವಕುಮಾರ್ ಉದಾಸಿ(ಹಾವೇರಿ), ಬಿ.ಎನ್.ಬಚ್ಚೇಗೌಡ (ಚಿಕ್ಕಬಳ್ಳಾಪುರ) ಅವರು ಈಗಾಗಲೇ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ.
ವಿವಿಧ ಕಾರಣಗಳಿಗಾಗಿ ಜಿ.ಎಸ್.ಬಸರಾಜು (ತುಮಕೂರು), ಮಂಗಳ ಸುರೇಶ್ ಅಂಗಡಿ ( ಬೆಳಗಾವಿ), ಪಿ.ಸಿ.ಗದ್ದೀಗೌಡರ್ (ಬಾಗಲಕೋಟೆ), ರಮೇಶ್ ಜಿಗಜಿಣಗಿ (ವಿಜಾಪುರ), ರಾಜಾ ಅಮರೇಶ್ ನಾಯಕ್ (ರಾಯಚೂರು), ದೇವೇಂದ್ರಪ್ಪ( ಬಳ್ಳಾರಿ), ಜಿ.ಎಂ. ಸಿದ್ದೇಶ್ವರ್ (ದಾವಣಗೆರೆ), ಅನಂತ್ ಕುಮಾರ್ ಹೆಗಡೆ (ಉತ್ತರ ಕನ್ನಡ) ಅವರ ಕ್ಷೇತ್ರಗಳಿಗೆ ಹೊಸಬರಿಗೆ ಅವಕಾಶ ನೀಡಲು ಅನ್ವೇಷಣೆ ನಡೆದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ನಳಿನ್ ಕುಮಾರ್ ಕಟೀಲ್ (ದಕ್ಷಿಣ ಕನ್ನಡ), ಪ್ರತಾಪಸಿಂಹ(ಮೈಸೂರು), ಎಸ್.ಮುನಿಸ್ವಾಮಿ (ಕೋಲಾರ) ಇವರು ಕಾರ್ಯಕರ್ತರ ಮತ್ತು ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂಬ ವರದಿ ಇದೆ. ಇವರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡುತ್ತಾರೆ ಅಥವಾ ಇಲ್ಲವೋ ಎಂಬುದು ನಿಗೂಢವಾಗಿದೆ.
ಲೋಕಸಭೆ ಚುನಾವಣೆಯಲ್ಲೂ ವಿಧಾನಸಭೆ ಮಾದರಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ 75 ಹೊಸ ಮುಖಗಳನ್ನು ಕಣಕ್ಕಿಳಿಸಿ ನಡೆಸಿದ ಪ್ರಯೋಗ ವಿಫಲವಾಗಿದ್ದರೂ ಬಿಜೆಪಿ ಮತ್ತೆ ಅದೇ ಪ್ರಯೋಗವನ್ನು ಲೋಕಸಭಾ ಚುನಾವಣೆಯಲ್ಲೂ ಮಾಡಲು ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಹಿಂದುತ್ವವಾದ ಮತ್ತು ಜೆಡಿಎಸ್ ಮೈತ್ರಿ ಹಾಗೂ ವೀರಶೈವ ಸಮುದಾಯಕ್ಕೆ ಸೇರಿರುವ ಪ್ರಭಾವಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದರಿಂದ ಈ ಪ್ರಯೋಗ ಯಶಸ್ವಿಯಾಗಲಿದೆ ಎಂಬ ಲೆಕ್ಕಾಚಾರವಿದೆ.
ಕಳೆದ ಬಾರಿ 25 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ
ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿದ್ದು, 2024 ರ ಲೋಕಸಭಾ ಚುನಾವಣೆಯಲ್ಲೂ 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲೇ ಬೇಕು ಎಂದು ಪಣ ತೊಟ್ಟಿದೆ. ಅದಕ್ಕಾಗಿ ಹೊಸ ಪ್ರಯೋಗವೂ ನಡೆಸಲಿದೆ.
ಕಾಂಗ್ರೆಸ್ ಕೂಡಾ ಇದೇ ರೀತಿ 20 ಕ್ಷೇತ್ರಗಳ ಗೆಲುವಿನ ಗುರಿ ಇಟ್ಟುಕೊಂಡು ಹೋರಾಟ ನಡೆಸಿದೆ. ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲೂ ಬಿಜೆಪಿ ಎರಡು ಅಂಕಿಗಿಂತ ಕಡಿಮೆ ಸ್ಥಾನ ಗಳಿಸಿರಲಿಲ್ಲ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದರೂ ಮೋದಿ ಅವರ ವರ್ಚಸ್ಸು ಹಾಗೂ ವಿವಿಧ ಕಾರಣಗಳಿಗೆ ರಾಜ್ಯದಲ್ಲಿ ಜನರು ಬಿಜೆಪಿ ಬೆಂಬಲಿಸಲಿದ್ದಾರೆ ಎಂಬ ನಂಬಿಕೆ ವರಿಷ್ಠರಿಗೆ ಇದೆ.
