ಇಡೀ ದಿನ ದುಃಖ-ದುಮ್ಮಾನ ಆಲಿಸಿ, ಸ್ಥಳದಲ್ಲೇ ಪರಿಹಾರ
ಬೆಂಗಳೂರು:ಸಚಿವರು, ಜಿಲ್ಲಾಧಿಕಾರಿಗಳು ಕೆಳಹಂತದ ಸಿಬ್ಬಂದಿ ಜನರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ವೃದ್ಧಾಪ್ಯವೇತನ ಸೇರಿದಂತೆ ಅನೇಕ ಸಣ್ಣ-ಪುಟ್ಟ ಅಹವಾಲುಗಳನ್ನು ಪರಿಹರಿಸುವ ಸ್ಥಿತಿ ಇಂದು ಎದುರಾಯಿತು.
ಆರು ತಿಂಗಳ ಮಗುವಿನಿಂದ ಹಿಡಿದು 97 ವರ್ಷದ ವೃದ್ಧರೂ ಕಿಲೋ ಮೀಟರ್ವರೆಗೆ ಸರದಿ ಸಾಲಿನಲ್ಲಿ ನಿಂತು ಮುಖ್ಯಮಂತ್ರಿ ಅವರ ಬಳಿ ಸಮಸ್ಯೆ ಬಗೆಹರಿಸಿಕೊಂಡರು.
ಪಂಚಾಯತ್ ಕಾರ್ಯದರ್ಶಿಗಳು ಮಾಡಬೇಕಾದ ಸಣ್ಣ-ಪುಟ್ಟ ಕೆಲಸವನ್ನೂ ಮುಖ್ಯಮಂತ್ರಿ ಅವರೇ ಖುದ್ದಾಗಿ ಆದೇಶ ಮಾಡುವ ಮೂಲಕ ಜನತಾ ದರ್ಶನದಲ್ಲಿ ಸ್ಪಂದಿಸಿದರು.
ತಾವು ಅಧಿಕಾರಕ್ಕೆ ಬಂದ ನಂತರ ಮುಖ್ಯಮಂತ್ರಿ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ಕಾರದ ಎಲ್ಲಾ ಕಾರ್ಯದರ್ಶಿಗಳ ಜೊತೆಗೂಡಿ, ಬೀದರ್ನಿಂದ ಚಾಮರಾಜನಗರದವರೆಗೂ ಬಂದಿದ್ದ ಜನರ ದುಃಖ-ದುಮ್ಮಾನಗಳನ್ನು ಆಲಿಸಿ, ಸ್ಥಳದಲ್ಲೇ ಪರಿಹರಿಸಿದರು.
ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ತಾಕೀತು
ಸ್ಥಳದಲ್ಲೇ ಪರಿಹಾರ ಒದಗಿಸದಲಾಗದ ಅರ್ಜಿಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಮಯ ನಿಗದಿ ಪಡಿಸಿ ಪರಿಹರಿಸಿ ತಮ್ಮ ಗಮನಕ್ಕೆ ತರುವಂತೆ ಆದೇಶಿಸಿದರು.
ಕೆಲವು ಸಮಸ್ಯೆಗಳಿಗೆ ಸಂಜೆ ವೇಳೆಗೆ ಪರಿಹಾರ ದೊರಕಿಸಿ ತಮ್ಮ ಸಚಿವಾಲಯಕ್ಕೆ ತಿಳಿಸುವಂತೆ ಕಟುನಿಟ್ಟಿನ ಆದೇಶ ಮಾಡಿದರು.
ಅರ್ಜಿಗಳ ಸ್ವೀಕಾರಕ್ಕೆ ಪ್ರತ್ಯೇಕ 20 ಕೌಂಟರ್ಗಳನ್ನು ನಿರ್ಮಿಸಿ, ಅಲ್ಲಿಗೆ ಬಂದಂತಹವರ ಸಮಸ್ಯೆಗಳನ್ನು ಮುಖ್ಯಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಬಗೆಹರಿಸುವ ವ್ಯವಸ್ಥೆ ಮಾಡಲಾಗಿತ್ತು.
ಇದೇ ಕಾಲಕ್ಕೆ ಜಿಲ್ಲಾಧಿಕಾರಿಗಳೂ ಸೇರಿದಂತೆ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಜನತಾ ದರ್ಶನ ಮುಗಿಯುವವರೆಗೂ ತಮ್ಮ ಕಚೇರಿಯಲ್ಲೇ ಇದ್ದು, ಮುಖ್ಯಮಂತ್ರಿ ಹಾಗೂ ಹಿರಿಯ ಅಧಿಕಾರಿಗಳು ನೀಡುವ ಆದೇಶವನ್ನು ಪಾಲಿಸುವಂತಹ ಏರ್ಪಾಡು ಮಾಡಿದ್ದರು.
