ಸ್ಥಳದ ಅಭಾವವಿರುವ ಕಡೆ ಸಂಚಾರಿ ಕ್ಯಾಂಟೀನ್
ಬೆಂಗಳೂರು: ಜನರ ಅನುಕೂಲಕ್ಕಾಗಿ ಈ ವರ್ಷ ಹೆಚ್ಚುವರಿಯಾಗಿ 188 ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಶಾಸಕರ ಭವನ ಆವರಣದಲ್ಲಿ ಸಂತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ 225 ವಾರ್ಡ್ಗಳಲ್ಲಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗುವುದು, ಅಲ್ಲದೇ, ಅಗತ್ಯವಿರುವೆಡೆ ಕ್ಯಾಂಟೀನ್ ಪ್ರಾರಂಭಿಸಲಾಗುವುದು, ಇಂದಿರಾ ಕ್ಯಾಂಟೀನ್ಗೆ ಸ್ಥಳದ ಅಭಾವವಿರುವ ಕಡೆ ಮೊಬೈಲ್ ಕ್ಯಾಂಟೀನ್ಗಳನ್ನು ಸ್ಥಾಪಿಸಲಾಗುವುದು ಎಂದರು.
ಕನಕದಾಸರು-ಸಮಸಮಾಜದ ಕನಸು ಕಂಡಿದ್ದ ದಾಸಶ್ರೇಷ್ಠರು
ಕನಕದಾಸರು ಸಮಾಜ ಸುಧಾರಕರಾಗಿದ್ದರು, ಸಾಹಿತ್ಯದ ಮೂಲಕ ಮನುಷ್ಯತ್ವ ಸಾರಿದರು, ಜಾತ್ಯಾತೀತವಾದ, ಮೇಲು-ಕೀಳು ಬೇಧ-ಭಾವವಿಲ್ಲದ ಸಮಸಮಾಜ ನಿರ್ಮಿಸಲು ಶ್ರಮಿಸಿದ ವಿಶ್ವಮಾನವ. ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ದಾಸ ಸಾಹಿತ್ಯ ರಚಿಸಿದರು.
ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದರು. ಸಮಾಜದ ತಾರತಮ್ಯ ಹೋಗಲಾಡಿಸಲು ಹೋರಾಡಿದ ದಾಸಶ್ರೇಷ್ಠರ ದಿನವನ್ನು ಸರ್ಕಾರ ಇಂದು ಆಚರಿಸುತ್ತಿದೆ ಎಂದರು.