ಪ್ರಥಮ ಹಂತದಲ್ಲಿ 20 ಕಾರ್ಗೋ ವಾಹನ
ಬೆಂಗಳೂರು: ಶಕ್ತಿ ಯೋಜನೆ ಜಾರಿಗೊಳಿಸಿದ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ಸರಕು ಸಾಗಣೆ ಮಾಡಲು ಕಾರ್ಗೋ ಸೇವೆ ಜಾರಿಗೊಳಿಸಲು ಮುಂದಾಗಿದೆ.
ಅತ್ಯಂತ ಕಡಿಮೆ ದರದಲ್ಲಿ ರಾಜ್ಯದ ಪ್ರಮುಖ ಮತ್ತು ನಗರಗಳಿಗೆ ಸರಕು ಸಾಗಾಣಿಕೆ ಮಾಡಲು ಮೊದಲ ಹಂತದಲ್ಲಿ 20 ಕಾರ್ಗೋ ವಾಹನಗಳನ್ನು ಸಿದ್ಧಗೊಳಿಸಲಾಗಿದೆ.
ಬೆಂಗಳೂರು ನಗರದಿಂದ ಮೈಸೂರು, ಮಡಿಕೇರಿ, ಚಾಮರಾಜನಗರ, ಮಂಗಳೂರು, ಉಡುಪಿ, ಬೀದರ್, ಕಲಬುರಗಿ, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ 31 ಪಾಲಿಕೆ ಮತ್ತು ಜಿಲ್ಲಾ ಕೇಂದ್ರಗಳಿಗೆ ಕಾರ್ಗೋ ಸೇವೆ ಒದಗಿಸಲಿದೆ.
ಒಂದು ನಗರದಿಂದ ಇನ್ನೊಂದು ನಗರಕ್ಕೆ ಸಂಚರಿಸುವ ನಡುವೆ ಬರುವ ತಾಲ್ಲೂಕು ಕೇಂದ್ರದಲ್ಲೂ ಈ ಸೇವೆ ಕಲ್ಪಿಸಲು ಉದ್ದೇಶಿಸಲಾಗಿದೆ. ರಾಜ್ಯದ ಎಲ್ಲಾ ಕೇಂದ್ರದ ಎಲ್ಲಾ ಬಸ್ ನಿಲ್ದಾಣ ಹಾಗೂ ಡಿಪೋಗಳಿದ್ದು, ಅಲ್ಲಿಂದಲೇ ಕಾರ್ಗೋ ಸಂಗ್ರಹ ಮತ್ತು ವಿತರಣೆ ಸೇವೆ ನಡೆಯಲಿದೆ.
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿಯನ್ನು ಕಾರ್ಗೋ ಸೇವೆಗೆ ಪ್ರಾಥಮಿಕ ಹಂತದಲ್ಲಿ ಬಳಸಿಕೊಳ್ಳಲಾಗುವುದು.
ಖಾಸಗಿ ಸಂಸ್ಥೆಗಳು ಪ್ರಯಾಣಿಕರ ಬಸ್ಸುಗಳಲ್ಲೇ ಸರಕು ಸಾಗಾಣಿಕೆ ಮಾಡಿ ಭಾರೀ ಆದಾಯ ಗಳಿಸುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡೇ ಬಸ್ ಮತ್ತು ಪ್ರತ್ಯೇಕ ಲಾರಿಗಳಲ್ಲಿ ಕಾರ್ಗೋ ಸೇವೆ ಆರಂಭಿಸುತ್ತಿದೆ.