ಬೆಳಗಾವಿಯ ಸುವರ್ಣಸೌಧದಲ್ಲಿ 10ದಿನ ನಡೆಯಲಿರುವ ಕಲಾಪ
ಬೆಂಗಳೂರು: ರಾಜ್ಯ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವು ಡಿಸೆಂಬರ್ 4ರಿಂದ 10 ದಿನಗಳ ಕಾಲ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿದೆ.
ಹದಿನಾರನೇ ವಿಧಾನಸಭೆಯ 2ನೇ ಅಧಿವೇಶನವು ಡಿಸೆಂಬರ್ 4ರಂದು ಬೆಳಿಗ್ಗೆ 11ಗಂಟೆಗೆ ಆರಂಭವಾಗಲಿದೆ. ಅಂದಿನಿಂದ ಡಿಸೆಂಬರ್ 15ರವರೆಗೆ ಹತ್ತು ದಿನಗಳ ಕಾಲ ಉಭಯ ಸದನಗಳ ಅಧಿವೇಶನ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ ನಾಲ್ಕರಂದು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಅಧಿವೇಶನಗಳು ಸಮಾವೇಶಗೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಅಧಿವೇಶನ ನಡೆಸಲು ಅನುಕೂಲವಾಗುವಂತೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಚಿವಾಲಯಗಳು ಈಗಾಗಲೇ ಸಿದ್ಧತೆ ನಡೆಸಿವೆ. ಸರ್ಕಾರದ ವೈಫಲ್ಯಗಳನ್ನು ಮುಂಡಿಟ್ಟು ಹೋರಾಟ ಮಾಡಲು ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಸಜ್ಜಾಗಿದ್ದರೆ, ಸರ್ಕಾರದ ಸಾಧನೆ ಮುಂದಿಟ್ಟು ಸಮರ್ಥನೆ ಮಾಡಿಕೊಳ್ಳಲು ಆಡಳಿತಾರೂಢ ಕಾಂಗ್ರಸ್ ಕೂಡಾ ತಯಾರಾಗುತ್ತಿದೆ.
ನಿರೀಕ್ಷೆಯಂತೆ ಚಳಿಗಾಲದ ಅಧಿವೇಶನವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರದ ವೇದಿಕೆಯಾಗಲಿದೆ. ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಭರವಸೆಗಳ ಅನುಷ್ಠಾನದ ವಿಚಾರದಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ಬರಪರಿಸ್ಥಿತಿ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ಮತ್ತು ಪ್ರತ್ಯಾರೋಪದ ಸುರಿಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಬರದಿಂದಾಗಿ ಉಂಟಾಗಿರುವ ಕುಡಿಯುವ ನೀರು, ಜಾನುವಾರುಗಳ ಮೇವು, ವಿದ್ಯುತ್ ಅಭಾವ, ಬೆಳೆ ಹಾನಿ ಮೊದಲಾದ ಸಮಸ್ಯೆಗಳು ಉಭಯ ಸದನಗಳಲ್ಲಿ ಪ್ರತಿಧ್ವನಿಸುವ ಸಂಭವವಿದೆ.
ಪ್ರತಿಪಕ್ಷಗಳಿಂದ ಎದುರಾಗುವ ವಾಕ್ಸಮರವನ್ನು ಸಮರ್ಥವಾಗಿ ಎದುರಿಸಲು ಆಡಳಿತಾರೂಢ ಕಾಂಗ್ರೆಸ್ ಕೂಡ ಸಜ್ಜಾಗುತ್ತಿದೆ. ಜೆಡಿಎಸ್ ಎನ್ ಡಿಎ ಮೈತ್ರಿಕೂಟ ಸೇರಿರುವುದರಿಂದ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಜಂಟಿಯಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುವ ಸಾಧ್ಯತೆ ಹೆಚ್ಚಿದೆ.