ಗೃಹ ಇಲಾಖೆ ತಕ್ಷಣ ಕ್ರಮಕೈಗೊಳ್ಳಬೇಕು
ಬೆಂಗಳೂರು:ಕಾಂಗ್ರೆಸ್ ಪೋಸ್ಟರ್ ಚಾಳಿ ಬಿಡದಿದ್ದರೆ ಕಾನೂನು ಸುವ್ಯವಸ್ಥೆ ಹದಗೆಟ್ಟು ರಕ್ತಪಾತವಾದರೆ ಸರ್ಕಾರವೇ ಹೊಣೆ ಎಂದು ಜೆಡಿಎಸ್ ಇಂದಿಲ್ಲಿ ಎಚ್ಚರಿಕೆ ನೀಡಿದೆ.
ಪೋಸ್ಟರ್ ಚಾಳಿಗೆ ಪೊಲೀಸರು ಕಡಿವಾಣ ಹಾಕದಿದ್ದರೆ ಹಾದಿ-ಬಿದಿಯಲ್ಲಿ ಮಾರಾಮಾರಿ ಆಗುತ್ತದೆ, ಗೃಹ ಇಲಾಖೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ನಾವೂ ಪೊಸ್ಟರ್ ರಾಜಕೀಯ ಮಾಡುತ್ತೇವೆ ಎಂದಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಜಿ ಶಾಸಕರಾದ ಎ.ಮಂಜುನಾಥ್, ಅಶ್ವಿನ್‌ಕುಮಾರ್ ಹಾಗೂ ಎಚ್.ಎಂ. ರಮೇಶ್ ಗೌಡ, ನಮ್ಮ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಪೊಲಿಟಿಕ್ಸ್ ಮಾಡಲಾಗುತ್ತಿದೆ ಎಂದರು.
ಗೃಹ ಸಚಿವರು ತಕ್ಷಣ ಮಧ್ಯೆ ಪ್ರವೇಶ ಮಾಡಿ ಇದನ್ನು ತಡೆಯಬೇಕು, ಕಾಂಗ್ರೆಸ್ ತಮ್ಮ ಪಕ್ಷದ ನಾಯಕರ ಮೇಲೆ ಬರುತ್ತಿರುವ ಆರೋಪಗಳನ್ನು ಸಹಿಸಲಾಗದೆ ಇಂತಹ ಅನಿಷ್ಟ ಪದ್ಧತಿಗೆ ಇಳಿದಿದೆ.
ಕಾಂಗ್ರೆಸ್ ಪಕ್ಷದವರು ಬಿಜೆಪಿ ಸರ್ಕಾರದ ಸಮಯದಲ್ಲಿ ಪೇ-ಸಿಎಂ ಪೋಸ್ಟರ್‌ಗಳನ್ನು ರಾತ್ರೋರಾತ್ರಿ ಅಂಟಿಸಿದರು. ಈಗ ಜನಪರ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡುತ್ತಿರುವ ಕುಮಾರಸ್ವಾಮಿ ಅವರ ಬಗ್ಗೆ ಅಶ್ಲೀಲ, ಕೀಳು ಅಭಿರುಚಿಯ ಪೋಸ್ಟರ್ ಅಂಟಿಸಿ ಮೇಲುಗೈ ಸಾಧಿಸುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ.
ನಾವು ಕಾಂಗ್ರೆಸ್‌ನವರ ವಿರುದ್ಧದ ಪೋಸ್ಟರ್‌ಗಳನ್ನು ಅಂಟಿಸುವುದು ದೊಡ್ಡ ವಿಚಾರವಲ್ಲ, ಅವರು ಒಂದು ಮಾಡಿದರೆ ಹತ್ತು ಮಾಡುವ ಶಕ್ತಿ ನಮಗೂ ಇದೆ, ಇದು ಯಾವುದು ರಾಜಕಾರಣದಲ್ಲಿ ಶಾಶ್ವತ ಅಲ್ಲ ಎಂದರು.
ಪೊಲೀಸ್ ಮಹಾನಿರ್ದೇಶಕರಿಗೂ ಸಹ ಮನವಿ ಮಾಡುತ್ತೇವೆ, ಇದಕ್ಕೆಲ್ಲಾ ಕಡಿವಾಣ ಹಾಕುವ ಕೆಲಸ ಮಾಡಬೇಕು, ವಿದ್ಯುತ್ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಪೋಸ್ಟರ್ ಅಂಟಿಸಿದಾಗ ಗೃಹ ಇಲಾಖೆ ಏನು ಮಾಡುತ್ತಿತ್ತು, ಮತ್ತೆ ಪೋಸ್ಟರ್ ಅಂಟಿಸಿದ್ದಾರೆ.
