ಗ್ಯಾರೆಂಟಿ ಯೋಜನೆಗಳ ಅನುಷ್ಟಾನದಿಂದ ಜನತೆಗೆ ನೆಮ್ಮದಿಯ ಬದುಕು: ಸಿದ್ದರಾಮಯ್ಯ
ಬೆಂಗಳೂರು: ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಬದುಕು ಕಟ್ಟಿಕೊಳ್ಳಲು ಕಳೆದ ಆರು ತಿಂಗಳಲ್ಲಿ ನಮ್ಮ ಸರ್ಕಾರ ರೂಪಿಸಿದ ಯೋಜನೆಗಳು ಯಶಸ್ವಿಗೊಂಡಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸಮರ್ಥಿಸಿಕೊಂಡಿದ್ದಾರೆ.
ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಕಷ್ಟ ಸಂದರ್ಭದಲ್ಲಿ ಅಧಿಕಾರ ಹಿಡಿದು ನಾಲ್ಕು ಗ್ಯಾರೆಂಟಿ ಯೋಜನೆಗಳ ಅನುಷ್ಟಾನದಿಂದ ಜನತೆ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ.
ಹವಮಾನ ವೈಪರೀತ್ಯದಿಂದ ಮಳೆ ಇಲ್ಲದೆ, ಬೆಳೆ ಕಳೆದುಕೊಂಡರೂ ರೈತರು ಕಂಗಾಲಾಗಿಲ್ಲ, ಯಾರೂ ಹಸಿವಿನಿಂದ ಬಳಲಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಆರು ತಿಂಗಳ ಆಡಳಿತದ ಸಾಧನೆಯನ್ನು ಟ್ವೀಟ್ ಮೂಲಕ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಅವರು, ನಮ್ಮ ಯೋಜನೆಗಳಿಂದ ಕುಟುಂಬ ನಿರ್ವಹಣೆ ಹೊಣೆ ಹೊತ್ತ ನಾಡಿನ ಮಹಿಳೆಯರು ನೆಮ್ಮದಿಯಿಂದ ಬದುಕುತ್ತಿದ್ದಾರೆ.
ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆಗೆ ಸರ್ಕಾರ ಆದ್ಯತೆ
ಗ್ಯಾರೆಂಟಿ ಯೋಜನೆಗಳೂ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿ ಮತ್ತು ಸಮಾಜದ ಶಾಂತಿ-ಸಾಮರಸ್ಯದ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿದೆ. ನಮ್ಮ ಯೋಜನೆಗಳು ಇಡೀ ರಾಷ್ಟ್ರಕ್ಕೆ ಮಾದರಿಯಾಗಿ ಬೇರೆ ರಾಜ್ಯಗಳೂ ನಮ್ಮನ್ನು ಅನುಸರಿಸಲು ಮುಂದಾಗಿರುವುದೇ ಇದಕ್ಕೆ ಸಾಕ್ಷಿ ಎಂದರು.
ಗೃಹ ಲಕ್ಷ್ಮೀ ಯೋಜನೆಯಡಿ 99.52 ಲಕ್ಷ ಮಹಿಳೆಯರ ಖಾತೆಗೆ ಮಾಸಿಕ 2000 ರೂ. ಸಹಾಯಧನ ಸಂದಾಯವಾಗುತ್ತಿದ್ದು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಾಗುತ್ತಿದೆ.
ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು ನಿತ್ಯ ಸರಾಸರಿ 60 ಲಕ್ಷದಂತೆ ಇದುವರೆಗೂ 97.2 ಕೋಟಿಗೂ ಅಧಿಕ ಬಾರಿ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಮಲತಾಯಿ ದೋರಣೆ
ಕೇಂದ್ರ ಸರ್ಕಾರದ ಮಲತಾಯಿ ದೋರಣೆ ನಡುವೆಯೂ ಕಳೆದ ಆರು ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನಿಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.
ನಮ್ಮ ಯೋಜನೆಗಳು ನಾಡಿನ ಪ್ರತಿಯೊಬ್ಬರನ್ನೂ ತಲುಪುವ ಪ್ರಾಮಾಣಿಕ ಪಯತ್ನ ಇದಾಗಿದೆ. ನಮ್ಮ ಈ ಪ್ರಯತ್ನದ ಫಲವಾಗಿ ಇಂದು ಪ್ರತೀ ಮನೆ-ಮನೆಯಲ್ಲೂ ಗ್ಯಾರೆಂಟಿ ಯೊಜನೆಗಳ ಫಲಾನುಭವಿಗಳನ್ನು ಕಾಣುವಂತಾಗಿರುವುದು ಖುಷಿಯ ವಿಚಾರ.
