ನಾವು ಪತ್ರ ಬರೆದಿದ್ದು, ಇದುವರೆಗೂ ಉತ್ತರ ಬಂದಿಲ್ಲ
ಬೆಂಗಳೂರು:ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳು ಪ್ರಾರಂಭವಾಗಿವೆ, ಕುಡಿಯುವ ನೀರು, ದನಕರುಗಳಿಗೆ ಮೇವು ಒದಗಿಸಲಾಗಿದೆ, ಮೇವಿಗೆ ಅಭಾವವಿಲ್ಲ, ಜನರಿಗೆ ಉದ್ಯೋಗ ನೀಡುವ ಕೆಲಸವೂ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಪ್ರವಾಸ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬರಗಾಲ ಬಂದಾಗ 150 ದಿನಗಳ ಕೆಲಸ ನೀಡುವುದು ಕಡ್ಡಾಯ, ಇದಕ್ಕೆ ಕೇಂದ್ರ ಸರ್ಕಾರ ಅನುಮತಿ ಕೊಡಬೇಕು, ಅನುಮತಿ ಕೋರಿ ನಾವು ಪತ್ರ ಬರೆದಿದ್ದು ಇದುವರೆಗೂ ಉತ್ತರ ಬಂದಿಲ್ಲ ಎಂದರು.
ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ತೆರಳಿ ಒಂದು ತಿಂಗಳಾಗಿದ್ದರೂ ಇದುವರೆಗೆ ಒಂದು ನಯಾಪೈಸೆಯನ್ನೂ ಕೊಟ್ಟಿಲ್ಲ, ಎನ್.ಡಿ.ಆರ್‌ಎಫ್ ಮಾರ್ಗಸೂಚಿಯಲ್ಲಿ ಮಾರ್ಪಾಡು ತರುವಂತೆ ಕೋರಿ ಬರೆದಿರುವ ಪತ್ರಕ್ಕೂ ಕೆಂದ್ರದಿಂದ ಉತ್ತರವಿಲ್ಲ ಎಂದರು.
ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ವಿಚಾರ, ನಾವು ನೋಡಿಕೊಳ್ಳುತ್ತೇವೆ ಎಂದರು.
ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಅಲ್ಲ
ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಅಲ್ಲ, ಆದ್ದರಿಂದ ಅವರ ಯಾವುದೇ ಭರವಸೆಗಳನ್ನು ಜನತೆ ನಂಬುವುದಿಲ್ಲ.
ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಐದು ರಾಜ್ಯಗಳಲ್ಲಿ ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದೆ, ಆ ಪಕ್ಷ ಬಹಳ ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದರೂ, ಯಾವುದೇ ಪ್ರಗತಿ ಸಾಧಿಸಿಲ್ಲ, ಈಗ ಪ್ರಗತಿ ಸಾಧಿಸುವುದಾಗಿ ಭರವಸೆಗಳನ್ನು ನೀಡುತ್ತಿದೆ, ಬಿಜೆಪಿ ಅವರ ಮಾತುಗಳನ್ನು ಜನತೆ ನಂಬುವುದಿಲ್ಲ ಎಂದರು.
ಕುಮಾರಸ್ವಾಮಿಗೆ ನಮ್ಮನ್ನು ಆಕ್ಷೇಪಿಸಲು ನೈತಿಕತೆ ಇಲ್ಲ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಮ್ಮನ್ನು ಆಕ್ಷೇಪಿಸಲು ಯಾವ ನೈತಿಕತೆಯೂ ಇಲ್ಲ, ಮಾಜಿ ಶಾಸಕ ಯತೀಂದ್ರ ದುಡ್ಡಿನ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆಯೇ, ಅವರ ಬಳಿ ಏನಾದರೂ ಪುರಾವೆ ಇದೆಯೇ ಎಂದು ಪ್ರಶ್ನಿಸಿದರು.
ಯತೀಂದ್ರ ಅವರು ಸಿಎಸ್‌ಆರ್‌ಫಂಡ್ ಬಗ್ಗೆ ಮಾತನಾಡಿದರೆ, ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸುತ್ತಾರೆ, ಕುಮಾರಸ್ವಾಮಿ ಕಾಲದಲ್ಲಿ ವರ್ಗಾವಣೆಗಳ ಮೂಲಕ ದುಡ್ಡು ಮಾಡಿರುವುದು ಜಗಜ್ಜಾಹೀರವಾಗಿದೆ, ಅವರು ನಮ್ಮ ವಿರುದ್ದ ಆರೋಪ ಮಾಡುವ ನೈತಿಕತೆ ಇಲ್ಲ ಎಂದರು.