ಸಿಎಂ-ಡಿಸಿಎಂ ಜೊತೆ ಸುರ್ಜೆವಾಲ ಚರ್ಚೆ
ಬೆಂಗಳೂರು: ರಾಜ್ಯದ ಇಪ್ಪತ್ತೈದು ನಿಗಮ ಮಂಡಳಿಗಳಿಗೆ ಮುಂದಿನ ಎರಡು ಮೂರು ದಿನಗಳಲ್ಲಿ ಅಧ್ಯಕ್ಷರನ್ನು ನೇಮಕ ಮಾಡಲು ಕಾಂಗ್ರೆಸ್ ವರಿಷ್ಟರು ನಿರ್ದರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆ ಚರ್ಚೆ ನಡೆಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಿವಿಧ ನಿಗಮ ಮಂಡಳಿಗಳಿಗೆ ನೇಮಕಗೊಳ್ಳಲಿರುವ ಅಧ್ಯಕ್ಷರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ.
ಮೊದಲ ಕಂತಿನಲ್ಲಿ ಶಾಸಕರಿಗೆ ಅವಕಾಶ
ಮೊದಲ ಕಂತಿನಲ್ಲಿ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನೀಡಲು ವರಿಷ್ಟರು ಬಯಸಿದ್ದು,ಪಕ್ಷದ ಕಾರ್ಯಕರ್ತರನ್ನೂ ಪರಿಗಣಿಸಬೇಕು,ಇಲ್ಲದಿದ್ದರೆ ಕಷ್ಟಕರ ವಾತಾವರಣ ಎದುರಾಗಲಿದೆ ಎಂಬ ಹಿರಿಯ ಸಚಿವರ ಮಾತನ್ನು ಇದುವರೆಗೂ ಪರಿಗಣಿಸಿಲ್ಲ.
ತಮ್ಮ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಮುಖ್ಯವಾಗಿಸಿಕೊಂಡಿರುವ ವರಿಷ್ಟರು, ಮೊದಲ ಕಂತಿನಲ್ಲಿ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಕೊಡೋಣ. ಹೀಗೆ ಕೊಡುವಾಗಲೂ ಶಾಸಕರನ್ನು ಮೂರು ನೆಲೆಯಲ್ಲಿ ವರ್ಗೀಕರಿಸಿ ಯಾವ ನಿಗಮ ಮಂಡಳಿಗಳಿಗೆ ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ನಿರ್ಧರಿಸೋಣ ಎಂದು ಹೇಳಿದ್ದಾರೆ.
ಸರ್ಕಾರದಲ್ಲಿ ಸಚಿವರಾಗಲೇಚೇಕು ಎಂದಿದ್ದವರನ್ನು ಮೊದಲ ಗುಂಪಿಗೆ ಸೇರಿಸಿ ಎಂ.ಎಸ್.ಐ.ಎಲ್, ಕೆ.ಎಸ್.ಡಿ.ಎಲ್, ಗೃಹ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ವಿದ್ಯುತ್ ಕಾರ್ಖಾನೆಯಂತಹ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನೀಡಬೇಕು.
ತದ ನಂತರ ಮೂರ್ನಾಲ್ಕು ಬಾರಿ ಶಾಸಕರಾಗಿರುವವರನ್ನು ಎರಡನೇ ಗುಂಪಿಗೆ, ಉಳಿದ ಶಾಸಕರನ್ನು ಮೂರನೇ ಗುಂಪಿಗೆ ಸೇರಿಸಿ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡಬೇಕು ಎಂಬುದು ಹೈಕಮಾಂಡ್ ವರಿಷ್ಟರ ಲೆಕ್ಕಾಚಾರವಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.