ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ವಸೂಲಿಯಲ್ಲಿ ತೊಡಗಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ವಿಡಿಯೊವನ್ನು ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ವರ್ಗಾವಣೆ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಗುತ್ತಿಗೆಗಳಲ್ಲಿ ಲಂಚ ಮತ್ತು ಕಮಿಷನ್ ಅನ್ನು ಹಾದಿ-ಬೀದಿಯಲ್ಲಿ ವಸೂಲಿ ಮಾಡುತ್ತಿದ್ದಾರೆ.
ನೈತಿಕತೆ ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿ-ಬೀದಿಯಲ್ಲಿ ಮೂರು ಕಾಸಿಗೆ ಹರಾಜು ಆಗಿದೆ ಎಂದು ಟೀಕಾ ಪ್ರಹಾರ ಮಾಡಿದ್ದಾರೆ.
ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಯತೀಂದ್ರ ತಮ್ಮ ತಂದೆ ಮುಖ್ಯಮಂತ್ರಿ ಜೊತೆ ಅಧಿಕಾರಿಗಳ ವರ್ಗಾವರ್ಗಿಗೆ ಸಂಬಂಧಿಸಿದಂತೆ ತಾಕೀತು ಮಾಡುತ್ತಿರುವ ಆಡಿಯೊ-ವಿಡಿಯೊವನ್ನು ಬಿಡುಗಡೆ ಮಾಡಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿದರು.
ನಿಮಗೆಷ್ಟು, ನಿಮ್ಮ ಮಗನಿಗೆಷ್ಟು ಪರ್ಸೆಂಟೇಜ್?
’ಈಗ ಹೇಳಿ ಸಿದ್ದರಾಮಯ್ಯ ಅವರೇ, ನಿಮ್ಮ ಮಗ ಎಷ್ಟು ಪರ್ಸೆಂಟೇಜ್‌ಗೆ ಹುದ್ದೆಗಳನ್ನು ಮಾರಿದ್ದಾರೆ, ಅದರಲ್ಲಿ ನಿಮಗೆಷ್ಟು, ನಿಮ್ಮ ಮಗನಿಗೆಷ್ಟು, ನಿಮ್ಮ ಕಚೇರಿಯ ಪರ್ಸೆಂಟೇಜ್ ಪಟಾಲಂಗೆ ಎಷ್ಟು’ ಎಂದು ಪ್ರಶ್ನಿಸಿದ್ದಾರೆ.
ನಾನು ಹೇಳಿದ್ದನ್ನೆಲ್ಲಾ ಸುಳ್ಳು-ಸುಳ್ಳು ಎನ್ನುತ್ತಿದ್ದಿರಿ, ಸತ್ಯ ಎದುರಿಗೆ ಕೂತಿದೆ, ಏನು ಹೇಳುತ್ತೀರಿ, ವಿಡಿಯೊದಲ್ಲಿರುವ ವಿಷಯ ಸುಳ್ಳೋ-ನಿಜವೋ, ನಾಡಿನ ಜನ ತೀರ್ಮಾನ ಮಾಡುತ್ತಾರೆ.
ನಿಮ್ಮಿಂದ ಉತ್ತರವಷ್ಟೇ ಅಲ್ಲ, ನಿಮಗೆ ಮಾನ-ಮಾರ್ಯಾದೆ ಬಹಳ ಜಾಸ್ತಿ, ಎಲ್ಲರಿಗಿಂತ ನೈತಿಕ ಮೌಲ್ಯಗಳು ನಿಮ್ಮಲ್ಲಿ ದುಪ್ಪಟ್ಟು ಹೌದಲ್ಲವೇ, ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ.
ನಿಮಗೆ ಉಳಿದಿರುವುದು ಒಂದೇ ಮಾರ್ಗ, ಮುಖ್ಯಮಂತ್ರಿ ಕಚೇರಿ ಖಾಲಿ ಮಾಡುವುದಷ್ಟೆ, ಕೂಡಲೇ ಪದವಿಗೆ ರಾಜೀನಾಮೆ ಕೊಡಿ ಎಂದು ಆಗ್ರಹಿಸುತ್ತೇನೆ.
ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ. @INCKarnataka ಸರಕಾರದ ವಸೂಲಿ ಬಿಸ್ನೆಸ್ ಹಾದಿಬೀದಿಗೆ ಬಂದಿದೆ. ನೈತಿಕತೆ, ಮೌಲ್ಯ, ಸಾಮಾಜಿಕ ನ್ಯಾಯದ ಡೋಂಗಿ ಹರಿಕಾರನ ಅಸಲಿ ಮುಖ ಅದೇ ಹಾದಿಬೀದಿಯಲ್ಲಿ ಮೂರು ಕಾಸಿಗೆ… pic.twitter.com/T1366ek2iS
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) November 16, 2023
ಸಾರ್ವಜನಿಕ ಸಮಾರಂಭದಲ್ಲೇ ನಿಮ್ಮ ಪುತ್ರ ದೂರವಾಣಿ ಮೂಲಕ ಹುದ್ದೆಗಳ ವರ್ಗಾವಣೆ ಆದೇಶ ಮಾಡುತ್ತಾರೆ ಎಂದರೆ ನಿಮ್ಮ ಆಡಳಿತದಲ್ಲಿ ದಂಧೆ ಹಾದಿ-ಬೀದಿಯಲ್ಲಿ ನಡೆಯುತ್ತಿರುವುದಕ್ಕೆ ಈ ವಿಡಿಯೊ ಸಾಕ್ಷಿ.
ಕಲೆಕ್ಷನ್ ಕಿಂಗ್ ಅಪ್ಪ, ಕಲೆಕ್ಷನ್ ಪ್ರಿನ್ಸ್ ಮಗ
ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಮುಖ್ಯಮಂತ್ರಿ ಕಾರ್ಯಾಲಯವನ್ನು ಸುಲಿಗೆ ಅಡ್ಡೆ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಪುರಾವೆ ಬೇಕಿಲ್ಲ.
ರಾಜ್ಯದ ಮುಖ್ಯಮಂತ್ರಿಗೆ ಧಮ್ಕಿ ಹಾಕಿ, ನಾನು ಹೇಳಿದವರಷ್ಟನ್ನೇ ಮಾಡಿ ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸುಪರ್ ಸಿಎಂ, ಇಲ್ಲವೇ ಮಿನಿಸ್ಟರ್ ಫಾರ್ ಕ್ಯಾಷ್ ಫಾರ್ ಪೊಸ್ಟಿಂಗಾ ಅಥವಾ ಒಳಾಡಳಿತದ ಸಚಿವಾಲಯ ಮಾದರಿಯ ಒಳ ವಸೂಲಿ ಸಚಿವಾಲಯದ ಸಚಿವರಾ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು, ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು.
ಹಿಂದೊಮ್ಮೆ ನಾನೇ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೆ, ಪ್ರತಿ ವರ್ಗಾವಣೆಗೆ ತಲಾ 30 ಲಕ್ಷ ರೂ. ವಸೂಲಿ ಮಾಡುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ, ಆದರೆ, ನೀವು ಅಂದು 99.99 ರಷ್ಟ ಸುಳ್ಳು ಎಂದು ಹಿಟ್ ಅಂಡ್ ರನ್ ಕೇಸ್ ಮಾಡಿದ್ದಿರಿ, ಸಿದ್ದರಾಮಯ್ಯನವರೇ ಈಗ ಏನು ಹೇಳುತ್ತೀರಿ.
ನೀವು, ನಿಮ್ಮ ಮಗ ಸೇರಿ ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡು ಎಷ್ಟು ಹಣ ಸಂಪಾದಿಸಿದ್ದೀರಿ, ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ವಸೂಲಿ ಮಾಡಿದ್ದು ಯಾರ ಹಣ ಎಂಬುದು ಈಗ ಜನರಿಗೆ ಗೊತ್ತಾಗಲಿದೆ.