ವೃದ್ಧಾಪ್ಯವೇತನವಲ್ಲದೆ, ಜಾತಿ ಪ್ರಮಾಣಪತ್ರ, ಮನೆ ಮಂಜೂರು, ಭೂ ತಕರಾರು, ವಿಕಲಚೇತನರ ಸಮಸ್ಯೆ, ಅನಾರೋಗ್ಯ ಪೀಡಿತರು ತಮ್ಮ ಅಹವಾಲು ಮತ್ತು ದೂರುಗಳನ್ನು ಮುಖ್ಯಮಂತ್ರಿ ಬಳಿ ತೋಡಿಕೊಂಡರು.
ಕೆಂಡಾಮಂಡಲವಾದ ಮುಖ್ಯಮಂತ್ರಿ
ಒಂದು ಸಣ್ಣ ಸಮಸ್ಯೆಯನ್ನು ಬಗೆಹರಿಸದ ಜಿಲ್ಲಾಡಳಿತದ ಬಗ್ಗೆ ಕೆಲವೊಮ್ಮೆ ಕೆಂಡಾಮಂಡಲವಾದ ಮುಖ್ಯಮಂತ್ರಿ ಅವರು, ಇಂತಹವುಗಳನ್ನು ಸ್ಥಳದಲ್ಲಿಯೇ ಪರಿಹರಿಸಿಕೊಟ್ಟರು.
ಪಂಚಾಯತ್ ಮತ್ತು ಕಂದಾಯ ಇಲಾಖೆ ಕಾರ್ಯದರ್ಶಿಗಳು ನಮ್ಮ ಸಮಸ್ಯೆ ಬಗೆಹರಿಸದ ಕಾರಣ ನೂರಾರು ಕಿಲೋ ಮೀಟರ್ ದೂರದಿಂದ ಬಂದಿದ್ದೇವೆ ಎಂಬ ಅಳಲನ್ನು ಜನರು ತೋಡಿಕೊಂಡರು.
ಮುಖ್ಯಮಂತ್ರಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೇ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅನೇಕ ಬಾರಿ ಕಟ್ಟಾದೇಶ ಮಾಡಿದ್ದರೂ ಅದನ್ನು ಪಾಲನೆ ಮಾಡಿರಲಿಲ್ಲ ಎಂಬುದು ಇಂದಿನ ಜನತಾ ದರ್ಶನದಲ್ಲಿ ಬಿಂಬಿತಗೊಂಡಿತು.
ಬೀದಿ ಬದಿ ವ್ಯಾಪಾರಿಗಳಿಗೆ ಪೊಲೀಸರ, ಅಧಿಕಾರಿಗಳು ಕಿರುಕುಳ
ಬೀದಿ ಬದಿ ವ್ಯಾಪಾರಿಗಳಿಗೆ ಪೊಲೀಸರು ಮತ್ತು ಅಧಿಕಾರಿಗಳು ಕಿರುಕುಳ ನೀಡುತ್ತಾರೆ ಇದನ್ನು ತಪ್ಪಿಸಿ ಎಂದು ವೃದ್ಧ ವ್ಯಾಪಾರಿ ಮಹಿಳೆಯೊಬ್ಬರು ಅವಲತ್ತುಕೊಂಡರು.
ಮತ್ತೆ ಕೆಲವರು ಮನೆ ಕಂದಾಯ ಕಟ್ಟಿದರೂ ಸ್ಥಳೀಯ ಸಂಸ್ಥೆಗಳು ದಂಡ ವಿಧಿಸುತ್ತಿವೆ, ಈ ಬಗ್ಗೆ ಕೇಳಲು ಹೋದರೆ ಅಧಿಕಾರ ದರ್ಪದಿಂದ ವರ್ತಿಸುತ್ತಾರೆ ಎಂಬ ದೂರು ಕೇಳಿಬಂದಿತು.
ತರಬೇತಿ ಪಡೆದಿದ್ದರೂ ವಿಕಲಚೇತನರಿಗೆ ಮೂರು ಚಕ್ರಗಳ ವಾಹನ ನೀಡುತ್ತಿಲ್ಲ. ಹುಣಸೂರಿನ ಕಲ್ಲಳ್ಳಿ ಪಂಚಾಯತ್ನ ಅಲೆಮಾರಿ ಡೋಂಗ್ರಿ ಗೆರೆಸಿಯಾ ಸಮುದಾಯದವರಿಗೆ 40 ಮನೆ ಮಂಜೂರಾಗಿವೆ, ಮನೆ ಕಟ್ಟಲು ಅವಕಾಶ ನೀಡಿ.
