ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಭವಿಷ್ಯ
ಬೆಂಗಳೂರು:ಮುಂಬರುವ ಲೋಕಸಭೆ ಚುನಾವಣೆಯ ನಂತರ ರಾಜ್ಯದ ರಾಜಕೀಯ ದಿಕ್ಕು ಬದಲಾವಣೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ಜನಪ್ರತಿನಿಧಿಗಳು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಈ ದೇಶದ ದಿಕ್ಕನ್ನು ಬದಲಾಯಿಸುವ ಮಹತ್ವದ ಚುನಾವಣೆಯಾಗಲಿದೆ.
ಪ್ರಧಾನಿಯಾಗಿ ನರೇಂದ್ರ ಮೋದಿ ಅವರು, ಮೂರನೇ ಬಾರಿ ಅಧಿಕಾರಿ ವಹಿಸಿಕೊಳ್ಳಲು ಈ ಚುನಾವಣೆ ಸಹಕಾರಿಯಾಗಲಿದೆ. ತದನಂತರ ರಾಜ್ಯದ ರಾಜಕೀಯ ಭವಿಷ್ಯದ ದಿಕ್ಕೇ ಬದಲಾವಣೆಯಾಗಲಿದೆ.
ರಾಜ್ಯದಲ್ಲಿ ರೈತ ವಿರೋಧಿ ಮತ್ತು ಭ್ರಷ್ಟ ಸರ್ಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಒಗ್ಗಟ್ಟಿನಿಂದ ಹೋರಾಟ ನಡೆಸುವ ಪಣ ತೊಡಲಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಜನ ಹಿಡಿಶಾಪ
ರೈತ ವಿರೋಧಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಬರಗಾಲದ ಕುರಿತು ನಿರ್ಲಕ್ಷ್ಯ ವಹಿಸಿದ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನು ರಾಜ್ಯಾಧ್ಯಕ್ಷನಾಗಿ ನಾನು ಮತ್ತು ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು, ನಮ್ಮೆಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಹಿರಿಯ ನಾಯಕರು ಒಗ್ಗಟ್ಟಾಗಿ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳುತ್ತೇವೆ.
ನಾವು, ನೀವೆಲ್ಲರೂ ಜೊತೆಗೂಡಿ ಪಕ್ಷ ಬಲಪಡಿಸುವ ಕಾರ್ಯ ಮಾಡೋಣ. ಮೋದಿಜೀ ಅವರ ಕೈಗಳನ್ನು ಬಲಪಡಿಸೋಣ ಎಂದು ವಿನಂತಿಸಿದರು.
ಕಾಂಗ್ರೆಸ್ ದುರಾಡಳಿತದ ವಿರುದ್ಧ ಜನಜಾಗೃತಿ
ಸಿದ್ದರಾಮಯ್ಯನವರಂತೆ ನಮಗೆ ಅಧಿಕಾರದ ಆಸೆ ಇಲ್ಲ. ಕಾಂಗ್ರೆಸ್ ದುರಾಡಳಿತ, ಮೋಸದ ಯೋಜನೆಗಳ ಕುರಿತು ತಿಳಿಸಿ ಜನಜಾಗೃತಿ ಮೂಡಿಸುತ್ತೇವೆ ಎಂದರು.
ಜಮೀರ್ ಅವರು ಕರ್ನಾಟಕದಲ್ಲಿ ಕೋಮುವಾದ ಬಿತ್ತುತ್ತಿದ್ದಾರೆ ಎಂದು ಟೀಕಿಸಿದ ಅವರು, ಹತ್ತಾರು ತಪ್ಪುಗಳನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಬೆಳಗಾವಿ ಅಧಿವೇಶನದಲ್ಲಿ ನಾವು ಇವುಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮಂಗಳೂರು- ಉಡುಪಿಯಲ್ಲಿ ಹಿಂದೂ ಕಾರ್ಯಕರ್ತರ ಗಡೀಪಾರು ಮಾಡಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ೩೦-೪೦ ಹಿಂದೂ ಕಾರ್ಯಕರ್ತರ ಕೊಲೆ ಆಗಿತ್ತು. ಟಿಪ್ಪುವಿನ ವೈಭವೀಕರಣ ನಡೆದಿತ್ತು. ಕಾಂಗ್ರೆಸ್ಸಿನ ಮತಾಂಧನಾದ ಟಿಪ್ಪು ಸಂಸ್ಕೃತಿಯನ್ನು ಪಕ್ಷ ಜನರಿಗೆ ತಿಳಿಸಲಿದೆ.