ಡಿಸೆಂಬರ್ ನಲ್ಲಿ ದೆಹಲಿಗೆ ಬರುವಂತೆ ಆಹ್ವಾನ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ನೇಮಕಾತಿಗೆ ಅಸಮಾಧಾನ ವ್ಯಕ್ತಪಡಿಸುತ್ತಿರುವ ಮಾಜಿ ಸಚಿವರಾದ ವಿ. ಸೋಮಣ್ಣ, ರಮೇಶ್ ಜಾರಕಿಹೊಳಿ ಮತ್ತಿತರರು ದೆಹಲಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.
ರಾಜ್ಯಾಧ್ಯಕ್ಷರ ನೇಮಕಾತಿ ನಂತರ ಪಕ್ಷದಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಬಗೆಹರಿಸಲು ವರಿಷ್ಠರು ಮಧ್ಯೆ ಪ್ರವೇಶಿಸಿದ್ದು, ಅಸಮಾಧಾನಗೊಂಡವರನ್ನು ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.
ನಿನ್ನೆ ರಾತ್ರಿ ಪಕ್ಷದ ಪ್ರಮುಖ ನಾಯಕರೊಬ್ಬರು ಸೋಮಣ್ಣ ಅವರನ್ನು ಸಂಪರ್ಕಿಸಿ ಪಂಚರಾಜ್ಯಗಳ ಚುನಾವಣೆ ಪ್ರಕಿಯೆ ಮುಗಿದ ನಂತರ ಡಿಸೆಂಬರ್ ಮೊದಲ ವಾರದಲ್ಲಿ ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದಾರೆ.
ಮೂರು ದಿನ ದೆಹಲಿ ಬಿಡಾರ
ವರಿಷ್ಠರ ಆಹ್ವಾನದ ಮೇರೆಗೆ ಸೋಮಣ್ಣ, ರಮೇಶ್, ಜಾರಕಿಹೊಳಿ ಅಲ್ಲದೆ, ಅರವಿಂದ ಲಿಂಬಾವಳಿ, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಮುಖಂಡರು ಡಿಸೆಂಬರ್ 7 ರಂದು ದೆಹಲಿಗೆ ತೆರಳಿ ಮೂರು ದಿನಗಳ ಕಾಲ ಅಲ್ಲಿಯೇ ಬಿಡಾರ ಹೂಡಿ ವರಿಷ್ಠರನ್ನು ಭೇಟಿಯಾಗಲಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದ ಆಶ್ರಯದಲ್ಲಿ ಡಿಸೆಂಬರ್ 6ರಂದು ಸೋಮಣ್ಣ ತಮ್ಮ ಕುಟುಂಬದ ವತಿಯಿಂದ ನಿರ್ಮಿಸಿರುವ ದಾಸೋಹ ಭವನವನ್ನು ಸಮರ್ಪಣೆ ಮಾಡಲಿದ್ದಾರೆ.
ಸಮಾರಂಭದ ನಂತರ ತಮ್ಮ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವ ಉದ್ದೇಶದಿಂದ ತಮ್ಮ ಬೆಂಬಲಿಗರು ಹಾಗೂ ಮುಖಂಡರ ಸಭೆ ಕರೆದಿದ್ದರು.
ವರಿಷ್ಠರಿಗೆ ಇದರ ಮನವರಿಕೆ ಆಗುತ್ತಿದ್ದಂತೆ ನಿನ್ನೆ ರಾತ್ರಿ ಸೋಮಣ್ಣ ಅವರನ್ನು ಸಂಪರ್ಕಿಸಿ, ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳದಂತೆ, ಸಮಸ್ಯೆ ಪರಿಹರಿಸಲು ತಾವುಗಳು ದೆಹಲಿಗೆ ಬರುವಂತೆಯೂ ಆಹ್ವಾನ ನೀಡಿದ್ದಾರೆ.
ದುಗುಡ–ದುಮ್ಮಾನ ವರಿಷ್ಠರ ಮುಂದಿಡುತ್ತೇವೆ
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ನಾವು ಹಿರಿಯರು, ನಮ್ಮದೇ ಆದ ಸೇವೆ, ಅನುಭವ, ಆಲೋಚನೆಗಳಿವೆ. ಎಲ್ಲವೂ ನಮ್ಮದೇ ಸರಿ ಎನ್ನಲಾಗದು. ನಮ್ಮಲ್ಲಿರುವ ದುಗುಡ-ದುಮ್ಮಾನ ವರಿಷ್ಠರ ಮುಂದಿಡುತ್ತೇವೆ. ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ನಮ್ಮ ಮುಂದಿನ ನಡೆ ಎಂದು ಮಾರ್ಮಿಕವಾಗಿ ನುಡಿದರು.
