ಇಂದು ಹಾಗೂ ನಾಳೆ ನಡೆಯುತ್ತಿರುವ ಕರಾವಳಿಯ ಕಂಬಳ
ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಹಾಗೂ ನಾಳೆ ಕರಾವಳಿಯ ಕಂಬಳ ನಡೆಯಲಿದೆ. ಕರಾವಳಿಯ ಜಾನಪದ ಕ್ರೀಡೆಯನ್ನು ಬೆಂಗಳೂರಿಗರು ಕಣ್ತುಂಬಿ ಕೊಳ್ಳಲು ಕೌಂಟ್ ಡೌನ್ ಶುರುವಾಗಿದೆ.
ಅರಮನೆ ಮೈದಾನವು ಜೋಡಿ ಕೋಣಗಳ ಮಿಂಚಿನ ಓಟಕ್ಕೆ ಸಾಕ್ಷಿಯಾಗಲಿದೆ. ಐತಿಹಾಸಿಕ ಕಂಬಳಕ್ಕೆ ಸಾಕ್ಷಿಯಾಗಲಿದೆ ರಾಜಧಾನಿ. ಕಂಬಳದ ಸೊಗಡನ್ನ ಸವಿಯಲು ಸಿಲಿಕಾನ್ ಸಿಟಿ ಜನರು ಕೌತುಕದಿಂದ ಕಾಯುತ್ತಿದ್ದಾರೆ. ಇಂದು ಸಂಜೆ 6 ಗಂಟೆಗೆ ಮುಖ್ಯ ಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.
ಕಂಬಳದ ಕಾರ್ಯಕ್ರಮಗಳು
ಇಂದು ಬೆಳಿಗ್ಗೆ 10.30 ರವೇಳಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಜೋಡು ಕರೆ ಉದ್ಘಾಟನೆ ಮಾಡಲಿದ್ದಾರೆ. ಬೆಳಿಗ್ಗೆ 11ಕ್ಕೆ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡುವರು. 12 ಗಂಟೆ ಹೊತ್ತಿಗೆ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆ ಉದ್ಘಾಟನೆಯನ್ನು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ನೆರವೇರಿಸಲಿದ್ದಾರೆ.
ಕೆಲವು ಸಾಧಕರಿಗೆ ಸನ್ಮಾನ ಕಾರ್ಯಕ್ರಮ/ ವಿವಿಧ ಸೆಲೆಬ್ರಿಟಿ ಭಾಗಿ
ಸಿಲಿಕಾನ್ ಸಿಟಿಯಲ್ಲಿ ಮೊಟ್ಟ ಮೊದಲ ಬಾರಿಗೆ ನಡೆಯಲಿದೆ ಕರಾವಳಿ ಕಂಬಳ ದಲ್ಲಿ ಮಿಂಚಿನ ಓಟದಲ್ಲಿ ಓಡಿ ಪ್ರಶಸ್ತಿ ಮುಡಿಗೇರಿಸಲು 180ಕ್ಕೂ ಅಧಿಕ ಕೋಣ ಸಜ್ಜಾಗಿವೆ.
ಸಾರ್ವಜನಿಕರಿಗೆ ಉಚಿತ
ನಗರದ ಅರಮನೆ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯುವ ಕಂಬಳ ಕ್ಕೆ ಅರಮನೆ ಮೈದಾನದ ಗೇಟ್ ನಂಬರ್ 1, 2, 3 ಹಾಗೂ 4 ರಲ್ಲಿ ಸಾರ್ವಜನಿಕರಿಗೆ ಪ್ರವೇಶವಿದೆ. ಕಂಬಳ ವೀಕ್ಷಿಸಲು ವಿವಿಐಪಿಗಳಿಗೆ ಪ್ರತ್ಯೇಕ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಕಂಬಳ ನೋಡಲು ಜನರಿಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ. 6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು.
ಈ ಕಂಬಳದ ವಿಶೇಷತೆ
ಬೆಂಗಳೂರು ಕಂಬಳದಲ್ಲಿ ಕೋಣಗಳ 180-200ಜೋಡಿ ಭಾಗಿಯಾಗೋ ಸಾಧ್ಯತೆ ಇದೆ. ಬೆಂಗಳೂರು ಕಂಬಳದ ಮುಖ್ಯ ವೇದಿಕೆಗೆ ಪುನಿತ್ ರಾಜ್ ಕುಮಾರ್ ಹೆಸರು ಇಡಲಾಗಿದೆ. ಕಂಬಳದ ಕರೆಗೆ ರಾಜ ಮಹಾರಾಜ ಎಂದು ಹೆಸರು ಹಾಗೂ ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ. ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವೈಭವವೂ ಇರಲಿದೆ. ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ ಕೂಡ ಇರಲಿದೆ.
ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಟ್ರ್ಯಾಕ್ 147 ಮೀಟರ್ ಉದ್ದ ಇರುತ್ತದೆ.ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದೆ. ಇದು ಕಂಬಳದ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದೆ. 228 ಕೋಣಗಳ ಜೋಡಿ ರಿಜಿಸ್ಟ್ರೇಷನ್ ಆಗಿದ್ದು 180-200 ಜೋಡಿ ಫೈನಲ್ ಆಗಲಿದೆ. ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.
ಆಹಾರ, ನೀರಿನ ಬಗ್ಗೆ ಕೋಣಗಳ ಮಾಲೀಕರಿಂದ ವಿಶೇಷ ಕಾಳಜಿ ವಹಿಸಲಾಗಿದೆ. ಕೋಣಗಳಿಗೆ ಬೈಹುಲ್ಲು, ಊರಿನಿಂದಲೇ ತರಲಾಗುತ್ತದೆ. ಆಹಾರ ಬದಲಾದರೆ ಕೋಣಗಳ ಆರೋಗ್ಯ ಏರುಪೇರು ಆಗುವ ಸಾಧ್ಯತೆ ಇದೆ. ಕಂಬಳದ ಸ್ಥಳಕ್ಕೆ ಪಶುವೈದ್ಯರು, ನಾಟಿ ವೈದ್ಯರೂ ಕೂಡ ಬಂದಿದ್ದಾರೆ.
ಬಹುಮಾನ
ಗೆದ್ದ ಕೋಣಗಳಿಗೆ ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು, ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು, ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ. ಕಂಬಳ ಓಡಿಸುವವರಿಗೆ ಕೂಡ ವಿಶೇಷ ಬಹುಮಾನ ಇರಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಬೆಳಿಗ್ಗೆಯಿಂದ ಸಂಜೆವರೆಗೂ ನಡೆಯಲಿರುವ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿದೆ. ಕರಂಗೋಲು ನೃತ್ಯ, ಯಕ್ಷಗಾನ , ಕಾಲಿವುಡ್ ಸಮಕಾಲೀನ ನೃತ್ಯ , ಹುಲಿ ವೇಷ, ಮಾಂಕಳಿ ನಲಿಕೆ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.