ಅಧಿಕಾರಿಗಳು ಮತ್ತು ಪೊಲೀಸರು ಗೂಂಡಾಗಳ ಜೊತೆ ಶಾಮೀಲಾಗಿ ನಮ್ಮ ಭೂಮಿ ಹೊಡೆಯಲು ಯತ್ನ ಮಾಡುತ್ತಿದ್ದಾರೆ ಎಂದರೆ, ಮತ್ತೆ ಕೆಲವರು ನಮ್ಮ ಭೂಮಿಯನ್ನು ಸಂಬಂಧಿಕರೇ ಒತ್ತುವರಿ ಮಾಡಿಕೊಂಡಿದ್ದಾರೆ ಬಿಡಿಸಿಕೊಡಿ ಎಂದು ಅಹವಾಲು ಸಲ್ಲಿಸಿದರು.
ಮಾರಣಾಂತಿಕ ರೋಗಗಳ ಚಿಕಿತ್ಸೆಯ ಪರಿಹಾರಕ್ಕೆ ಮೊರೆ
ಹೃದಯ, ಹೃದಯ ಬೇನೆ, ಕಿಡ್ನಿ, ಅಂಗವೈಕಲ್ಯ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಮತ್ತು ಪರಿಹಾರಕ್ಕೆ ಮಾಡಿದ ಮನವಿಗಳಿಗೆ ಮುಖ್ಯಮಂತ್ರಿ ಸ್ಥಳದಲ್ಲೇ ಸ್ಪಂದಿಸಿದರು.
ಬೆಳಗಿನಿಂದ ಸಂಜೆವರೆಗೂ ಸಾವಿರಾರು ಮಂದಿ ಸರದಿ ಸಾಲಿನಲ್ಲಿ ನಿಂತು ದೊರೆಗೆ ತಮ್ಮ ಕಷ್ಟಕೋಟಲೆಗಳನ್ನು ಹೇಳಿಕೊಂಡು ಪರಿಹಾರಕ್ಕೆ ಬೇಡಿಕೊಂಡರು.
ಎಲ್ಲಾ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಅಧಿಕಾರಿಗಳು ಆಲಿಸಿ, ಇವುಗಳಲ್ಲಿ ಕೆಲವನ್ನು ಸ್ಥಳದಲ್ಲೇ ಪರಿಹರಿಸಿದರೆ, ಇನ್ನು ಕೆಲವನ್ನು ಪರಿಹರಿಸಲು ಅಧಿಕಾರಿಗಳಿಗೆ ಗಡುವು ನೀಡಿದರು.
ಮುಖ್ಯಮಂತ್ರಿಗಳವರ ಗಮನಕ್ಕೆ ತರಲಾದ ಅಹವಾಲುಗಳಲ್ಲಿ ಕೆಲವು ಹೀಗಿವೆ
ಮೈಸೂರು ರಸ್ತೆಯ ಬ್ಯಾಟರಾಯನಪುರದ 3ನೇ ಅಡ್ಡ ರಸ್ತೆಯಲ್ಲಿ ರಾಜೇಶ್ವರಿ ಮಲ್ಲೇಶ್ ಎಂಬುವರ ಮನೆಯಲ್ಲಿ ಭೋಗ್ಯಕ್ಕೆ ನೆಲೆಸಿರುವ ನಿವಾಸಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನೆ ಮಾಲೀಕರು ನಾಪತ್ತೆಯಾಗಿದ್ದು, ಬ್ಯಾಂಕ್ನವರು ಮನೆ ಜಪ್ತಿಗೆ ಬಂದಿದ್ದಾರೆ. ನಾವು ಈ ಮನೆಗೆ ಲೀಸ್ಗೆ ಬಂದಿದ್ದೇವೆ.
ಆದರೆ, ಮನೆ ಮಾಲೀಕರು ಮನೆಯ ಮೇಲೆ ಸಾಲ ಪಡೆದು ಅದನ್ನು ಕಟ್ಟದೆ ಪರಾರಿ ಆಗಿದ್ದಾರೆ. ಈಗ ಬ್ಯಾಂಕ್ನವರು ಮನೆ ಜಪ್ತಿಗೆ ಬಂದಿದ್ದಾರೆ. ನಮ್ಮ ಲೀಸ್ ಹಣವೂ ಹೋಗುತ್ತದೆ ಎಂದು ಗೋಳು ತೋಡಿಕೊಂಡರು. ತಾವು ಹಾಕಿದ ಹಣ ಕಳೆದುಕೊಳ್ಳುವ ಭೀತಿಯಲ್ಲಿದ್ದೇವೆ. ಮಕ್ಕಳೊಂದಿಗೆ ಬೀದಿಗೆ ಬರುವ ಸ್ಥಿತಿ ಇದೆ, ನೆರವು ನೀಡಿ ಎಂದು ಮನವಿ ಮಾಡಿದರು.
