ಮುಖ್ಯಮಂತ್ರಿಗಳ ಪ್ರಥಮ ಜನತಾ ದರ್ಶನ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಥಮ ಜನತಾ ದರ್ಶನ ಮುಖ್ಯಮಂತ್ರಿಗಳ ಗೃಹ ಕಛೇರಿಯಾದ ಕೃಷ್ಣಾದಲ್ಲಿ ಆಯೋಜಿಸಲಾಗಿತ್ತು.
ಸಾರ್ವಜನಿಕರು ವೈಯಕ್ತಿಕ ದೂರುಗಳನ್ನು ಜನತಾ ದರ್ಶನದಲ್ಲಿ ಮುಖ್ಯಮಂತ್ರಿಗಳ ಮುಂದೆ ತೋಡಿಕೊಂಡರು.
ಹೀಗಾಗಿ ದೊರೆಯ ಮುಂದೆ ಜನರ ದೂರುಗಳ ಸುರಿಮಳೆಯಾಯಿತು. ಜಮೀನು, ನಿವೇಶನ, ಮನೆ, ಆಸ್ತಿ, ಆರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.
ರಾಜ್ಯದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಸ್ಥಳದಲ್ಲೇ ಹಾಜರಿದ್ದು ಕುಂದುಕೊರತೆ/ಅಹವಾಲುಗಳ ಮೇಲೆ ಕ್ರಮವಹಿಸಲು ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ಖುದ್ದಾಗಿ/ಮನೆಯಲ್ಲೇ ಕುಳಿತು ಕುಂದುಕೊರತೆ/ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಮನೆಯಲ್ಲೇ ಕುಳಿತು ಕುಂದುಕೊರತೆ/ಅಹವಾಲು ದಾಖಲಿಸಲು ಅನುವಾಗುವಂತೆ ಪ್ರತ್ಯೇಕ ಕ್ಯೂಆರ್ ಕೋಡ್ ಸೃಜಿಸಲಾಗಿದೆ. ಇದನ್ನು ಸ್ಕಾನ್ ಮಾಡಿ ಕುಂದುಕೊರತೆ/ಅಹವಾಲುಗಳನ್ನು ಸಲ್ಲಿಸಬಹುದು. ಇದನ್ನು ಮಾನ್ಯ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿಯೇ ಸ್ವೀಕೃತವಾದ ಅಹವಾಲೆಂದು ಪರಿಗಣಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ದಾಖಲು
ಸಾರ್ವಜನಿಕರಿಂದ ಮುದ್ದಾಂ/ಆನ್‌ಲೈನ್ ನಲ್ಲಿ ಸ್ವೀಕೃತವಾಗುವ ಕುಂದುಕೊರತೆ/ಅಹವಾಲುಗಳನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ದಾಖಲಿಸಿ, ಸ್ವೀಕೃತಿಯನ್ನು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರ್ವಜನಿಕರು ಸ್ವೀಕೃತಿ ಸಂಖ್ಯೆ ಬಳಸಿ ತಮ್ಮ ಕುಂದುಕೊರತೆ/ಅಹವಾಲಿನ ಸ್ಥಿತಿಗತಿಯನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ಅಥವಾ 1902 ಸಂಖ್ಯೆಗೆ ಕರೆಮಾಡಿ ತಿಳಿದುಕೊಳ್ಳಬಹುದು.
ಸ್ವೀಕರಿಸಲಾದ ಕುಂದುಕೊರತೆ/ಅಹವಾಲುಗಳನ್ನು ವಿಷಯದ ಆಧಾರದಲ್ಲಿ ಸಂಬಂಧಿಸಿದ ಇಲಾಖೆಗಳ/ಅಧೀನ ಸಂಸ್ಥೆಗಳ ಅಧಿಕಾರಿಗಳ ಲಾಗಿನ್‌ಗಳಿಗೆ ತಕ್ಷಣ ರವಾನಿಸಲಾಗುತ್ತದೆ. ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸ್ವೀಕೃತವಾದ ಕುಂದುಕೊರತೆ/ಅಹವಾಲುಗಳನ್ನು ಸ್ವಯಂಚಾಲಿತವಾಗಿ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಇ-ಆಫೀಸ್ ಲಾಗಿನ್‌ಗೆ ಕಳುಹಿಸುವ ವ್ಯವಸ್ಥೆ ಅಳವಡಿಸಲಾಗಿದೆ.
ಇ-ಆಫೀಸ್‌ನಲ್ಲಿ ಕಡತ ವಿಲೇವಾರಿ
ಇ-ಆಫೀಸ್‌ನಲ್ಲಿ ಸದರಿ ಕಡತದ ಪ್ರತಿ ಹಂತದ ಚಲನೆಯನ್ನು API ಮೂಲಕ ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಗೆ ಒದಗಿಸಲಾಗುತ್ತದೆ.
ಸ್ವೀಕೃತವಾದ ಅಹವಾಲುಗಳ ಪ್ರಗತಿ ಪರಿಶೀಲಿಸಲು ಪ್ರತ್ಯೇಕ ಡಾಶ್‌ಬೋರ್ಡ್ ಅಭಿವೃದ್ದಿಪಡಿಸಲಾಗಿದೆ. ಈ ಡ್ಯಾಶ್‌ಬೋರ್ಡ್‌ನಲ್ಲಿ ಇಲಾಖಾ/ಜಿಲ್ಲಾವಾರು ಸ್ವೀಕೃತವಾದ ಕುಂದುಕೊರತೆ ಮತ್ತು ಅಹವಾಲುಗಳ ಸಂಖ್ಯೆ, ವಿಲೇ ಮಾಡಲಾದ ಮತ್ತು ಬಾಕಿ ಉಳಿದಿರುವ ಕುಂದುಕೊರತೆ ಮತ್ತು ಅಹವಾಲುಗಳ ವಿವರ ಲಭ್ಯವಿದೆ.