ಗ್ಯಾರಂಟಿ ಅನುಷ್ಠಾನಕ್ಕೆ ಸರ್ಕಾರದ ಬಳಿ ಹಣವಿಲ್ಲ
ಬೆಂಗಳೂರು: ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದ್ದು ಹಣಕಾಸಿನ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡುವಂತೆ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಗ್ಯಾರೆಂಟಿ ಯೋಜನೆಗಳ ಪೈಕಿ ವಿದ್ಯುತ್, ಗೃಹಲಕ್ಷ್ಮಿ, ಬಿಪಿಎಲ್ ಕುಟುಂಬದ ಪ್ರತಿ ಯೂನಿಟ್‌ಗೆ 10ಕೆ.ಜಿ. ಅಕ್ಕಿ ಜಾರಿ ಅರೆಬರೆಯಾಗಿದ್ದು, ಭರವಸೆಗಳ ಈಡೇರಿಕೆಗೆ ಸರ್ಕಾರದ ಬಳಿ ಹಣ ಇಲ್ಲದಂತಾಗಿದೆ.
ಸಂವೇದನಾ ರಹಿತ ಸರ್ಕಾರ
ರಾಜ್ಯದ ಬೊಕ್ಕಸ ಬರಿದಾಗಿದೆ, ಬರಗಾಲದಿಂದ ತತ್ತರಿಸುತ್ತಿರುವ ರೈತರಿಗೆ ಪರಿಹಾರ ನೀಡಲು ಸಾಧ್ಯವಾಗದೆ ಕೇಂದ್ರದತ್ತ ಬೊಟ್ಟು ತೋರಿಸಲಾಗುತ್ತಿದೆ, ಇದು ಸಂವೇದನಾ ರಹಿತ ಸರ್ಕಾರವಾಗಿದೆ ಎಂದರು.
ಬರಪೀಡಿತ ಅನೇಕ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಸಂದರ್ಭದಲ್ಲಿ ಸರ್ಕಾರದ ನಿಜಬಣ್ಣ ಬಯಲಾಗಿದೆ, ಜನ ಸಂಕಷ್ಟದಲ್ಲಿದ್ದರೂ ತನಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ಕಂಡುಬಂದಿತು.
ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುವ ಮೊದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಏನೆಂಬುದನ್ನು ಸ್ಪಷ್ಟಪಡಿಸಲಿ.
ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಂದ್ರದ ನೆರವಿಗೆ ಕಾಯದೆ ರೈತರ ಸಂಕಷ್ಟಕ್ಕೆ ಧಾವಿಸಿದ್ದೆವು. ಎನ್‌ಡಿಆರ್‌ಎಫ್ ಮಾರ್ಗಸೂಚಿಗಿಂತ ದುಪ್ಪಟ್ಟು ಪರಿಹಾರ ನೀಡಿದ್ದೆವು. ನಂತರ ಕೇಂದ್ರದ ನೆರವು ಖಜಾನೆಗೆ ಬಂತು.
ಕೊಳವೆ ಬಾವಿ ಕೊರೆಸಲು, ಜಾನುವಾರುಗಳಿಗೆ ಮೇವು ಖರೀದಿಸಲು ಆದೇಶ ಹೊರಡಿಸಿಲ್ಲ. ಕೊಳವೆ ಬಾವಿಗಳಿಗೆ ಆದ್ಯತೆ ಮೇರೆಗೆ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ.
ಎಲ್ಲದಕ್ಕೂ ಲಂಚ ಕೊಡಬೇಕು, ಇಲ್ಲದಿದ್ದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ರೈತರು ದೂರು ನೀಡುತ್ತಿದ್ದಾರೆ ಎಂದರು.
ಬರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎನ್ನುತ್ತಾರೆ, ನಿಜವೇ ಆಗಿದ್ದಲ್ಲಿ ತಕ್ಷಣ ಹಣ ಬಿಡುಗಡೆ ಮಾಡಲಿ.
ಜನತಾದರ್ಶನ ಕಾರ್ಯ ’ಬೋಗಸ್ ದರ್ಶನ’
ಮುಖ್ಯಮಂತ್ರಿಯವರ ಜನತಾದರ್ಶನ ಕಾರ್ಯ ’ಬೋಗಸ್ ದರ್ಶನ’ ಎಂದು ಲೇವಡಿ ಮಾಡಿದ ಅವರು, ಕೆಲಸ ಮಾಡದ ಮಂತ್ರಿಗಳನ್ನು ಕರೆಯಿಸಿ ಮೊದಲು ಅವರ ದರ್ಶನ ಮಾಡಬೇಕಿತ್ತು ಎಂದು ಲೇವಡಿ ಮಾಡಿದರು.
ಸೀಮಿತ ಸಂಖ್ಯೆ ಜನರ ಅಹವಾಲು ಕೇಳಿದರೆ ಏನು ಪ್ರಯೋಜನ, ದಿಢೀರ್ ಜನತಾದರ್ಶನ ಮಾಡುತ್ತಿದ್ದಾರೆ, ದೀರ್ಘ ಕಾಲದ ನಿದ್ದೆಯಿಂದ ಈಗ ಎದ್ದಿದ್ದಾರೆ.
ಸಂಪುಟದ ಸಚಿವರು ತೆಲಂಗಾಣ ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಕ್ರಾಂತಿ ಆಗಿದೆ ಎಂದು ಬುರುಡೆ ಭಾಷಣ ಬಿಗಿಯುತ್ತಿದ್ದಾರೆ. ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಡಿದಿರುವ ಬರಗಾಲ ನಿವಾರಣೆಗಾಗಿ ಸಿದ್ದರಾಮಯ್ಯ ಎಲ್ಲಾ ಸಚಿವರನ್ನು ಅಲ್ಲಿಗೆ ನಿಯೋಜಿಸಿದ್ದಾರೆ. ಇಲ್ಲಿ ಜನ ತತ್ತರಿಸುತ್ತಿದ್ದರೂ ಕೇಳುವವರು ದಿಕ್ಕಿಲ್ಲ ಎಂದು ಕಿಡಿಕಾರಿದರು.