ಸಿದ್ದರಾಮಯ್ಯ ಮೇಲೆ ವರ್ಗಾವಣೆ ದಂಧೆ ಆರೋಪ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ವರ್ಗಾವಣೆ ದಂಧೆ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಇಡೀ ಮಂತ್ರಿಮಂಡಲವೇ ಕೆರಳಿ ಕೆಂಡವಾಗಿದೆ.
ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆಂದು ಕುಮಾರಸ್ವಾಮಿ ಅವರು ಕಳೆದ ಮೂರು ದಿನಗಳಿಂದ ಸತತವಾಗಿ ಆರೋಪ ಮಾಡುತ್ತಿರುವುದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ.
ಗ್ಯಾರಂಟಿ ಯೋಜನೆ ಜನಪ್ರಿಯತೆ ಮಂಕಾಗುವ ಅಳುಕು
ಒಂದೆಡೆ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ, ಮತ್ತೊಂದೆಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಸಂಧರ್ಭದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ಮಾಡಿರುವ ಗುರುತರ ಆರೋಪ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಇದರಿಂದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಮಂಕಾಗಲಿದೆ ಎಂಬ ಅಳುಕು ಉಂಟಾಗಿದೆ.
ಭ್ರಷ್ಟಾಚಾರದ ವಿರುದ್ಧ ಸದಾ ಆರೋಪ ಮಾಡಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಅವರ ವಿರುದ್ಧ ಇಂತಹ ಆರೋಪ ಬಂದಿರುವುದನ್ನು ಅವರ ಬೆಂಬಲಿಗರು ಸಹಿಸಲಾಗುತ್ತಿಲ್ಲ.
ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಅವರ ವಿರುದ್ಧ ಕುಮಾರಸ್ವಾಮಿ ಅವರ ಆರೋಪವನ್ನು ಸಾರಸಗಟಾಗಿ ತಳ್ಳಿಹಾಕಿದ್ದಾರೆ. ಅಲ್ಲದೆ, ಅವರ ವಿರುದ್ಧ ಸಿಡಿದೆದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಅವರಂತೂ ಒಂದೇ ದಿನ ಕುಮಾರಸ್ವಾಮಿ ಅವರ ವಿರುದ್ಧ ಮೂರು ಪ್ರತ್ಯೇಕ ಟ್ವೀಟ್ ಮಾಡಿ ಆರೋಪ ಅಲ್ಲಗಳೆದಿದ್ದಲ್ಲದೆ, ತಮ್ಮ ಮೇಲೆ ಬಂದಿರುವ ಆರೋಪವನ್ನು ತಳ್ಳಿ ಹಾಕುವುದಕ್ಕೆ ಒತ್ತು ಕೊಟ್ಟಿದ್ದಾರೆ.
ಕುಮಾರಸ್ವಾಮಿ ಆರೋಪಕ್ಕೆ ವಿಧಾನಸಭೆಯಲ್ಲೇ ಉತ್ತರ
ಸಿದ್ದರಾಮಯ್ಯ ಒಂದೆಡೆ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ್ದರೆ, ಮತ್ತೊಂದೆಡೆ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವಿರುದ್ಧ ವಿಧಾನಸಭೆಯಲ್ಲೇ ಉತ್ತರ ಕೊಡುತ್ತೇವೆ ಎಂದಿದ್ದಾರೆ.
ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ಏನಾದರೂ ಮಾತನಾಡಿದರೆ, ತೂಕವಿರಬೇಕು. ಅದನ್ನು ಬಿಟ್ಟು, ಬೆಳಿಗ್ಗೆ ಎದ್ದು ಏನೇನೋ ಮಾತನಾಡುತ್ತಾರೆ.
ಪಾಪ, ಯತೀಂದ್ರ ಸಿದ್ದರಾಮಯ್ಯ ಅವರು ತಂದೆ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕ್ಷೇತ್ರದ ಕೆಲಸದ ವಿಚಾರವಾಗಿ ಮಾತನಾಡಿದರೆ, ಅದನ್ನೇ ದೊಡ್ಡದು ಮಾಡುವುದು ಸರಿಯಲ್ಲ.
ನಾನು ಪರಿಷತ್ ಸದಸ್ಯತ್ವ ನೀಡುತ್ತೇನೆ ಎಂದಾಗ ಅವರು ಅದನ್ನು ನಿರಾಕರಿಸಿದವರು. ಅಂಥವರ ಬಗ್ಗೆ ವಿನಾ ಕಾರಣ ಆರೋಪ ಸರಿಯಲ್ಲ.