ಸೋಮಣ್ಣ ಮತ್ತು ರಮೇಶ್ ಜಾರಕಿಹೊಳಿ ಜೊತೆಗೆ ಬಸನಗೌಡ ಪಾಟೀಲ್ ಯತ್ನಾಳ್ ಕೈಜೋಡಿಸಿದ್ದು, ಇವರ ನಾಯಕತ್ವದಲ್ಲಿ ಯಡಿಯೂರಪ್ಪ ವಿರೋಧಿ ಬಣ ಡಿಸೆಂಬರ್ 7ರಂದು ದೆಹಲಿಗೆ ತೆರಳಲಿದೆ.
ವಿಜಯೇಂದ್ರ ನೇಮಕಾತಿ ಬಗ್ಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.
ಸೇಡಿನ ಮನೋಭಾವ ಹೊಂದಿರುವ ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ನಮ್ಮನ್ನು ರಾಜಕೀಯವಾಗಿ ತುಳಿಯಬಹುದು.
ನೀವು ರಕ್ಷಣೆಗೆ ಬರದಿದ್ದರೆ ನಮ್ಮ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಕೆಲವು ಅಂಕಿ-ಅಂಶಗಳನ್ನು ವರಿಷ್ಠರ ಮುಂದಿಡಲಿದ್ದಾರೆ. ಅಷ್ಟೇ ಅಲ್ಲ, ಪಕ್ಷದಲ್ಲಿ ಮುಂದೆ ನಮ್ಮ ಸ್ಥಾನಮಾನದ ಬಗ್ಗೆ ನೀವೇ ನಿರ್ಧಾರ ಕೈಗೊಳ್ಳಬೇಕು ಎಂದು ವಿನಂತಿಸಲಿದ್ದಾರೆ.
ಕೆಲವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸುವ ಕ್ಷೇತ್ರಗಳ ಟಿಕೆಟ್ ಪಡೆಯಲು ಒತ್ತಡ ಹಾಕಲಿದ್ದಾರೆ.
ವರಿಷ್ಠರು ತಮ್ಮ ಮನವಿಗೆ ಸ್ಪಂದಿಸದಿದ್ದರೆ, ಕೆಲವರು ರಾಜಕೀಯವಾಗಿ ತಟಸ್ಥವಾಗಿ ಉಳಿದರೆ ಮತ್ತೆ ಕೆಲವರು ಪಕ್ಷ ಬಿಡುವ ತೀರ್ಮಾನ ಕೈಗೊಳ್ಳಲಿದ್ದಾರೆ.
ವರಿಷ್ಠರನ್ನು ಭೇಟಿ ಮಾಡಲು ಡಿಸೆಂಬರ್ 7ರಂದು ಮೂರು ದಿನಗಳಿಗೆ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.
ಲೋಕಸಭಾ ಚುನಾವಣೆಗೂ ಮುನ್ನ ರಾಜಕೀಯ ನಿರ್ಧಾರ ಕೈಗೊಳ್ಳಲಿರುವ ಸೋಮಣ್ಣ ಇಂದು ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಬಳಿ ಚುನಾವಣೆಯಲ್ಲಿ ತಮಗಾದ ಸೋಲು ಮತ್ತು ನಂತರದ ಬೆಳವಣಿಗೆಯ ಬಗ್ಗೆ ಅಳಲು ತೋಡಿಕೊಂಡರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ನಮ್ಮ ಮನೆಯಲ್ಲಿ ಎರಡು ಗಂಟೆ ಕುಳಿತು ವರುಣಾದಿಂದ ಕಣಕ್ಕಿಳಿಯುವಂತೆ ಒತ್ತಡ ಹೇರಿದರು.
ಆದರೆ ನಾನು, ಗೋವಿಂದರಾಜ ಕ್ಷೇತ್ರ ಬಿಟ್ಟು ಹೊರಹೋಗಲು ಸಮ್ಮತಿಸಲಿಲ್ಲ. ನಂತರ ಪ್ರಧಾನಿ ಅವರು ತಮ್ಮನ್ನು ದೆಹಲಿಗೆ ಕರೆಸಿಕೊಂಡು ಸ್ಫರ್ಧೆ ಮಾಡುವಂತೆ ಸೂಚಿಸಿದರು.
ಅವರ ಮಾತಿಗೆ ತಲೆಬಾಗಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಚಿನ್ನದಂತಹ ಕ್ಷೇತ್ರ ಬಿಟ್ಟುಹೋಗಿದ್ದಕ್ಕೆ ಎರಡು ಕಡೆಯೂ ಸೋತೆ.
ಸೋಲಿಗೆ ನಮ್ಮ ಪಕ್ಷದ ಮುಖಂಡರು ಮತ್ತು ಸ್ವಜಾತಿಯವರೇ ಕಾರಣ. ಇದೆಲ್ಲಾ ಮಾಹಿತಿಯನ್ನು ವರಿಷ್ಠರಿಗೆ ನೀಡಿದ್ದೆ.ನನ್ನನ್ನು ಸೋಲಿಸಿದವರಿಗೆ ಪಕ್ಷದಲ್ಲಿ ಸ್ಥಾನಮಾನ ಸಿಕ್ಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.