ಕೃಷಿ ಪಂಪ್ ಸೆಟ್ ಗೆ ನಿತ್ಯ 7 ಗಂಟೆ ವಿದ್ಯುತ್ : ಕೆ.ಜೆ.ಜಾರ್ಜ್
ಬೆಂಗಳೂರು:ಮುಂಬರುವ ಬೇಸಿಗೆಯಲ್ಲಿ ವಿದ್ಯುತ್ ಅಭಾವ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಇಂಧನ ಸಚಿವರ ಕೆ.ಜೆ.ಜಾರ್ಜ್ ಇಂದಿಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ಪಂಪ್‌ಸೆಟ್‌ಗಳಿಗೆ ದಿನ ನಿತ್ಯ 7ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು. ತೀವ್ರ ಬರದ ನಡುವೆಯೂ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ರಾಜ್ಯ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿದೆ.
ದೈನಂದಿನ ವಿದ್ಯುತ್ ಬೇಡಿಕೆ 14 ಸಾವಿರ ಮೆ.ವ್ಯಾ.
ಸದ್ಯದ ಅಂಕಿ ಅಂಶಗಳ ಪ್ರಕಾರ, ರಾಜ್ಯದ ದೈನಂದಿನ ವಿದ್ಯುತ್ ಬೇಡಿಕೆ ಸುಮಾರು 14000 ಮೆ.ವ್ಯಾ. ಮತ್ತು ನೀರಾವರಿ ಪಂಪ್‌ಸೆಟ್ ಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಸುಮಾರು 4,500 ಮೆ.ವ್ಯಾ. ಇದೆ. ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಪ್ರಮಾಣ ಹೆಚ್ಚಳದ ಜತೆಗೆ ಸೆಕ್ಷನ್ 11 ಜಾರಿ ಮಾಡಲಾಗಿದೆ.
ಬೇರೆ ರಾಜ್ಯಗಳಿಂದ ವಿದ್ಯುತ್ ವಿನಿಮಯ ಮಾಡಿಕೊಳ್ಳಲಾಗುವುದು. ಬರುವ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಸರಾಸರಿ ವಿದ್ಯುತ್ ಬೇಡಿಕೆ ಸುಮಾರು 15500 ಮೆ.ವ್ಯಾ ನಿಂದ 16500 ಮೆ.ವ್ಯಾ. ತಲುಪುವ ನಿರೀಕ್ಷೆಯಿದೆ. ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸಲು ಪಂಜಾಬ್ ಮತ್ತು ಉತ್ತರ ಪ್ರದೇಶದಿಂದ ವಿದ್ಯುತ್ ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದ ಉಷ್ಣ ವಿದ್ಯುತ್ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು ಮತ್ತು ಎಓಹೆಚ್ ಜನರೇಟರ್‌ಗಳ ಕಾರ್ಯಾಚರಣೆ ಪುನಾರಂಭಿಸಲಾಗುವುದು. 370 ಮೆ.ವ್ಯಾ. ಸಾಮರ್ಥ್ಯದ ಯಲಹಂಕ ಅನಿಲ ಸ್ಥಾವರದಲ್ಲಿ ಶೀಘ್ರದಲ್ಲೇ ಉತ್ಪಾದನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.
1500 ಮೆ.ವ್ಯಾ. ವಿದ್ಯುತ್ ಖರೀದಿಸಲು ಕೆಇಆರ್‌ಸಿ ಅನುಮೋದನೆ
ಬೇಡಿಕೆ ಆಧರಿಸಿ ಅಲ್ಪಾವಧಿ ಆಧಾರದಲ್ಲಿ 1500 ಮೆ.ವ್ಯಾ. ವಿದ್ಯುತ್ ಖರೀದಿಸಲು ಕೆಇಆರ್‌ಸಿ ಅನುಮೋದನೆ ಪಡೆದು, ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಥರ್ಮಲ್ ಜನರೇಟರ್‌ಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ದೇಶೀಯ ಕಲ್ಲಿದ್ದಲಿನೊಂದಿಗೆ ಆಮದು ಕಲ್ಲಿದ್ದಲನ್ನು ಸರಾಸರಿ ಶೇ.10ರಷ್ಟು ಮಿಶ್ರಣ ಮಾಡಲಾಗುವುದು.
ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯ 2.64 ಲಕ್ಷ ಫಲಾನುಭವಿಗಳು ಬಾಕಿ ಉಳಿಸಿಕೊಂಡಿದ್ದ ವಿದ್ಯುತ್ ಶುಲ್ಕ389.66 ಕೋಟಿ ರೂ. ಮನ್ನಾ ಮಾಡಿ, ಗೃಹ ಜ್ಯೋತಿ ಯೋಜನೆಗೆ ಸೇರ್ಪಡೆಗೊಳಿಸಲಾಗಿದೆ.
ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕಾಫಿ ಬೆಳೆಗಾರರ 10 ಹೆಚ್.ಪಿ ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಬಿಲ್ ಅಸಲು 47.7 ಕೋಟಿ ರೂ. ಮತ್ತು ಬಡ್ಡಿ16.47 ಕೋಟಿ ರೂ. ಸೇರಿ ಒಟ್ಟು 64.24 ಕೋಟಿ ರೂ. ಸೆಪ್ಟೆಂಬರ್ 30 ರವರೆಗೆ ಬಾಕಿ ಉಳಿದಿದೆ. ಅಸಲು ಮೊತ್ತ ಪಾವತಿಸಿದ ನಂತರ ಸಂಚಿತ ಬಡ್ಡಿಯನ್ನು ಮನ್ನಾ ಮಾಡಲಾಗುವುದು.
ರಾಜ್ಯದಲ್ಲಿ 2500 ಮೆ.ವ್ಯಾ. ಪಂಪ್ಡ್ ಸ್ಟೋರೇಜ್, ಹೈಡ್ರೋ, ಸೋಲಾರ್ ಸೇರಿದಂತೆ 15000 ಕೋಟಿ ರೂ. ಮೊತ್ತದ ವಿವಿಧ ವಿದ್ಯುತ್ ಯೋಜನೆಗಳನ್ನು ಕೈಗೊಳ್ಳುವ ಸಂಬಂಧ ಕೇಂದ್ರ ಸರ್ಕಾರ ಸ್ವಾಮ್ಯದ ತೆಹ್ರಿ ಹೈಡ್ರೊ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ಜತೆ ರಾಜ್ಯ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
