ಕಾಂಗ್ರೆಸ್ ಗೆ 20 ಲೋಕಸಭೆ ಕ್ಷೇತ್ರಗಳ ಗೆಲುವಿನ ಗುರಿ
ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 20 ಕ್ಷೇತ್ರಗಳಲ್ಲಿ ಜಯಗಳಿಸಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ಗೆ ಸಮರ್ಥ ಅಭ್ಯರ್ಥಿಗಳಿಲ್ಲದೆ, ಹೊಸ ತಲೆನೋವು ಕಾಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ, ಚಾಮರಾಜನಗರ, ಮೈಸೂರು-ಕೊಡಗು ಲೋಕಸಭೆ ಕ್ಷೇತ್ರವೂ ಸೇರಿದಂತೆ ರಾಜ್ಯದ 15 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೊರತುಪಡಿಸಿದರೆ, ಉಳಿದ 27 ಕ್ಷೇತ್ರಗಳನ್ನು ಕಾಂಗ್ರೆಸ್ ಕಳೆದುಕೊಂಡಿತ್ತು.
ಆಗ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದ್ದ ಕಾಂಗ್ರೆಸ್ ಗೆದ್ದಿದ್ದು ಒಂದೇ ಒಂದು ಕ್ಷೇತ್ರ. ಹಾಗೆಯೇ ಜೆಡಿಎಸ್ ಕೂಡ ಹಾಸನ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿ ಉಳಿದೆಡೆ ಪರಾಭವಗೊಂಡಿತ್ತು.ಆದರೆ, ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಹೊಸ ಇತಿಹಾಸ ಸೃಷ್ಟಿಸಿತ್ತು.
ಮತದಾನದ ಪ್ರಮಾಣ ಹೆಚ್ಚಳಕ್ಕೆ ಆಸಕ್ತಿ
ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಅದೇ ಅಂಕಿ-ಅಂಶಗಳ ಆಧಾರದ ಮೇಲೆ ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದು, ವರಿಷ್ಠರಿಂದ ಸಬ್ಬಾಶ್ ಗಿರಿ ಗಿಟ್ಟಿಸಿಕೊಳ್ಳಲು ಮುಂಚೂಣಿ ನಾಯಕರು ಹರ ಸಾಹಸ ನಡೆಸಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರವಷ್ಟೇ ಅಲ್ಲ, ಮಂಡ್ಯ, ಹಾಸನ, ಚಾಮರಾಜನಗರ, ಕೋಲಾರ, ತುಮಕೂರು, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ವಿಜಾಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ಹಾವೇರಿ, ರಾಯಚೂರು ಸೇರಿದಂತೆ 15 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಲ್ಲ.
ಕೆಲವೆಡೆ ಅಭ್ಯರ್ಥಿಗಳಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಬಿಜೆಪಿ ಹಾಗೂ ಜೆಡಿಎಸ್ ನಿಂದ ವರ್ಚಸ್ವಿ ಹಾಗೂ ಪ್ರಭಾವಿ ಮುಖಂಡರನ್ನು ಸೆಳೆಯುವ ಪ್ರಯತ್ನ ತೆರೆಮರೆಯಲ್ಲಿ ನಡೆದಿತ್ತು. ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕಗೊಂಡಿರುವುದು ಇದಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
ಹಿಂದೆ ಸರಿದ ಬಿಜೆಪಿ-ಜೆಡಿಎಸ್ ಮುಖಂಡರು
ಕಾಂಗ್ರೆಸ್ ಸೇರಲು ಮೊದಲು ಆಸಕ್ತಿ ತೋರಿದ್ದ ವಿರೋಧ ಪಕ್ಷಗಳ ಮುಖಂಡರು ತಮ್ಮ ಪಕ್ಷಗಳಲ್ಲಾದ ಬೆಳವಣಿಗೆಯಿಂದ ಹಿಂದಕ್ಕೆ ಸರಿದಿದ್ದಾರೆ. ಸಚಿವರ ಉಸ್ತುವಾರಿಯಲ್ಲಿ ಪ್ರತಿ ಕ್ಷೇತ್ರಕ್ಕೆ ಸಮಿತಿಗಳನ್ನು ನೇಮಕ ಮಾಡಿದ್ದರೂ ಅವರಿಂದಲೂ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯವಾಗಿಲ್ಲ.
ಕೆಲವು ಜಿಲ್ಲೆಗಳಿಂದ ಈಗಾಗಲೇ ಅಭ್ಯರ್ಥಿಗಳ ಬಗ್ಗೆ ವರದಿ ಬಂದಿದ್ದರೂ ಆ ವರದಿ ರಾಜ್ಯ ನಾಯಕರಿಗೆ ತೃಪ್ತಿ ತಂದಿಲ್ಲ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂದೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ವರಿಷ್ಠರು ನೀಡಿರುವ ಗುರಿ ಮುಟ್ಟಲೇಬೇಕಾದ ಸವಾಲಿದೆ.
ಆದರೆ, ಅನ್ಯ ಪಕ್ಷಗಳಿಂದ ಮುಖಂಡರನ್ನು ಕರೆ ತರುವ ಯತ್ನ ಸದ್ಯಕ್ಕೆ ವಿಫಲವಾದದ್ದು ಅವರ ಕೈ ಕಟ್ಟಿ ಹಾಕಿದಂತಾಗಿದೆ. ಇಷ್ಟರ ನಡುವೆಯೂ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಿಕೊಂಡು ಗುರಿ ಮುಟ್ಟಲು ಬಿಜೆಪಿ, ಜೆಡಿಎಸ್ ನ ಎರಡು-ಮೂರನೇ ಹಂತದ ನಾಯಕರನ್ನು ಪ್ರತಿವಾರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ.
ಆದರೂ ತಮಗೆ ನೀಡಿರುವ ಗುರಿ ಮುಟ್ಟಲು ಮಾತ್ರ ಸಾಧ್ಯವಾಗಿಲ್ಲ. ಇದಕ್ಕಾಗಿ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಮುಂದೆ ಯಾವ ಕಾರ್ಯತಂತ್ರ ರೂಪಿಸುತ್ತಾರೋ ಎಂಬುದನ್ನು ಕಾದುನೋಡಬೇಕು.