ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ ಆಕ್ರೋಶ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಕೀಳು ಅಭಿರುಚಿಯ ಟೀಕೆಗಳನ್ನು ಮಾಡಿರುವ ರಾಜ್ಯ ಕಾಂಗ್ರೆಸ್ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ.
ಸಾಮಾಜಿಕ ಜಾಲತಾಣ ’ಎಕ್ಸ್’ನಲ್ಲಿ ಕಿಡಿ ಕಾರಿರುವ ಜೆಡಿಎಸ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಅರ್ಜೆಂಟಾಗಿ ಜನರ ಗಮನ ಬೇರೆಡೆಗೆ ಸೆಳೆಯುವ ತುರ್ತು ಇದ್ದು, ಕುಮಾರಸ್ವಾಮಿ ಅವರ ’ಸರ್ಜಿಕಲ್ ಸ್ಟ್ರೈಕ್ಗೆ ಕೈ ಪಡೆ ತರಗುಟ್ಟಿ ಹೋಗಿದೆ.
ಮಾನ ಉಳಿಸಿಕೊಳ್ಳಲು ಕರೆಂಟ್ ವೈರ್ ಮೊರೆ ಹೋಗಿರುವ ಕಾಂಗ್ರೆಸ್, ಗ್ಯಾರಂಟಿಗಳ ವೈಫಲ್ಯಕ್ಕೆ ಜನರಿಂದ ಪ್ರತಿದಿನ ಹಿಡಿಶಾಪ ಹಾಕಿಸಿಕೊಳ್ಳುತ್ತಿದೆ.
ತೆಲಂಗಾಣ ಸೇರಿ 5 ರಾಜ್ಯಗಳ ಚುನಾವಣೆಯಲ್ಲಿ ಏದುಸಿರು ಬಿಡುತ್ತಿರುವ ಕಾಂಗ್ರೆಸ್, ಕತ್ತಲಾದ ಮೇಲೆ ಕಳ್ಳರಂತೆ ಗೋಡೆ ಮೇಲೆ ಪೋಸ್ಟರ್ ಅಂಟಿಸುವ ಸ್ಥಿತಿಗೆ ಬಂದಿದೆ.
ಯುದ್ಧಕ್ಕೆ ನಾವೂ ಸಿದ್ಧರಿದ್ದೇವೆ ಎಂದು ಜೆಡಿಎಸ್ ಸವಾಲು
ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟ ಮೇಲೂ ಕಾಂಗ್ರೆಸ್ ವಿಕೃತಿ ಮಿತಿಮೀರಿದೆ, ವಿದ್ಯುತ್ ಕಳವು ಪ್ರಕರಣದಲ್ಲಿ ಬೆಸ್ಕಾಂ ಎಫ್‌ಐಆರ್ ದಾಖಲಿಸಿದೆ, ಕುಮಾರಸ್ವಾಮಿ ತಿಹಾರ್ ಜೈಲಿಗೆ ಹೋಗುವ ತಪ್ಪೇನೂ ಮಾಡಿಲ್ಲ. ಇಡಿ, ಸಿಬಿಐ, ಐಟಿ ಅವರ ಬೆನ್ನು ಹತ್ತಿಲ್ಲ.
ವರ್ಗಾವಣೆ ದಂಧೆ, ಸುಲಿಗೆ, ಗುತ್ತಿಗೆದಾರರಿಂದ ಪರ್ಸಂಟೇಜ್, ಸ್ಟಾನ್ಲಿ ಸೋಫಾ-ಮಂಚ, ಹ್ಯುಬ್ಲೆಟ್ ವಾಚು.. ಒಂದಾ ಎರಡಾ.., ಎಂದು ಜೆಡಿಎಸ್ ತಿರುಗೇಟು ಕೊಟ್ಟಿದೆ.
ರಾಜಕೀಯವಾಗಿ ಕುಮಾರಸ್ವಾಮಿ ಅವರನ್ನು ಎದುರಿಸಲಾಗದ ಕಾಂಗ್ರೆಸ್ ಶಕುನಿ ಯುದ್ಧ ಆರಂಭಿಸಿದೆ, ಯುದ್ಧಕ್ಕೆ ನಾವೂ ಸಿದ್ಧರಿದ್ದೇವೆ ಎಂದು ಜೆಡಿಎಸ್ ಸವಾಲು ಹಾಕಿದೆ.