ತಕ್ಷಣ ನಗರ ಪೊಲೀಸ್ ಕಮಿಷನರ್ ದಯಾನಂದ್ ಅವರನ್ನು ಕರೆದ ಮುಖ್ಯಮಂತ್ರಿಗಳು ಪ್ರಕರಣ ಪರಿಶೀಲಿಸುವಂತೆ ಸೂಚಿಸಿದರು.
ಪೊಲೀಸ್ ಆಯುಕ್ತ ದಯಾನಂದ್ ಅವರು ಸಮಗ್ರವಾಗಿ ಸಮಸ್ಯೆ ಕೇಳಿಸಿಕೊಂಡು ಪರಿಹಾರಕ್ಕೆ ಡಿಸಿಪಿ ಅವರಿಗೆ ಸೂಚಿಸಿದರು.
ಶಿಕ್ಷಕರ ನೇಮಕಾತಿಯಲ್ಲಿ ಸುಮಾರು 1800 ವಿವಾಹಿತ ಮಹಿಳಾ ಅಭ್ಯರ್ಥಿಗಳು ತಂದೆಯ ಜಾತಿ ಹಾಗೂ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು. ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಈ ವಿವಾಹಿತ ಮಹಿಳೆಯರ ಜಾತಿ ಮೀಸಲಾತಿಯನ್ನು ರದ್ದುಗೊಳಿಸಿ ಸಾಮಾನ್ಯ ವರ್ಗಕ್ಕೆ ಸೇರಿಸಿರುತ್ತಾರೆ.
ತಾವು ನೇಮಕಾತಿ ಅಧಿಸೂಚನೆಯನ್ವಯ ಮಾಹಿತಿಯನ್ನು ಭರ್ತಿ ಮಾಡಿದ್ದು, ಅದರಲ್ಲಿ ಕೇವಲ ಆರ್.ಡಿ. ಸಂಖ್ಯೆಯನ್ನು ಮಾತ್ರ ನಮೂದಿಸಲು ಅವಕಾಶವಿದೆ. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ತಮ್ಮನ್ನು ಮೀಸಲಾತಿಯಿಂದ ಹೊರಗಿಟ್ಟು, ಸಾಮಾನ್ಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದು, ಇದನ್ನು ಸರಿಪಡಿಸುವಂತೆ ಕೆಲವು ಅಭ್ಯರ್ಥಿಗಳು ಮನವಿ ಸಲ್ಲಿಸಿದರು.
ಈ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ಬಗೆಹರಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಮುಷ್ತಾಕ್ ಅವರು ತಮಗೆ ಮಂಜೂರಾಗಿರುವ ನಿವೇಶನವನ್ನು ಬೇರೆಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದನ್ನು ಬಿಡಿಸಿಕೊಡುವಂತೆ ಮನವಿ ಮಾಡಿದರು.
ಈ ಕುರಿತು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪುಟ್ಟಸ್ವಾಮಿಗೆ ನೆರವು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಪುಟ್ಟಸ್ವಾಮಿ ಅವರು ಹೃದ್ರೋಗ ಚಿಕಿತ್ಸೆಗಾಗಿ ನೆರವು ನೀಡುವಂತೆ ಮನವಿ ಮಾಡಿದರು. ಮುಖ್ಯಮಂತ್ರಿಯವರು ನೆರವು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿದರು.
ಚಿಕ್ಕಮಗಳೂರು ಜಿಲ್ಲೆ ಕರ್ಕಿಪೇಟೆಯ ದಿನೇಶ್ ಎಂಬವವರು 40 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬಂದಿದ್ದು, ಸೆಕ್ಷನ್ 50, 53 ಹಾಗೂ 57 ರಡಿ ಸಕ್ರಮಗೊಳಿಸಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಕುರಿತು ಯಾವುದೇ ರೀತಿಯ ಕ್ರಮ ಆಗಿಲ್ಲ. ಸಾಗುವಳಿ ಚೀಟಿ ಒದಗಿಸುವಂತೆ ಮರು ಮನವಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಆನ್ಲೈನ್ ಮೂಲಕ ಮುಖ್ಯಮಂತ್ರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಸೂಚಿಸಿದರು.