ಹಿಂದುಳಿದ ವರ್ಗಗಳ ಆಯೋಗದ ಮೂಲ ಪ್ರತಿಯ ಕಳವು ಪ್ರಕರಣ
ಬೆಂಗಳೂರು: ಜನರಿಗೆ ಮಂಕುಬೂದಿಯನ್ನು ಎರಚುವ ಬದಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲ ಪ್ರತಿಯ ಕಳವು ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಲಿ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಈ ಸಂಬಂಧ ರಾಜ್ಯ ಸರ್ಕಾರವನ್ನು ಆಗ್ರಹ ಮಾಡಿರುವ ಅವರು, ಅವಧಿ ಪೂರ್ಣಗೊಂಡಿರುವ ಹಿಂದುಳಿದ ವರ್ಗಗಳ ಆಯೋಗದ ಅವಧಿಯನ್ನು ಅನಾವಶ್ಯಕವಾಗಿ ವಿಸ್ತರಿಸಿ ತೆರಿಗೆದಾರರ ಹಣವನ್ನು ಪೋಲು ಮಾಡುವ ಬದಲಿಗೆ ಜವಾಬ್ದಾರಿಯುತವಾಗಿ ವರ್ತಿಸಲಿ ಎಂದು ಟೀಕಿಸಿದ್ದಾರೆ.
ನವೆಂಬರ್ 25ರಿಂದ 2024ರ ಜನವರಿ ಅಂತ್ಯದವರೆಗೆ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕವಾಗಿರುವ ಸರಕಾರದ ಆದೇಶದ ಪ್ರತಿಯನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮಾಜವಾದಿ ಡೋಂಗಿತನ ಇದರಲ್ಲಿ ಬಯಲಾಗಿದೆ. ನವೆಂಬರ್ 24 ರಂದು ವರದಿ ಸಲ್ಲಿಸಲು ಅಧ್ಯಕ್ಷರು ತರಾತುರಿಯಲ್ಲಿ ಮುಂದಾಗಿದ್ದರು ಎಂದಿದ್ದಾರೆ.
ಮೂಲ ಪ್ರತಿಯೂ ಇಲ್ಲದೆ, ಸದಸ್ಯ ಕಾರ್ಯದರ್ಶಿಯ ಸಹಿಯೂ ಇಲ್ಲದೆ ಇದ್ದ ವರದಿಯ ನೈಜತೆಯನ್ನು ಯಾರು ಪ್ರಮಾಣೀಕರಿಸುವವರು? ಎಂದು ಅವರು ಪ್ರಶ್ನಿಸಿದ್ದಾರೆ.
ಈಗಾಗಲೇ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆಯೋಗದ ವರದಿ ಸ್ವೀಕಾರ ಹಾಗೂ ಅನುಷ್ಠಾನವನ್ನು ವಿರೋಧಿಸಿವೆ. ಅಲ್ಲದೆ, ಪ್ರಬಲ ಸಮುದಾಯಗಳಾದ ಒಕ್ಕಲಿಗರ ಹಾಗೂ ಲಿಂಗಾಯಿತ-ವೀರಶೈವ ಸಮುದಾಯಗಳು ಸಹ ವರದಿ ಅವೈಜ್ಞಾನಿಕವಾಗಿದ್ದು, ಸ್ವೀಕರಿಸಬಾರದು. ಹೊಸದಾಗಿ ವರದಿ ಸಿದ್ಧಪಡಿಸಬೇಕು ಎಂದು ಸರಕಾರದ ಮೇಲೆ ಒತ್ತಡ ಹೇರಿವೆ.