ಬೆಸ್ಕಾಂ ನಿರ್ಲಕ್ಷ್ಯಕ್ಕೆ ಸರ್ಕಾರದ ಮುಖ್ಯಸ್ಥರೇ ಕಾರಣ
ಬೆಂಗಳೂರು:ವಿದ್ಯುತ್ ಸರಬರಾಜು ಕಂಪನಿ ‘ಬೆಸ್ಕಾಂ’ನ ನಿರ್ಲಕ್ಷ್ಯದಿಂದಾಗಿ ತಾಯಿ ಮತ್ತು ಮಗು ವಿದ್ಯುತ್ ಸ್ಪರ್ಶದಿಂದ ಆಕಸ್ಮಿಕ ಸಾವು ಸಂಭವಿಸಿದ್ದು ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇಂಧನ ಸಚಿವ ಜಾರ್ಜ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಜೆಡಿಎಸ್ ನಾಯಕ ಟಿ. ಎ. ಶರವಣ ಇಂದಿಲ್ಲಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಮಾಡಿದ ತಪ್ಪಿಗೆ, ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡಿ ವಿದ್ಯುತ್ ಕಳ್ಳತನದ ಆರೋಪ ಹೊರಿಸಿ ದಂಡ ಕಟ್ಟಿಸಿಕೊಂಡ ರಾಜ್ಯ ಸರ್ಕಾರ, ಹಾಡು ಹಗಲೇ ತಾಯಿ ಮತ್ತು ಮಗುವಿನ ಸಾವಿಗೆ ಕಾರಣವಾಗಿರುವುದು ಅಕ್ಷಮ್ಯ ಅಪರಾಧ ಎಂದರು.
ದುರಂತಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯಸ್ಥರು ಮತ್ತು ಇಂಧನ ಸಚಿವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಆಗ್ರಹಪಡಿಸಿದರು.
ಒಟ್ಟು 50 ಲಕ್ಷ ರೂ. ಪರಿಹಾರ ನೀಡಬೇಕು
ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಕೊಟ್ಟರೆ ಸಾಲದು, ಎರಡು ಜೀವಗಳಿಗೆ ತಲಾ 25 ಲಕ್ಷ ರೂ.ನಂತೆ ಒಟ್ಟು 50 ಲಕ್ಷ ರೂ. ಪರಿಹಾರ ನೀಡಬೇಕು.
ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಸಮರ್ಥ ಪ್ರತಿಪಕ್ಷ ನಾಯಕರಾಗಿ ಕುಮಾರಸ್ವಾಮಿ ಕಾರ್ಯನಿರ್ವಹಿಸುತ್ತಿದ್ದು, ಅವರ ವಿರುದ್ಧ ಕಾಂಗ್ರೆಸ್ ನಾಯಕರು ವ್ಯಕ್ತಿಗತ ದ್ವೇಷದ ರಾಜಕೀಯ ಮಾತಾಡುತ್ತಿದ್ದಾರೆ.
ವಿಧಾನಪರಿಷತ್ ಸದಸ್ಯರಾಗಲು ಮಾಜಿ ಪ್ರಧಾನಿ ದೇವೇಗೌಡರಿಗೆ ಹಣ ಕೊಟ್ಟಿರುವುದಾಗಿ ಸಿ.ಎಂ. ಇಬ್ರಾಹಿಂ ಆರೋಪಿಸಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿ, ಕೇಂದ್ರದಲ್ಲಿ ಎಚ್.ಡಿ.ದೇವೇಗೌಡ ಅವರ ಸಂಪುಟದಲ್ಲಿ ಕಾರ್ಯನಿರ್ವಹಿಸಿ, ಪಕ್ಷದ ಎಲ್ಲ ತೀರ್ಮಾನಗಳಲ್ಲಿ ಭಾಗಿ ಆಗಿ, ಈಗ ಏಕಾಏಕಿ ಆರೋಪ ಮಾಡುವುದು ಸರಿಯಲ್ಲ.
ಇತ್ತೀಚಿನವರೆಗೆ ದೇವೇಗೌಡರನ್ನು ಪಿತೃ ಸಮಾನ, ಕುಮಾರಸ್ವಾಮಿ ಅವರನ್ನು ಸಹೋದರ ಸಮಾನ ಎನ್ನುತ್ತಿದ್ದ ಇಬ್ರಾಹಿಂ, ಪಕ್ಷದ ನಾಯಕರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುವುದನ್ನು ನಿಲ್ಲಿಸಲಿ ಎಂದರು.
ಗಾಜಿನ ಮನೆಯಲ್ಲಿರುವವರು ಬೇರೆಯವರ ಮನೆ ಮೇಲೆ ಕಲ್ಲು ಹೊಡೆಯಬಾರದು ಎಂದು ಶರವಣ ಕಿವಿಮಾತು ಹೇಳಿದರು.