ಎಸ್‌ಇಪಿ-ಟಿಎಸ್‌ಪಿ ಹಣ ಬಳಕೆಯ ಮೌಲ್ಯ ಮಾಪನ
ಬೆಂಗಳೂರು: ಪರಿಶಿಷ್ಟರ ಕಲ್ಯಾಣಕ್ಕೆ ಒದಗಿಸಲಾಗಿರುವ ವಿಶೇಷ ಘಟಕ ಯೋಜನೆ (ಎಸ್‌ಇಪಿ-ಟಿಎಸ್‌ಪಿ) ಅಡಿ ಹಣ ಬಳಕೆಯ ಬಗ್ಗೆ ಮೌಲ್ಯ ಮಾಪನ ಮಾಡಲಾಗುವುದೆಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆ ಅನುಷ್ಟಾನಗೊಂಡ ನಂತರ ಇದುವರೆಗೂ ಎರಡು ಲಕ್ಷ ಕೋಟಿ ರೂ. ಈ ಸಮಾಜದ ಕುಟುಂಬಗಳಿಗೆ ವೆಚ್ಚ ಮಾಡಲಾಗಿದ್ದು ,ಅದು ಸಮರ್ಪಕವಾಗಿ ಜಾರಿಗೊಂಡಿದೆಯೇ, ಇಲ್ಲವೆ ಎಂದು ತಿಳಿಯಲು ಮಾಲ್ಯ ಮಾಪನ ಮಾಡಲಾಗುತ್ತಿದೆ.
ಎಸ್‌ಸಿ, ಎಸ್‌ಸ್ಟಿಗೆ ಮೀಸಲಿರಿಸಿದ ಈ ಹಣವನ್ನು ಕೆಲವು ಇಲಾಖೆಗಳು ದುರುಪಯೋಗ ಪಡಿಸಿಕೊಂಡಿವೆ ಎಂಬ ದೂರಿದೆ. ಜೊತೆಗೆ ಯೋಜನೆಯನ್ನು ಸಮರ್ಪಕವಾಗಿ ಕೆಲವು ಇಲಾಖೆಗಳು ಜಾರಿಗೊಳಿಸಿಲ್ಲ ಎಂಬ ದೂರಿನ ಮಾಹಿತಿಯ ಹಿನ್ನೆಲೆಯಲ್ಲಿ ಮಾಪನ ಮಾಡಲಾಗುತ್ತಿದೆ ಎಂದರು.
ಕುಟುಂಬ ಸಮಾಜದ ಮುಖ್ಯ ವಾಹಿನಿಗೆ
ಸರ್ಕಾರ ನೀಡಿರುವ ಯೋಜನೆಯಿಂದ ಒಂದು ಕುಟುಂಬ ಸಮಾಜದ ಮುಖ್ಯ ವಾಹಿನಿಗೆ ಬಂದಿದೆಯೇ, ಇಲ್ಲವೇ, ಬಾರದಿದ್ದರೆ ಮತ್ತೆ ಎರಡನೇ ಬಾರಿಗೆ ಧನಸಹಾಯ ನೀಡಬೇಕೆ ಎಂದು ತಿಳಿಯಲು ನಮಗೆ ಈ ಬಗ್ಗೆ ಮಾಹಿತಿ ದೊರೆಯಲಿದೆ.
ಎಸ್.ಸಿ.ಪಿ-ಟಿ.ಎಸ್.ಪಿ ಕಾಯ್ದೆಯಡಿ ಪರಿಶಿಷ್ಟ ಜಾತಿ, ವರ್ಗಗಳಿಗೆ ಇದುವರೆಗೆ ನೀಡಿರುವ ಹಣ ಸಮರ್ಪಕವಾಗಿ ಬಳಕೆಯಾಗಿದೆಯೋ, ಇಲ್ಲವೋ ಎಂಬ ಅನುಮಾನವನ್ನು ದೂರ ಮಾಡಲು ಇಂತಹ ತೀರ್ಮಾನ ಕೈಗೊಂಡಿದ್ದೇವೆ.
ಆರು ತಿಂಗಳಲ್ಲಿ ಮೌಲ್ಯಮಾಪನ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ
ಈ ಮೌಲ್ಯಮಾಪನ ಕಾರ್ಯವನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದ್ದು, ಈ ಮೌಲ್ಯಮಾಪನದ ವರದಿಯ ಆಧಾರದ ಮೇಲೆ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲು ಬಯಸಲಾಗಿದೆ ಎಂದರು.
ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣವನ್ನು ಬೇರೆ ಕಡೆ ವರ್ಗಾಯಿಸುವಂತಿಲ್ಲವಾದರೂ ಅನಿವಾರ್ಯ ಸಂದರ್ಭಗಳಲ್ಲಿ ಸೆಕ್ಷನ್ ೭ಡಿ ಅಡಿ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈ ಸೆಕ್ಷನ್ ಅನ್ನು ತೆಗೆದುಹಾಕಲು ತೀರ್ಮಾನಿಸಲಾಗಿದ್ದು ಬೆಳಗಾವಿ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಗುವುದು ಎಂದರು.
ಸೆಕ್ಷನ್ 7ಡಿಗೆ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ
ಈ ಹಿಂದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೆಕ್ಷನ್ 7ಡಿ ಅನ್ನು ಬಳಸಿಕೊಂಡು ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣದಲ್ಲಿ 10 ಸಾವಿರ ಕೋಟಿ ರೂ.ಗಳನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗ ಮಾಡಿತ್ತು ಎಂದು ನುಡಿದರು.
ಕಳೆದ ಸಾಲಿನಲ್ಲಿ ಕಾಯ್ದೆಯಡಿ ಪರಿಶಿಷ್ಟರಿಗೆ ಮೀಸಲಾಗಿಟ್ಟ ಹಣದಲ್ಲಿ ಶೇ.76ರಷ್ಟು ಹಣವನ್ನು ವೆಚ್ಚ ಮಾಡಲಾಗಿತ್ತಾದರೆ, ನಾವು ಅಧಿಕಾರಕ್ಕೆ ಬಂದ ನಂತರ ಈ ವರ್ಷ ಶೇ.78 ರಷ್ಟು ಹಣವನ್ನು ವೆಚ್ಚ ಮಾಡಲಾಗಿದೆ ಎಂದು ವಿವರ ನೀಡಿದರು.
ಈ ವರ್ಷ ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಮೂವತ್ತು ಸಾವಿರ ಕೋಟಿ ರೂಪಾಯಿಗಳನ್ನು ಒದಗಿಸಲಾಗಿದ್ದು, ನಿಗದಿತ ಅವಧಿಯೊಳಗಾಗಿ ಈ ಹಣವನ್ನು ವೆಚ್ಚ ಮಾಡಲಾಗುವುದು ಎಂದರು.
ಈ ಮಧ್ಯೆ ರಾಜ್ಯದ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿಲ್ಲದ ಪರಿಶಿಷ್ಟರಿಗೆ ಸರ್ಕಾರದ ವೆಚ್ಚದಲ್ಲೇ ಸದಸ್ಯತ್ವ ಒದಗಿಸಿ ಕೊಡಲು ಸೂಚನೆ ನೀಡಲಾಗಿದೆ.
15 ಲಕ್ಷ ಮಂದಿ ವ್ಯವಸಾಯ ಭೂಮಿಗೆ ಪೋಡಿ ಸಿಕ್ಕಿಲ್ಲ
ರಾಜ್ಯಾದ್ಯಂತ ಪರಿಶಿಷ್ಟ ಜಾತಿ, ಪಂಗಡದ ಸುಮಾರು 15 ಲಕ್ಷ ಮಂದಿ ವ್ಯವಸಾಯ ಭೂಮಿ ಹೊಂದಿದ್ದರೂ ಶೇ.50ರಷ್ಟು ಮಂದಿಯ ಭೂಮಿಗೆ ಪೋಡಿ ಸಿಕ್ಕಿಲ್ಲ. ಇದೇ ಕಾರಣಕ್ಕೆ ಅವರಿಗೆ ಪ್ರಧಾನಮಂತ್ರಿಗಳ ಫಸಲ್ ಬಿಮಾ ಯೋಜನೆ ಸೌಲಭ್ಯ ಸೇರಿದಂತೆ ಸರ್ಕಾರಗಳ ಹಲವು ಸವಲತ್ತುಗಳು ಸಿಗುತ್ತಿಲ್ಲ ಎಂದರು.
ಪೋಡಿ ಮಾಡಿಸಿಕೊಂಡಿರದ ದಲಿತರಿಗೆ ತಕ್ಷಣ ಪೋಡಿ ಮಾಡಿಸಿಕೊಡಲು ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಲಜೀವನ್ ಮಿಷನ್ ಅಡಿ ರಾಜ್ಯದ 30 ಲಕ್ಷ ಪರಿಶಿಷ್ಟ ಕುಟುಂಬಗಳಿಗೆ ಕೊಳಾಯಿ ಸಂಪರ್ಕ ನೀಡಲಾಗಿದ್ದು, ಇದು ಎಷ್ಟರ ಮಟ್ಟಿಗೆ ಕಾರ್ಯಗತವಾಗಿದೆ ಎಂಬ ಸಂಬಂಧ ಮೌಲ್ಯಮಾಪನ ವರದಿ ನೀಡಲು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.