ಕುಮಾರಸ್ವಾಮಿ ಸದನದಲ್ಲಿ ನಮ್ಮದೇನಿದೆಯೋ ಅದನ್ನು ಬಿಚ್ಚಿಡಲಿ. ನಾವು ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರೆ, ಮತ್ತೊಂದೆಡೆ ಗೃಹ ಇಲಾಖೆ ಹೊಣೆ ಹೊತ್ತಿರುವ ಡಾ.ಜಿ.ಪರಮೇಶ್ವರ್ ಅವರು, ವಿಪಕ್ಷಗಳು ವರ್ಗಾವಣೆ ದಂಧೆ ಬಗ್ಗೆ ಆರೋಪಗಳಿದ್ದರೆ ಅಧಿವೇಶನದಲ್ಲಿ ಪ್ರಸ್ತಾಪಿಸಲಿ.
ವಿವೇಕಾನಂದಕ್ಕೂ ಪೊಲೀಸ್ ಇಲಾಖೆ ಹೆಸರಿಗೂ ಸಂಬಂಧವಿಲ್ಲ
ಯತೀಂದ್ರ ಅವರು ಹೇಳಿರುವ ವಿವೇಕಾನಂದಕ್ಕೂ ಪೊಲೀಸ್ ಇಲಾಖೆ ಹೆಸರಿಗೂ ಸಂಬಂಧವಿಲ್ಲ. ಹಾಗಿದ್ದಿದ್ದರೆ, ಅವರು ನನಗೆ ಹೇಳಬೇಕಲ್ಲವೆ?
ಅವರು ಹೇಳಿದ್ದು, ಕಾಕತಾಳೀಯ ಆಗಿರಬೇಕು. ನಾವು ಸಮಾಧಾನ ಆಗುವ ರೀತಿಯಲ್ಲೇ ಉತ್ತರ ಕೊಡುತ್ತೇವೆ. ಡಿ.೪ರಿಂದ ವಿಧಾನ ಮಂಡಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದೆ. ಹಣ ತೆಗೆದುಕೊಂಡಿರುವ ಬಗ್ಗೆ ಮಾತನಾಡಲಿ. ನಾವು ಅನೇಕ ಕಾರಣಗಳಿಂದ ಇಲಾಖೆಯಲ್ಲಿ ಬದಲಾವಣೆಗಳನ್ನು ಮಾಡುತ್ತೇವೆ.
ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಇಲ್ಲವೆಂದರೆ ಕಾಯಲು ಆಗಲ್ಲ. ಹೆಚ್ಚು ಸಮಯ ಖಾಲಿ ಬಿಡದೆ ವರ್ಗಾವಣೆ ಮಾಡುತ್ತೇವೆ. ಇಲ್ಲಿ ವಿವೇಕಾನಂದ ಹೆಸರು ಕಾಕತಾಳೀಯ ಆಗಿರಬಹುದು ಎಂದಿದ್ದಾರೆ.
ಪ್ರತ್ಯೇಕವಾಗಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು, ವಿವೇಕಾನಂದ ಹೆಸರು ಕಾಮನ್ ಆಗಿರಬಹುದು. ವರ್ಗಾವಣೆ ಬಗ್ಗೆ ಮಾಜಿ ಶಾಸಕರಷ್ಟೇ ಅಲ್ಲ, ಜೆಡಿಎಸ್ ಶಾಸಕರು ಶಿಫಾರಸ್ಸು ಮಾಡಿದ್ದಾರೆ. ಅದನ್ನೆಲ್ಲಾ ವರ್ಗಾವಣೆ ದಂಧೆ ಎನ್ನಲಾಗುತ್ತದೆಯೇ? ಕುಮಾರಸ್ವಾಮಿ ಅವರ ಬಳಿ ದಾಖಲೆಗಳಿದ್ದರೆ ಸದನದಲ್ಲಿ ಚರ್ಚೆ ಮಾಡಲಿ ಎಂದರು.
ತೆಲಗಾಂಣ ಚುನಾವಣಾ ಪ್ರಚಾರದಲ್ಲಿರುವ ರಾಜ್ಯದ ಸಚಿವರು ಸಹ ಅಲ್ಲಿಂದಲ್ಲೇ ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.