ಇದು ಹೀಗೇ ಮುಂದುವರೆದರೆ ಹಾದಿ-ಬೀದಿಯಲ್ಲಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆಯುವ ಪರಿಸ್ಥಿತಿ ಸೃಷ್ಟಿ ಆಗುತ್ತದೆ, ಅಂತಹ ಪರಿಸ್ಥಿತಿ ಸೃಷ್ಟಿಯಾದರೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯೇ ಹೊಣೆ ಆಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಹಿಂಬಾಲಕರು ಈ ಕೃತ್ಯದಲ್ಲಿ ತೊಡಗಿದ್ದಾರೆ, ಗೃಹ ಇಲಾಖೆ ಇದಕ್ಕೆ ಕಡಿವಾಣ ಹಾಕದಿದ್ದರೆ ಇದಕ್ಕಿಂತ ಹೆಚ್ಚಿನ ಪೋಸ್ಟರ್ ಚಳವಳಿ ನಡೆಯುತ್ತದೆ.
ರಾಜ್ಯದ ಜನತೆಗೆ ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ತಿಳಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಮಾಡಿದ್ದೆಲ್ಲಾ ಸರಿಯಾಗಿದ್ದರೆ ಈ ರೀತಿ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದರು. ಪೋಸ್ಟರ್ ಅಂಟಿಸಲು ನಮ್ಮಲ್ಲೂ ಕಾರ್ಯಕರ್ತರು, ಅಭಿಮಾನಿಗಳು ಇದ್ದಾರೆ, ಕಾಂಗ್ರೆಸ್ ಮಾಡಿದ್ದನ್ನೇ ನಾವು ಮಾಡುತ್ತೇವೆ.
ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಲಿದ್ದು ಕುಮಾರಸ್ವಾಮಿ ಅವರ ಆರೋಪಗಳಿಗೆ ಸರ್ಕಾರ ಸದನದಲ್ಲಿ ಉತ್ತರ ನೀಡಲಿ, ಜೆಡಿಎಸ್ ನಾಯಕರು ಗಾಜಿನ ಮನೆಯಲ್ಲಿಲ್ಲ ಎಂಬುದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಪೋಸ್ಟರ್ ಅಂಟಿಸಬಾರದು ಎಂಬುದಾಗಿ ಹೈಕೋರ್ಟ್‌ನ ಸ್ಪಷ್ಟ ಆದೇಶವಿದೆ, ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಿದ್ದ ಏಜೆನ್ಸಿಯೇ ಇಂದು ವಿವಾದಾತ್ಮಕ ಪೋಸ್ಟರ್‌ಗಳನ್ನು ಅಂಟಿಸುವ ಕೆಲಸ ಮಾಡುತ್ತಿದೆ.
ಕುಮಾರಸ್ವಾಮಿ ಯಾವುದೇ ಆರೋಪ ಮಾಡಿದರೂ ದಾಖಲೆ ಇಟ್ಟುಕೊಂಡು ಮಾತನಾಡುತ್ತಾರೆ. ನಮ್ಮ ನಾಯಕರ ಆರೋಪಕ್ಕೆ ಕಾಂಗ್ರೆಸ್‌ನವರು ಏಕೆ ಹೆದರುತ್ತಾರೆ.
ಪೆನ್‌ಡ್ರೈವ್ ಬಗ್ಗೆಯೂ ಕುಮಾರಸ್ವಾಮಿ ಉತ್ತರ ಕೊಟ್ಟಿದ್ದಾರೆ, ’ಪೆನ್‌ಡ್ರೈವ್ ವಿಷಯ ಬೇಡ, ಸರ್ಕಾರ ಬಂದು ಸ್ವಲ್ಪ ತಿಂಗಳಾಗಿದೆ’ ಎಂದು ಕಾಂಗ್ರೆಸ್ ನಾಯಕರೇ ಕುಮಾರಸ್ವಾಮಿ ಬಳಿ ಮನವಿ ಮಾಡಿದ್ದರು ಎಂದರು.