ಕರ್ನಾಟಕ ಮಾದರಿ ಆಡಳಿತದ ನವಕಲ್ಪನೆಗೆ ದೇಶದಲ್ಲಿ ಮನ್ನಣೆ
ಭರವಸೆಗಳನ್ನು ಈಡೇರಿಸುವ ಜೊತೆಗೆ ಅಭಿವೃದ್ಧಿಯನ್ನೂ ಸಮಾನವಾಗಿ ಮುನ್ನಡೆಸುವ ಕರ್ನಾಟಕ ಮಾದರಿ ಆಡಳಿತವೆಂಬ ನವಕಲ್ಪನೆ ಇಡೀ ದೇಶದಲ್ಲಿ ಮನ್ನಣೆ ಗಳಿಸಿದೆ.
ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಸರ್ವರನ್ನೂ ಒಳಗೊಳ್ಳುವ ಸಮಾನ ಅವಕಾಶಗಳ ಸರ್ವತೋಮುಖ ಪ್ರಗತಿಯ ನಾಡು ಕಟ್ಟಲು ಇದು ನಮಗೆ ಬುನಾದಿ.
ಗ್ಯಾರೆಂಟಿ ಯೋಜನೆಗಳ ಅನುಷ್ಟಾನ ಜೊತೆಗೆ ಬರ ಪರಿಹಾರದ ಕೆಲಸ ಯುದ್ಧೋಪಾದಿಯಲ್ಲಿ ನಡೆದಿದೆ. ಕುಡಿಯುವ ನೀರು, ದನ-ಕರುಗಳಿಗೆ ಮೇವು, ಜನರಿಗೆ ಉದ್ಯೋಗ ಕೊಡುವ ಕೆಲಸವೂ ಆಗುತ್ತಿದೆ.
ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಒಂದು ತಿಂಗಳ ಮೇಲಾಗಿದ್ದರೂ ಇದುವರೆಗೂ ಒಂದು ನಯಾಪೈಸೆ ಪರಿಹಾರವನ್ನೂ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳು ಪ್ರಾರಂಭವಾಗಿವೆ, ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಲಾಗಿದೆ, ಮೇವಿಗೆ ಅಭಾವವಿಲ್ಲ, ಜನರಿಗೆ ಉದ್ಯೋಗ ನೀಡುವ ಕೆಲಸವೂ ಆಗುತ್ತಿದೆ.
ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ವಿಚಾರ, ನಾವು ನೋಡಿಕೊಳ್ಳುತ್ತೇವೆ ಎಂದರು.
ಬಿಜೆಪಿ ಭರವಸೆಗಳನ್ನು ಜನತೆ ನಂಬುವುದಿಲ್ಲ
ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಅಲ್ಲ, ಆದ್ದರಿಂದ ಅವರ ಯಾವುದೇ ಭರವಸೆಗಳನ್ನು ಜನತೆ ನಂಬುವುದಿಲ್ಲ. ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳಲ್ಲಿ ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ.
ಆ ಪಕ್ಷ ಬಹಳ ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದರೂ, ಯಾವುದೇ ಪ್ರಗತಿ ಸಾಧಿಸಿಲ್ಲ, ಈಗ ಪ್ರಗತಿ ಸಾಧಿಸುವುದಾಗಿ ಭರವಸೆಗಳನ್ನು ನೀಡುತ್ತಿದೆ, ಬಿಜೆಪಿ ಅವರ ಮಾತುಗಳನ್ನು ಜನತೆ ನಂಬುವುದಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಮ್ಮನ್ನು ಅಕ್ಷೇಪಿಸಲು ಯಾವ ನೈತಿಕತೆಯೂ ಇಲ್ಲ, ಮಾಜಿ ಶಾಸಕ ಯತೀಂದ್ರ ದುಡ್ಡಿನ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆಯೇ, ಅವರ ಬಳಿ ಏನಾದರೂ ಪುರಾವೆ ಇದೆಯೇ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಕಾಲದಲ್ಲಿ ವರ್ಗಾವಣೆ ಮೂಲಕ ದುಡ್ಡು ಮಾಡಲಾಗಿದೆ
ಯತೀಂದ್ರ ಅವರು ಸಿಎಸ್‌ಆರ್‌ಫಂಡ್ ಬಗ್ಗೆ ಮಾತನಾಡಿದರೆ, ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸುತ್ತಾರೆ, ಕುಮಾರಸ್ವಾಮಿ ಕಾಲದಲ್ಲಿ ವರ್ಗಾವಣೆಗಳ ಮೂಲಕ ದುಡ್ಡು ಮಾಡಿರುವುದು ಜಗಜ್ಜಾಹೀರಾಗಿದೆ, ಅವರಿಗೆ ನಮ್ಮ ವಿರುದ್ಧ ಆರೋಪ ಮಾಡುವ ನೈತಿಕತೆ ಇಲ್ಲ ಎಂದರು.