ಯಾರು ಏನೇ ಹೇಳಿದರೂ ಅದನ್ನು ಆಶೀರ್ವಾದ ಎಂದು ಭಾವಿಸುವೆ
ಬೆಂಗಳೂರು: ಪಕ್ಷದ ಹಿರಿಯರು ಏನೇ ಹೇಳಿಕೆ ಕೊಟ್ಟರೂ ಅದನ್ನು ಗಂಭೀರವಾಗಿ ಪರಿಗಣಿಸುವೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವೆ. ಯಾರು ಏನೇ ಹೇಳಿಕೆ ಕೊಟ್ಟರೂ ಅದನ್ನು ಅಪಾರ್ಥ ಮಾಡಿಕೊಳ್ಳದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ತಿಳಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿ ಭೇಟಿಯಾದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಒಟ್ಟಾಗಿ ಶ್ರಮಿಸೋಣ ಎಂದು ರಮೇಶ್ ಜಾರಕಿಹೊಳಿ ಅವರಿಗೆ ತಿಳಿಸಿದ್ದಾಗಿ ಹೇಳಿದರು. ರಮೇಶ್ ಜಾರಕಿಹೊಳಿ ಅವರ ನಡೆ ಬಗ್ಗೆ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿದ್ದವು. ಕೆಲವು ಸಂದರ್ಭದಲ್ಲಿ ಅವರು ಅಸಮಾಧಾನವನ್ನೂ ತೋಡಿಕೊಂಡಿದ್ದರು. ನಾನು ಬಿಜೆಪಿ ರಾಜ್ಯಾಧ್ಯಕ್ಷನಾದ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದೇನೆ. ದಿನನಿತ್ಯ ಇದನ್ನು ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಇವತ್ತು ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಸುಮಾರು 30 ನಿಮಿಷ ಮಾತನಾಡಿದ್ದೇನೆ. ಕೆಲವು ನೋವುಗಳನ್ನೂ ತೋಡಿಕೊಂಡಿದ್ದಾರೆ ಎಂದರಲ್ಲದೆ, ರಾಷ್ಟ್ರೀಯ ನಾಯಕರು, ವರಿಷ್ಠರು ಕೊಟ್ಟ ಜವಾಬ್ದಾರಿ ನಿರ್ವಹಿಸುತ್ತೇನೆ. ಎಲ್ಲರೂ ಜೊತೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಯನ್ನು ಬಲಪಡಿಸುತ್ತೇವೆ ಎಂದು ಹೇಳಿದರು.
ನಾನೊಬ್ಬ ರಾಜ್ಯಾಧ್ಯಕ್ಷ. ನನ್ನ ಕೆಲಸ ಮಾತನಾಡಬೇಕು. ಕಾರ್ಯಕರ್ತನಾಗಿ, ರಾಜ್ಯಾಧ್ಯಕ್ಷನಾಗಿ ಸಂಘಟನೆಗೆ ಒತ್ತು ಕೊಟ್ಟು ಕಾರ್ಯಕರ್ತರಿಗೆ ಉತ್ಸಾಹ ತುಂಬುವ ಮೂಲಕ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆದ್ದು ಅವರನ್ನು ದೆಹಲಿಗೆ ಕಳಿಸಲುನಾನು ಕರ್ತವ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.
ನಮ್ಮದು ರಾಷ್ಟ್ರೀಯ ಪಕ್ಷ. ರಾಷ್ಟ್ರೀಯ ನಾಯಕರು ಈ ಜವಾಬ್ದಾರಿ ನೀಡಿದ್ದಾರೆ. ಯಾರೇನೇ ಹೇಳಿದರೂ ಅದನ್ನು ಆಶೀರ್ವಾದ ಎಂದು ಭಾವಿಸಿ, ಎಲ್ಲರ ಮನವೊಲಿಸಿ ಅವರ ಸಹಕಾರದೊಂದಿಗೆ ಮುನ್ನಡೆಯುತ್ತೇನೆ ಎಂದು ತಿಳಿಸಿದರು.