ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸರ್ವಾನುಮತ ನಿರ್ಧಾರ
ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ಶಾಸಕ ಆರ್.ಅಶೋಕ್ ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಇಂದು ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಶೋಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಅವರನ್ನು ವರಿಷ್ಠರು ವೀಕ್ಷಕರಾಗಿ ಕಳುಹಿಸಿದ್ದರು.
ನಿರ್ಮಲಾ ಸೀತಾರಾಮನ್, ದುಷ್ಯಂತ್ ಕುಮಾರ್ ಗೌತಮ್ ವೀಕ್ಷಕರು
ಶಾಸಕಾಂಗ ಪಕ್ಷದ ಸಭೆಗೂ ಮುನ್ನ ವೀಕ್ಷಕರು ಮಾಜಿ ಮುಖ್ಯಮಂತ್ರಿಗಾಳದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚೆ ನಡೆಸಿದ್ದರು.

ತದನಂತರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಕೆಲವು ಮುಖಂಡರನ್ನು ಕರೆಸಿಕೊಂಡು ಅಭ್ಯರ್ಥಿ ಆಯ್ಕೆ ಸಂಬಂಧ ಹಾಗೂ ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆಯೂ ಚರ್ಚೆ ಮಾಡಿದರು.
ಬಹುತೇಕ ನಾಯಕರು ಹಿರಿಯ ನಾಯಕ ಅಶೋಕ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಕುರಿತು ತಮ್ಮ ಅಭಿಪ್ರಾಯ-ಸಲಹೆ ನೀಡಿದರು.
ನಂತರ ಶಾಸಕಾಂಗ ಸಭೆಯಲ್ಲಿ ದುಷ್ಯಂತ್ ಕುಮಾರ್ ಗೌತಮ್, ವರಿಷ್ಠರ ಸೂಚನೆಯಂತೆ ನಾಯಕನ ಆಯ್ಕೆಗೆ ಅಭಿಪ್ರಾಯ ಪಡೆದಿದ್ದೇವೆ, ಮಾಜಿ ಉಪಮುಖ್ಯಮಂತ್ರಿ ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರಾಗಿ ಆಯ್ಕೆ ಮಾಡಲು ಒಮ್ಮತಾಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರ ಆಯ್ಕೆ ಬೆನ್ನಲ್ಲೇ ಬಿಜೆಎಲ್‌ಪಿ ನಾಯಕ ಆಯ್ಕೆ
ಕಳೆದ ಆರು ತಿಂಗಳಿಂದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡದೆ, ಟೀಕೆಗೆ ಒಳಗಾಗಿದ್ದ ಪಕ್ಷದ ವರಿಷ್ಠರು, ಇದೀಗ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ.ವಿಜಯೇಂದ್ರ ಅವರನ್ನು ನೇಮಕ ಮಾಡಿದ ಒಂದು ವಾರದಲ್ಲೇ ಬಿಜೆಎಲ್‌ಪಿ ನಾಯಕನನ್ನೂ ಆಯ್ಕೆ ಮಾಡಿದೆ.
ಅಶೋಕ್ ನೇಮಕದಿಂದ ಯಡಿಯೂರಪ್ಪ ಪಕ್ಷದಲ್ಲಿ ಮತ್ತೆ ಮೇಲುಗೈ ಸಾಧಿಸಿದ್ದಾರೆ. ಸದಾ ಅವರ ಬಣದಲ್ಲೇ ಗುರುತಿಸಿಕೊಂಡಿದ್ದ ಅಶೋಕ್‌ಗೆ ರಾಷ್ಟ್ರಮಟ್ಟದಲ್ಲಿ ಕೆಲವರ ವಿರೋಧ ಇದ್ದರೂ ಜೆಡಿಎಸ್ ಜೊತೆಗಿನ ಮೈತ್ರಿಗೆ ಬಲ ಕೊಡಲು ಅಂತಿಮವಾಗಿ ಇವರನ್ನೇ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವರಾಗಿ, ಉಪಮು ಖ್ಯಮಂತ್ರಿಯಾಗಿ, ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಶೋಕ್ ಸತತ ಏಳು ಬಾರಿ ವಿಧಾನಸಭೆ ಪ್ರವೇಶ

ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೂ ಮುನ್ನ ಉತ್ತರಹಳ್ಳಿ ಕ್ಷೇತ್ರದಿಂದಲೂ ನಂತರ ಪದ್ಮನಾಭನಗರ ಕ್ಷೇತ್ರದಿಂದ ಅಶೋಕ್ ಅವರು ಸತತವಾಗಿ ಏಳು ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ. Bಶಿವಕುಮಾರ್ ವಿರುದ್ಧ ಕನಕಪುರ ಹಾಗೂ ಪದ್ಮನಾಭನಗರದಿಂದ ಕಣಕ್ಕಿಳಿದು ಶಿವಕುಮಾರ್ ವಿರುದ್ಧ ಸೋತು, ತಮ್ಮ ಹಳೆಯ ಕ್ಷೇತ್ರವನ್ನು ಉಳಿಸಿಕೊಂಡಿದ್ದರು.
ಬಸವರಾಜ ಬೊಮ್ಮಾಯಿ ಅವರನ್ನೇ ಈ ಸ್ಥಾನಕ್ಕೆ ತರಬೇಕೆಂಬ ಚರ್ಚೆ ನಡೆದಿತ್ತು, ವಿಜಯೇಂದ್ರ ರಾಜ್ಯಾಧ್ಯಕ್ಷರಾದ್ದರಿಂದ ಒಂದೇ ಸಮುದಾಯಕ್ಕೆ ಎರಡು ಸ್ಥಾನಗಳನ್ನು ನೀಡಬಾರದೆಂದು ಒಕ್ಕಲಿಗ ಸಮುದಾಯಕ್ಕೆ ಸೇರಿದ ಅಶೋಕ್ ಅವರಿಗೆ ವರಿಷ್ಠರು ಅವಕಾಶ ಮಾಡಿಕೊಟ್ಟಿದ್ದಾರೆ.
ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಹಿಂದುಳಿದ ವರ್ಗದವರಾಗಿದ್ದು, ಪಕ್ಷ ಮೂರೂ ಸಮುದಾಯಕ್ಕೆ ಪ್ರಮುಖ ಸ್ಥಾನಗಳನ್ನು ನೀಡಿದಂತಾಗಿದೆ.